ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಬಂಗಾಳ: ಒಂದಾಗದ ಕಾಂಗ್ರೆಸ್‌–ಸಿಪಿಎಂ;ಮೈತ್ರಿ ಮರೀಚಿಕೆ, ದೀದಿ, ಮೋದಿಗೆ ಲಾಭ

ಟಿಎಂಸಿ ವಿರೋಧಿ ಮತಗಳು ಬಿಜೆಪಿಯತ್ತ ವಾಲುವ ಸಾಧ್ಯತೆ
Last Updated 19 ಮಾರ್ಚ್ 2019, 19:53 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಸಿಪಿಎಂ ನಡುವೆ ಮೈತ್ರಿ ಇಲ್ಲ ಎಂಬುದು ಈಗ ದೃಢವಾಗಿದೆ. ಹಾಗಾಗಿ ಈ ರಾಜ್ಯದಲ್ಲಿ ಚತುಷ್ಕೋನ ಸ್ಪರ್ಧೆ ಖಚಿತವಾಗಿದೆ.

ಕಾಂಗ್ರೆಸ್‌–ಸಿಪಿಎಂ–ತೃಣಮೂಲ ಕಾಂಗ್ರೆಸ್‌–ಬಿಜೆಪಿ ನಡುವಣ ಚತುಷ್ಕೋನ ಸ್ಪರ್ಧೆಯಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಬಿಜೆಪಿಗೆ ಅನುಕೂಲವಾಗಲಿದೆ.

ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದ್ದಾಗಲೇ 25 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಸಿಪಿಎಂ ಅವಮಾನ ಮಾಡಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಬಳಿಕ ರಾಜ್ಯದ 38 ಕ್ಷೇತ್ರಗಳಿಗೂ ಎಡ ಪಕ್ಷಗಳು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಳೆದ ಬಾರಿ ಕಾಂಗ್ರೆಸ್‌ ಗೆದ್ದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ರಾಜ್ಯದಲ್ಲಿ ಒಟ್ಟು 42 ಕ್ಷೇತ್ರಗಳಿವೆ.

ಕಾಂಗ್ರೆಸ್‌ ಮತ್ತು ಸಿಪಿಎಂ ಮೈತ್ರಿ ಇಲ್ಲದೆ ಇರುವುದರಿಂದ ರಾಜ್ಯದ ಮುಸ್ಲಿಮರಿಗೆ ಜಾತ್ಯತೀತ ಪರ್ಯಾಯವೇ ಇಲ್ಲ. ಹಾಗಾಗಿ ಶೇ 30ರಷ್ಟಿರುವ ಮುಸ್ಲಿಂ ಮತಗಳು ನೇರವಾಗಿ ಟಿಎಂಸಿಗೆ ದೊರೆಯಲಿದೆ ಎಂದು ಆ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮೈತ್ರಿ ಮುರಿದು ಬಿದ್ದಿರುವುದು ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ಭಾಗಗಳ 15 ಲೋಕಸಭಾ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಕೂಚ್‌ಬಿಹಾರ್‌, ಅಲಿಪುರ್‌ದೌರ್‌, ರಾಯ್‌ಗಂಜ್‌, ಬಲೂರ್‌ಘಾಟ್‌, ಮಾಲ್ಡಾ ದಕ್ಷಿಣ, ಮುರ್ಷಿದಾಬಾದ್‌, ಕೃಷ್ಣನಗರ್‌, ರಾಣಾಘಾಟ್‌, ಬಷೀರ್‌ಹಾತ್‌, ಬಾರಕ್‌ಪೋರ್‌, ಅಸನ್‌ಸೋಲ್‌, ಪುರೂಲಿಯಾ, ಝಾಗ್ರಂ, ಬಂಕುರಾ ಮತ್ತು ಮಿಡ್ನಾಪೋರ್‌ಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಉಂಟಾಗಲಿದೆ. ಕಾಂಗ್ರೆಸ್‌–ಸಿಪಿಎಂ ಮೈತ್ರಿ ಆಗದಿರುವುದರಿಂದ ಬಿಜೆಪಿಗೂ ಸಾಕಷ್ಟು ಲಾಭ ಆಗಲಿದೆ.

ಮೈತ್ರಿ ಆಗಿದ್ದರೆ ಟಿಎಂಸಿ ವಿರೋಧಿ ಮತಗಳು ಈ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಹಂಚಿ ಹೋಗುತ್ತಿದ್ದವು. ಈಗ, ಟಿಎಂಸಿ ವಿರೋಧಿ ಮತಗಳೆಲ್ಲವೂ ಬಿಜೆಪಿ ಬುಟ್ಟಿಗೆ ಬೀಳಲಿವೆ. ಇದು ಹಲವು ಕ್ಷೇತ್ರಗಳ ಸಮೀಕರಣವನ್ನೇ ಬದಲಿಸಬಹುದು ಎಂದು ಟಿಎಂಸಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಕಾಂಗ್ರೆಸ್‌–ಸಿಪಿಎಂ ಮೈತ್ರಿ ಆಗಿದ್ದಿದ್ದರೆ ನಮ್ಮ ಸ್ಥಿತಿ ಇನ್ನಷ್ಟು ಗಟ್ಟಿಯಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ. ಹಾಗಿದ್ದರೂ ಟಿಎಂಸಿ ನಾಯಕತ್ವ ಪ್ರಬಲವಾಗಿದೆ. ಪ್ರಚಾರ ಆರಂಭವಾಗುತ್ತಿದ್ದಂತೆಯೇ ಸನ್ನಿವೇಶ ಬದಲಾಗಲಿದೆ’ ಎಂಬ ಆಶಾವಾದವನ್ನು ಟಿಎಂಸಿ ಮುಖಂಡರೊಬ್ಬರು ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸಾಧ್ಯವಾಗದೇ ಇರುವುದು ಎರಡೂ ಪಕ್ಷಗಳಿಗೆ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್‌ ಮತ್ತು ಸಿಪಿಎಂನ ಮುಖಂಡರು ಹೇಳುತ್ತಿದ್ದಾರೆ. ಈಗಿನ ಸ್ಥಿತಿಯಲ್ಲಿ ಚುನಾವಣೆ ಎದುರಿಸಿದರೆ ಒಂದು ಅಥವಾ ಎರಡು ಕ್ಷೇತ್ರಗಳಲ್ಲಷ್ಟೇ ಗೆಲ್ಲಲು ಸಾಧ್ಯ ಎಂಬುದು ಎರಡೂ ಪಕ್ಷಗಳ ಅಭಿಪ್ರಾಯ.

ಕೈ ತಪ್ಪಿದ ಅವಕಾಶ

2016ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌–ಎಡಪಕ್ಷಗಳ ನಡುವೆ ಮೈತ್ರಿ ಆಗಿತ್ತು. ಈ ಮೈತ್ರಿಕೂಟಕ್ಕೆ ಟಿಎಂಸಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಬಿಜೆಪಿಯ ಮುನ್ನಡೆಗೆ ತಡೆ ಒಡ್ಡಿತ್ತು. ಕಾಂಗ್ರೆಸ್‌ನಿಂದ ದೂರ ಹೋಗುವ ನಿರ್ಧಾರವನ್ನು ಸಿಪಿಎಂ ಕೇಂದ್ರ ಸಮಿತಿ ಕೈಗೊಂಡಿತ್ತು. ಹಾಗಾಗಿ, ಚುನಾವಣೆ ಬಳಿಕ ಆ ಮೈತ್ರಿ ಮುರಿದು ಬಿತ್ತು.

ಬಿಜೆಪಿಯಲ್ಲಿ ಸಂಭ್ರಮ

ಮೈತ್ರಿ ಪ್ರಯತ್ನ ಮುರಿದುಬಿದ್ದಿರುವುದು ಬಿಜೆಪಿ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಟಿಎಂಸಿಗೆ ಪರ್ಯಾಯ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಗಡಿ ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿರುವ ನಿರ್ವಸಿತರ ಮತಗಳು ನಿರಾಯಾಸವಾಗಿ ದೊರೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಇದೆ. ಪೌರತ್ವ ಮಸೂದೆ ಜಾರಿಗೆ ತರಲು ನಡೆಸಿದ ಪ್ರಯತ್ನ ಫಲ ಕೊಡಬಹುದು ಎಂಬುದು ಬಿಜೆಪಿಯ ನಿರೀಕ್ಷೆ.

ಟಿಎಂಸಿಯ ಓಲೈಕೆ ರಾಜಕಾರಣದಿಂದ ಬೇಸತ್ತಿರುವ ಹಿಂದೂಗಳ ಮತ ಬಿಜೆಪಿಗೆ ಸಿಗುವುದು ಖಚಿತ ಎಂದು ಬಿಜೆಪಿಯ ಮುಖಂಡರೊಬ್ಬರು ಅಭಿಪ್ರಾಯಪ‍ಟ್ಟಿದ್ದಾರೆ. ನಿರಾಶ್ರಿತರು ಕಳೆದ ಹಲವು ದಶಕಗಳಿಂದ ಎಡಪಕ್ಷಗಳ ಮತಬ್ಯಾಂಕ್‌.

***

* ಚತುಷ್ಕೋನ ಸ್ಪರ್ಧೆ ನಡೆದರೆ ಆಳುವ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷಕ್ಕೆ ಲಾಭ ಎಂಬುದನ್ನು ಇಲ್ಲಿನ ಚುನಾವಣಾ ಇತಿಹಾಸ ಹೇಳುತ್ತದೆ

* 2014ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 34 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್‌ಗೆ ನಾಲ್ಕು ಮತ್ತು ಬಿಜೆಪಿ ಹಾಗೂ ಎಡರಂಗಕ್ಕೆ ತಲಾ ಎರಡು ಕ್ಷೇತ್ರಗಳು ದಕ್ಕಿದ್ದವು

* ವಿವಿಧ ಉಪ ಚುನಾವಣೆಗಳಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಟಿಎಂಸಿಗೆ ತಾನೇ
ಪರ್ಯಾಯ ಎಂದು ಬಿಂಬಿಸಿಕೊಳ್ಳುತ್ತಿದೆ

***

* ಟಿಎಂಸಿಯಿಂದ ಭ್ರಮನಿರಸನಗೊಂಡವರಿಗೆ ಬಿಜೆಪಿಯೊಂದೇ ಈಗ ಪರ್ಯಾಯ. ಟಿಎಂಸಿಗೆ ಮಮತಾ ಬ್ಯಾನರ್ಜಿ ಇದ್ದರೆ, ನಮಗೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಇದ್ದಾರೆ

ಅರ್ಜುನ್‌ ಸಿಂಗ್‌,ಬಿಜೆಪಿ ಮುಖಂಡ

* ಈಗ ಚುನಾವಣೆ ಟಿಎಂಸಿ ಮತ್ತು ಬಿಜೆಪಿ ನಡುವೆ ಧ್ರುವೀಕರಣಗೊಳ್ಳಲಿದೆ ಎಂಬುದು ನಿಜ. ಮೈತ್ರಿಕೂಟದ ವಿಚಾರ ಬಂದಾಗ ಸಿಪಿಎಂ ಹೊಂದಾಣಿಕೆ ತೋರಬೇಕು

ಸೋಮೇನ್‌ ಮಿತ್ರಾಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ

* ಮೈತ್ರಿ ಮಾಡದೇ ಇರುವುದು ತಪ್ಪೇ ಸರಿಯೇ ಎಂಬುದನ್ನು ಜನ ನಿರ್ಧರಿಸುತ್ತಾರೆ. ಕಾಂಗ್ರೆಸ್‌ ಜತೆ ಜಾತ್ಯತೀತ ಪರ್ಯಾಯ ಕಟ್ಟಲು ಪ್ರಯತ್ನಿಸಿದ್ದೇವೆ. ಕಾಂಗ್ರೆಸ್‌ಗೆ ಬೇರೆಯೇ ಯೋಜನೆ ಇದೆ

ಸುಜನ್‌ ಚಕ್ರವರ್ತಿ, ಸಿಪಿಎಂ ಕೇಂದ್ರ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT