ಸಣ್ಣ ಪಕ್ಷಗಳು ದೊಡ್ಡ ಗೆಲುವಿನ ಮೆಟ್ಟಿಲು

ಗುರುವಾರ , ಏಪ್ರಿಲ್ 25, 2019
29 °C
ಉತ್ತರಪ್ರದೇಶ, ಬಿಹಾರ, ದಕ್ಷಿಣದ ತಮಿಳುನಾಡು, ಕೇರಳದಲ್ಲಿ ಬೇಡಿಕೆ

ಸಣ್ಣ ಪಕ್ಷಗಳು ದೊಡ್ಡ ಗೆಲುವಿನ ಮೆಟ್ಟಿಲು

Published:
Updated:
Prajavani

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರವೂ ನಿರ್ಣಾಯಕ ಎಂಬಂತಹ ಸ್ಥಿತಿ ಇದೆ. ಹಾಗಾಗಿಯೇ, ಆಡಳಿತ ಪಕ್ಷ ಬಿಜೆಪಿ ಮತ್ತು ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷಗಳನ್ನು ಆಕ್ರಮಣಕಾರಿಯಾಗಿಯೇ ಓಲೈಸುತ್ತಿವೆ. ಸಣ್ಣ ಪಕ್ಷಗಳನ್ನು ಹತ್ತಿರ ಸೇರಿಸಿಕೊಳ್ಳುವುದಕ್ಕೆ ಪೈಪೋಟಿಯೇ ಇದೆ.

‘ಗಾಳಿ ಬಂದಾಗ ತೂರಿಕೋ’ ಎಂಬಂತೆ ಸಣ್ಣ ಪಕ್ಷಗಳು ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲು ಸಜ್ಜಾಗಿವೆ. ಹಿಂದಿ ಭಾಷಿಕ ರಾಜ್ಯಗಳಾದ ಉತ್ತರ ಪ್ರದೇಶ ಅಥವಾ ಬಿಹಾರ ಇರಲಿ, ದಕ್ಷಿಣದ ತಮಿಳುನಾಡು, ಕೇರಳ ಇರಲಿ ಸಣ್ಣ ಪಕ್ಷಗಳಿಗೆ ಬೇಡಿಕೆ ಮುಗಿಲು ಮುಟ್ಟಿದೆ. ಇಂತಹ ಪಕ್ಷಗಳು ಮುಂದಿಡುತ್ತಿರುವ ಬೇಡಿಕೆಯೂ ಎತ್ತರದಲ್ಲಿಯೇ ಇವೆ.

ಉತ್ತರ ಪ್ರದೇಶದಲ್ಲಿ ಓಂ ಪ್ರಕಾಶ್‌ ರಾಜ್‌ಭರ್‌ ಅವರ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ ಅಥವಾ ಅಪ್ನಾದಳದ ಅನುಪ್ರಿಯಾ ಪಟೇಲ್‌ ಬಣಗಳನ್ನು ಜತೆಗೆ ಉಳಿಸಿಕೊಳ್ಳಲು ಬಿಜೆಪಿ ಸಾಕಷ್ಟು ಉದಾರವಾಗಿಯೇ ವರ್ತಿಸಿದೆ.

ಶಿವಪಾಲ್‌ ಯಾದವ್‌ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ) ಜತೆಗೆ ಮೈತ್ರಿಗೆ ಕಾಂಗ್ರೆಸ್‌ ತುದಿಗಾಲಲ್ಲಿ ನಿಂತಿದೆ. ಪೀಸ್‌ ಪಾರ್ಟಿ ಮತ್ತು ಅಪ್ನಾದಳದ ಕೃಷ್ಣಾ ಪಟೇಲ್‌ ಬಣದ ಜತೆಗೆ ಶಿವಪಾಲ್‌ ಅವರ ಪಕ್ಷ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಶಿವಪಾಲ್‌ ಅವರ ಪಕ್ಷಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. 

ಉತ್ತರ ಪ್ರದೇಶದಲ್ಲಿ ಇವು ಯಾವುವೂ ನಿರ್ಣಾಯಕ ಶಕ್ತಿಗಳಲ್ಲ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ಎಸ್‌ಪಿ–ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸಡ್ಡು ಹೊಡೆಯಲು ಸಜ್ಜಾಗಿ ನಿಂತಿವೆ. ಸಣ್ಣ ಪಕ್ಷಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಭಾವ ಹೊಂದಿವೆ ಎಂಬುದೇ ಈ ಪಕ್ಷಗಳಿಗೆ ಬೇಡಿಕೆ ಉಳಿಯಲು ಕಾರಣ. ಪೂರ್ವ ಉತ್ತರ ಪ್ರದೇಶ, ಫಿರೋಜಾಬಾದ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಈ ಪಕ್ಷಗಳು ನಿರ್ಣಾಯಕವಾಗಿವೆ. 

ಬಿಹಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಜೆಡಿಯು, ಬಿಜೆಪಿ ಮತ್ತು ಆರ್‌ಜೆಡಿ ಇಲ್ಲಿನ ಮುಖ್ಯ ಪಕ್ಷಗಳು. ಆದರೆ, ಎನ್‌ಡಿಎ ಮತ್ತು ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಸಣ್ಣ ಪಕ್ಷಗಳನ್ನು ಸಂಪ್ರೀತಗೊಳಿಸಲು ಯತ್ನಿಸುತ್ತಲೇ ಇವೆ.

ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿಯ ಜನಪ್ರಿಯತೆ ಗಣನೀಯವಾಗಿ ಕುಸಿದಿದೆ ಎನ್ನಲಾಗುತ್ತಿದೆ. ಹಾಗಿದ್ದರೂ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳನ್ನು ಈ ಪಕ್ಷಕ್ಕೆ ಎನ್‌ಡಿಎ ಬಿಟ್ಟುಕೊಟ್ಟಿದೆ. ಜತೆಗೆ, ಪಾಸ್ವಾನ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಭರವಸೆಯನ್ನೂ ಕೊಟ್ಟಿದೆ.  ಜಿತನ್‌ ರಾಂ ಮಾಂಝಿ ಅವರ ಎಚ್‌ಎಎಂ, ಇತ್ತೀಚೆಗಷ್ಟೇ ಎನ್‌ಡಿಎ ಬಿಟ್ಟು ಮಹಾಮೈತ್ರಿ ಸೇರಿರುವ ಉಪೇಂದ್ರ ಕುಶ್ವಾಹಾ ಅವರ ಆರ್‌ಎಲ್‌ಎಸ್‌ಪಿ ಮಹಾಮೈತ್ರಿಯ ಮೇಲೆ ಹೆಚ್ಚು ಕ್ಷೇತ್ರಗಳಿಗಾಗಿ ಹೇರಿರುವ ಒತ್ತಡ ಅಪಾರ.  ಪಂಜಾಬ್‌ನಲ್ಲಿ ಎಎಪಿಯಿಂದ ವಿಭಜನೆಗೊಂಡು ಸೃಷ್ಟಿಯಾದ ಪಂಜಾಬಿ ಏಕತಾ ಪಾರ್ಟಿ ಮತ್ತು ಶಿರೋಮಣಿ ಅಕಾಲಿ ದಳದಿಂದ (ಎಸ್‌ಎಡಿ) ಬೇರಾದ ಎಸ್‌ಎಡಿ (ತಕ್ಸಲಿ) ಪಕ್ಷಗಳು ಒಟ್ಟಾಗಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ರಚಿಸಲು ಯತ್ನಿಸುತ್ತಿವೆ. 

ಈಶಾನ್ಯ ರಾಜ್ಯವೇ ಇರಲಿ, ದಕ್ಷಿಣ ಭಾರತವೇ ಇರಲಿ, ಸಣ್ಣ ಪಕ್ಷಗಳಿಗೆ ದೊಡ್ಡ ಪಕ್ಷಗಳು ಮಣೆ ಹಾಕಲೇಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ತಮಿಳುನಾಡಿನಲ್ಲಿ ಎಸ್‌. ರಾಮದಾಸ್‌ ಅವರ ಪಟ್ಟಾಳಿ ಮಕ್ಕಳ್‌ ಕಚ್ಚಿ (ಪಿಎಂಕೆ), ವಿಜಯಕಾಂತ್‌ ಅವರ ಡಿಎಂಡಿಕೆ ಮತ್ತು ಇತರ ಮೂರು ಸಣ್ಣ ಪಕ್ಷಗಳನ್ನು ಮೈತ್ರಿಕೂಟಕ್ಕೆ ಎಐಎಡಿಎಂಕೆ ಸೇರಿಸಿಕೊಂಡಿದೆ. 

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌) ಮತ್ತು ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಪರ್ಯಾಯವಾಗಿ ಆಡಳಿತಕ್ಕೆ ಬರುತ್ತಿವೆ. ಭಾರತೀಯ ಜನ ಧರ್ಮ ಸೇವಾ ಪಕ್ಷವನ್ನು ಜತೆಗೆ ಸೇರಿಸಿಕೊಂಡು ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. 

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯ ಪಕ್ಷಗಳು. ಪವನ್‌ ಕಲ್ಯಾಣ್‌ ಅವರ ಜನಸೇನಾ ಜತೆಗೆ ಮಾಯಾವತಿ ಅವರ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆ. ಎಡಪಕ್ಷಗಳ ಜತೆಗೂ ಜನಸೇನಾ ಮೈತ್ರಿ ಹೊಂದಿದೆ.

ಫಲಿತಾಂಶ ಬದಲಿಸುವ ಶಕ್ತಿ

ನಿರ್ದಿಷ್ಟ ಪ್ರದೇಶದಲ್ಲಿ ಪ್ರಭಾವ ಹೊಂದಿರುವ ಸಣ್ಣ ಪಕ್ಷಗಳು ಫಲಿತಾಂಶದ ಮೇಲೆ ಪ್ರಭಾವ ಬೀರುವ ತಾಕತ್ತು ಹೊಂದಿವೆ.

ಹರಿಯಾಣದಲ್ಲಿ ಓಂಪ್ರಕಾಶ್ ಚೌತಾಲಾ ಅವರ ಐಎನ್‌ಎಲ್‌ಡಿ ಇತ್ತೀಚೆಗೆ ವಿಭಜನೆಗೊಂಡು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ರೂಪುಗೊಂಡಿದೆ. ಕುಟುಂಬದೊಳಗಿನ ಕಲಹ ಈ ವಿಭಜನೆಗೆ ಕಾರಣ. ಇಂತಹ ಸಣ್ಣ ಪಕ್ಷಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲವು ಎಂಬುದನ್ನು ಇತ್ತೀಚೆಗೆ ನಡೆದ ಜಿಂದ್‌ ವಿಧಾನಸಭಾ ಉಪಚುನಾವಣೆ ಉತ್ತಮ ನಿದರ್ಶನ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಉಪಚುನಾವಣೆ ಗೆಲ್ಲುವುದು ಕಷ್ಟ ಎಂದೇ ಎಲ್ಲರೂ ವ್ಯಾಖ್ಯಾನಿಸಿದ್ದರು. ಆದರೆ, ಉಪಚುನಾವಣೆಯಲ್ಲಿ ಬಿಜೆಪಿಯೇ ಗೆದ್ದಿತು. 

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಜೆಪಿ ಜತೆ ಸೇರಿ ಮೂರು ಪಕ್ಷಗಳ ಮೈತ್ರಿಕೂಟ ರಚಿಸಲು ಎಎಪಿ ಮುಂದಾಗಿದೆ. ಆದರೆ, ಅದು ಇನ್ನೂ ಸ್ಪಷ್ಟ ರೂಪ ಡೆದುಕೊಂಡಿಲ್ಲ. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !