ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಭೀತಿ: ಮುಸ್ಲಿಮರ ಮತ ಮಮತಾಗೆ

Last Updated 17 ಮಾರ್ಚ್ 2019, 20:35 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋಮು ಗಲಭೆಗಳನ್ನು ತಡೆಯುವಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಯಶಸ್ವಿಯಾಗಿಲ್ಲ ಎಂಬ ಅತೃಪ್ತಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಇದೆ. ಹಾಗಿದ್ದರೂ ಬಿಜೆಪಿಯ ಮುನ್ನಡೆಯನ್ನು ತಡೆಯುವುದಕ್ಕಾಗಿ ಈ ಬಾರಿಯೂ ಅಲ್ಪಸಂಖ್ಯಾತ ಸಮುದಾಯವು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಬೆನ್ನಿಗೆ ನಿಲ್ಲಲಿದೆ ಎಂದು ರಾಜ್ಯದ ರಾಜಕೀಯ ಮುಖಂಡರು ಅಭಿಪ್ರಾಯಪಡುತ್ತಾರೆ.

ಬಿಜೆಪಿಯ ವಿರುದ್ಧ ಟಿಎಂಸಿ ಹೆಚ್ಚು ವಿಶ್ವಾಸಾರ್ಹ ಪಕ್ಷವೇ ಹೊರತು ಕಾಂಗ್ರೆಸ್‌ ಅಥವಾ ಸಿಪಿಎಂ ಅಲ್ಲ ಎಂದು ಅಲ್ಪಸಂಖ್ಯಾತ ಸಮುದಾಯ ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯ ಭಾವಿಸಿದೆ. ಇದು ಈ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮುಖಂಡರು ಹೇಳುತ್ತಿದ್ದಾರೆ.

ಕಾಂಗ್ರೆಸ್‌ ಮತ್ತು ಸಿಪಿಎಂ ನಡುವಣ ಹೊಂದಾಣಿಕೆ ಮಾತುಕತೆ ಕೂಡ ಮುಸ್ಲಿಂ ಸಮುದಾಯದಲ್ಲಿ ಅಂತಹ ಭರವಸೆ ಮೂಡಿಸಿಲ್ಲ ಎಂದು ಅಖಿಲ ಭಾರತ ಅಲ್ಪಸಂಖ್ಯಾತ ಯುವ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಕಮರುಜಮಾನ್‌ ಹೇಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮುಸ್ಲಿಂ ಯುವ ಜನರ ಬೆಂಬಲ ಹೊಂದಿರುವ ಸಂಘಟನೆ ಇದು.

ಅತ್ಯಂತ ಪ್ರಬಲ ಜಾತ್ಯತೀತ ಅಭ್ಯರ್ಥಿಗೆ ಮುಸ್ಲಿಮರು ಮತ ಹಾಕಬೇಕು ಎಂದು ಈ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.

‘ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ಪ್ರಬಲ ಜಾತ್ಯತೀತ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದೇವೆ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಅಭ್ಯರ್ಥಿಗಳೇ ಗೆಲ್ಲುವಂತೆ ಮಾಡಲು ಎಲ್ಲ ಪ್ರಯತ್ನ ನಡೆಸುತ್ತೇವೆ’ ಎಂದು ಕೋಲ್ಕತ್ತದ ಪ್ರಮುಖ ಇಮಾಮ್‌ ಖಾಜಿ ಫಜಲುರ್‌ ರಹ್ಮಾನ್‌ ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಮೇಲೆ ಟಿಎಂಸಿಯ ಪ್ರಭಾವ ದಟ್ಟವಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕೋಮು ಗಲಭೆಗಳು ಹೆಚ್ಚಾಗಿರುವುದು ಟಿಎಂಸಿಯ ಮೇಲೆ ಸಮುದಾಯದ ಅಸಮಾಧಾನಗೊಳ್ಳಲು ಕಾರಣವಾಗಿದೆ. ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2015ರ ಬಳಿಕ ರಾಜ್ಯದಲ್ಲಿ ಕೋಮು ಗಲಭೆಗಳು ತೀವ್ರವಾಗಿ ಏರಿಕೆಯಾಗಿದೆ.

ಬದಲಾಗುತ್ತಾ ಸಾಗಿದ ನಿಷ್ಠೆ

* ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದೆ. ಹಿಂದೂ ಮಹಾಸಭಾ ಮತ್ತು ಜನಸಂಘವನ್ನು ಅಧಿಕಾರದಿಂದ ದೂರ ಇಡುವುದು ಇದರ ಉದ್ದೇಶವಾಗಿತ್ತು

* 1960ರ ದಶಕದ ಕೊನೆಯ ಹೊತ್ತಿಗೆ ಮುಸ್ಲಿಮರ ನಿಷ್ಠೆ ಎಡಪಕ್ಷಗಳತ್ತ ವಾಲಿತು. ಎಡ ಪಕ್ಷಗಳ ಮುಖಂಡರಾದ ಜ್ಯೋತಿ ಬಸು ಮತ್ತು ಪ್ರಮೋದ್‌ ದಾಸ್‌ಗುಪ್ತಾ ಅವರು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆದರು

* 1977ರಲ್ಲಿ ಎಡ ರಂಗ ಅಧಿಕಾರಕ್ಕೆ ಬಂದ ಬಳಿಕ ಭೂರಹಿತ ರೈತರಿಗೆ ಜಮೀನು ಹಂಚಿಕೆ ಮಾಡಲಾಯಿತು. ಮುಸ್ಲಿಂ ಸಮುದಾಯದ ಗಣನೀಯ ಪ್ರಮಾಣದ ಜನರಿಗೆ ಇದರಿಂದ ಪ್ರಯೋಜನ ಆಯಿತು. ಎಡರಂಗದತ್ತ ಮುಸ್ಲಿಮರ ಒಲವು ಮತ್ತಷ್ಟು ಗಟ್ಟಿಯಾಯಿತು

* 1996 ಮತ್ತು 2004ರಲ್ಲಿ ಕ್ರಮವಾಗಿ ಎಡರಂಗದ 33 ಮತ್ತು 34 ಸಂಸದರು ಲೋಕಸಭೆ ಪ್ರವೇಶಿಸಿದ್ದರು.

* 2004ರ ನಂತರ ಪರಿಸ್ಥಿತಿ ಬದಲಾಯಿತು. ರಾಜ್ಯದಲ್ಲಿ ಮುಸ್ಲಿಮರ ಸ್ಥಿತಿ ಬಹಳ ಹದಗೆಟ್ಟಿದೆ ಎಂದು ಸಾಚಾರ್‌ ಸಮಿತಿಯ ವರದಿಯು 2008ರಲ್ಲಿ ಹೇಳಿತು

* ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಭೂಸ್ವಾಧೀನ ವಿರೋಧಿ ಚಳವಳಿ ನಡೆಸಿದರು. ಮಮತಾ ಅವರಲ್ಲಿ ಹೊಸ ‘ರಕ್ಷಕಿ’ಯನ್ನು ಮುಸ್ಲಿಮರು ಕಂಡರು

***

* ರಾಜ್ಯ ಸರ್ಕಾರದ ನೀತಿ ಒಂದು ಸಮುದಾಯದ ಹಿತಾಸಕ್ತಿ ರಕ್ಷಿಸುವುದಕ್ಕಷ್ಟೇ ಸೀಮಿತ. ಬಹುಸಂಖ್ಯಾತರ ಆಕ್ರೋಶಕ್ಕೆ ಇದು ಕಾರಣವಾಗಿದೆ. ತಮ್ಮ ಹಿತಾಸಕ್ತಿ ರಕ್ಷಣೆ ಬಿಜೆಪಿ ಯಿಂದ ಮಾತ್ರ ಸಾಧ್ಯ ಎಂದು ಅವರು ಭಾವಿಸಿದ್ದಾರೆ

ದಿಲೀಪ್‌ ಘೋಷ್‌ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ

* ವಿಶ್ವಾಸಾರ್ಹ ಪರ್ಯಾಯ ಎಂದು ಬಿಂಬಿಸಿಕೊಳ್ಳಲು ಸಾಧ್ಯವಾದರೆ ಅಲ್ಪಸಂಖ್ಯಾತರ ಗಣನೀಯ ಪ್ರಮಾಣದ ಮತ ಸಿಪಿಎಂ–ಕಾಂಗ್ರೆಸ್‌ಗೆ ದೊರೆಯಬಹುದು. ಅದಾಗದಿದ್ದರೆ ಸಮುದಾಯದ ಸಂಪೂರ್ಣ ಮತ ಟಿಎಂಸಿಗೆ ಹೋಗಬಹುದು

ಮೊಹಮ್ಮದ್‌ ಸಲೀಂ,ಸಿಪಿಎಂ ಮುಖಂಡ

ಅಂಕಿ ಅಂಶ

* 30% ಅಲ್ಪಸಂಖ್ಯಾತ ಸಮುದಾಯದ ಮತದಾರರ ಪ್ರಮಾಣ

* 16–18 ಈ ಸಮುದಾಯ ನಿರ್ಣಾಯಕವಾಗಿರುವ ಕ್ಷೇತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT