ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮತ ಹಾಕಲು ಅಗೋಚರ ಮಸಿ: 1971ರ ಚುನಾವಣೆಯಲ್ಲಿ ಕೇಳಿ ಬಂದಿದ್ದ ಆರೋಪ

Last Updated 18 ಮಾರ್ಚ್ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಯಲ್ಲಿ ಸೋತವರು ಚಿತ್ರ ವಿಚಿತ್ರ ಆರೋಪಗಳನ್ನು ಮಾಡುವುದು ಸಹಜ. 1971ರಲ್ಲಿಯೂ ಇಂತಹ ಆರೋಪಗಳು ಕೇಳಿ ಬಂದಿದ್ದವು. ಮತಪತ್ರಗಳನ್ನು ರಾಸಾಯನಿಕದಲ್ಲಿ ಸಂಸ್ಕರಿಸಲಾಗಿದೆ ಮತ್ತು ಅಗೋಚರ ಮಸಿ ಬಳಸಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಲಾಗಿದೆ. ಗುರುತು ಹಾಕಿದ 72 ತಾಸು ಬಳಿಕ ಈ ಮಸಿ ಕಾಣಿಸಿಕೊಳ್ಳುತ್ತದೆ ಎಂಬ ಆರೋಪ ಆಗ ಕೇಳಿ ಬಂದಿತ್ತು.

ದೆಹಲಿ, ಮೈಸೂರು, ಬಾಂಬೆ, ಅಲಹಾಬಾದ್‌ ಹೈಕೋರ್ಟ್‌ಗಳಲ್ಲಿ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು. ಎಲ್ಲ ಅರ್ಜಿದಾರರಿಗೆ ನ್ಯಾಯಾಲಯ ವೆಚ್ಚವನ್ನು ವಿಧಿಸಿ ಈ ಅರ್ಜಿಗಳನ್ನು ವಜಾ ಮಾಡಲಾಗಿತ್ತು.

ಈ ಎಲ್ಲ ಆರೋಪಗಳು ನಿರಾಧಾರ ಎಂದು ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್‌.ಪಿ. ಸೆನ್‌ ವರ್ಮಾ 1971ರ ಚುನಾವಣೆ ಬಗೆಗಿನ ತಮ್ಮ ವರದಿಯಲ್ಲಿ ಬರೆದಿದ್ದಾರೆ. ಕಾಂಗ್ರೆಸ್‌ ವಿಭಜನೆ ಬಳಿಕ 1971ರಲ್ಲಿ ನಡೆದು ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ಪಕ್ಷ ಜಯಭೇರಿ ಬಾರಿಸಿತ್ತು.

‘ಫಲಿತಾಂಶ ಪ್ರಕಟವಾಗಿ ಹಲವು ದಿನಗಳ ಬಳಿಕ ಈ ಕುಚೋದ್ಯದ ಆರೋಪಗಳನ್ನು ಮಾಡಿದವರು ಭಾರತದ ಸಂವಿಧಾನವನ್ನೇ ಹಾಳುಗೆಡವಲು ಬಯಸಿದ್ದಾರೆ. ದೇಶದಲ್ಲಿ ರಾಜಕೀಯ ಗೊಂದಲ ಸೃಷ್ಟಿ ಅವರ ಉದ್ದೇಶವಾಗಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನೇ ಕೊನೆಗೊಳಿಸಲು ಅವರು ಬಯಸಿದ್ದಾರೆ’ ಎಂದು ಸೆನ್‌ ವರ್ಮಾ ಅವರು ಕಟುವಾಗಿ ಬರೆದಿದ್ದರು.

‘ಇಂತಹ ಆರೋಪಗಳನ್ನು ಮಾಡಿದ ವ್ಯಕ್ತಿಗಳ ದುಷ್ಟ ಷಡ್ಯಂತ್ರದ ಬಗ್ಗೆ ಯೋಚನೆ ಮಾಡಿದರೇ ಆಘಾತವಾಗುತ್ತದೆ. ಅವರಿಗೆ ದೇಶದ ಬಗ್ಗೆ ಪ್ರೀತಿಯೇ ಇಲ್ಲ, ದೇಶದ ಜನರ ಅಭಿವೃದ್ಧಿಯನ್ನು ಅವರು ಬಯಸುವುದೂ ಇಲ್ಲ. ಸ್ವಂತ ಹಿತಾಸಕ್ತಿಗಾಗಿ ಅವರು ದೇಶವನ್ನು ಗೊಂದಲಕ್ಕೆ ಕೆಡವಲು ಹಿಂಜರಿಯುವುದಿಲ್ಲ’ ಎಂದು ಸೆನ್ ವರ್ಮಾ ಆಕ್ರೋಶ ವ್ಯಕ್ತಪಡಿಸಿದ್ದರು.

ಆರೋಪಗಳು ಕೇಳಿ ಬಂದಾಗಮೊದಲು ಆಯೋಗ ಸುಮ್ಮನಿತ್ತು. ಬಳಿಕ ಸೆನ್‌ ವರ್ಮಾ ಅವರು ಪ್ರತಿಕ್ರಿಯೆ ಕೊಟ್ಟರು. 200–250 ಲೋಕಸಭಾ ಕ್ಷೇತ್ರಗಳಲ್ಲಿ ಇಂತಹ ‘ಅಕ್ರಮ’ ಎಸಗಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಅಂದರೆ, 12 ಕೋಟಿ ಮತದಾರರ ಮತವನ್ನು ತಿರುಚಲಾಗಿದೆ ಎಂದು ಇದರ ಅರ್ಥ. ಇದರಲ್ಲಿ ಇಡೀ ಚುನಾವಣಾ ವ್ಯವಸ್ಥೆಯೇ ಶಾಮೀಲಾಗಬೇಕಾಗುತ್ತದೆ. ಇದು ಸಾಧ್ಯವೇ ಎಂದು ಸೆನ್‌ ವರ್ಮಾ ಪ್ರಶ್ನಿಸಿದ್ದರು.

‘ಮತಪತ್ರಗಳನ್ನು ರಾಸಾಯನಿಕದಲ್ಲಿ ಅದ್ದಲಾಗಿತ್ತು ಎಂದಾದರೆ, ಇದಕ್ಕೆ ರಾಸಾಯನಿಕವನ್ನು ಪೂರೈಸಿದವರು ಯಾರು? ಇಂತಹ ಕೆಲಸಕ್ಕೆ ತರಬೇತಿ ಪಡೆದ ವ್ಯಕ್ತಿಗಳು ಬೇಡವೇ’ ಎಂದು ವರ್ಮಾ ಕೇಳಿದ್ದರು.

ದೇಶದ ಕಾಗದ ಕಾರ್ಖಾನೆಗಳಲ್ಲಿ ಪ್ರಬಲವಾದ ಕಾರ್ಮಿಕ ಸಂಘಟನೆಗಳಿವೆ. ಸಾವಿರಾರು ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ ಇಂತಹ ಬೃಹತ್‌ ಪಿತೂರಿ ನಡೆಸಲು ಸಾಧ್ಯವೇ? ಆಡಳಿತ ಮಂಡಳಿಯ ಚಟುವಟಿಕೆಗಳ ಬಗ್ಗೆ ಕಾರ್ಮಿಕ ಸಂಘಟನೆಗಳು ನಿಗಾ ಇರಿಸುತ್ತಿದೆ. ಹಾಗಿರುವಾಗ ಇಂತಹ ವಂಚನೆ ಮಾಡುವುದು ಹೇಗೆ ಎನ್ನುವ ಮೂಲಕ ಆರೋಪವನ್ನು ಸೆನ್‌ ವರ್ಮಾ ತಳ್ಳಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT