ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗಾಗಿ ಬಿಹಾರ ಗೆಲ್ಲುವುದು ನಿತೀಶ್‌ ಹೊಣೆ

Last Updated 22 ಮಾರ್ಚ್ 2019, 20:27 IST
ಅಕ್ಷರ ಗಾತ್ರ

ಪಟ್ನಾ: ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಬಿಹಾರ ರಾಜಕಾರಣದ ‘ಚಾಣಕ್ಯ’ ಎಂದು ಕರೆಯುವುದು ಸುಮ್ಮನೆ ಏನಲ್ಲ.

ನಿತೀಶ್‌ ಅವರನ್ನು ‘ಪಕ್ಷಾಂತರಿ’ ಎಂದು ಬಿಹಾರದ ಇನ್ನೊಂದು ಮುಖ್ಯ ಪಕ್ಷ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಸದಾ ಹಂಗಿಸುತ್ತಾರೆ. ಈ ಇಬ್ಬರ ನಡುವೆ ಸುದೀರ್ಘ ಕಾಲದ ‘ಪ್ರೀತಿ–ದ್ವೇಷ’ದ ಸಂಬಂಧ ಇದೆ.

ಚಂದ್ರಗುಪ್ತ ಮೌರ್ಯನ ಸಲಹೆಗಾರನಾಗಿದ್ದ ಚಾಣಕ್ಯನ ಹಾಗೆಯೇ ಚತುರ ಮತ್ತು ಕುಟಿಲ ನಡೆಗಳ ಮೂಲಕ ನಿತೀಶ್‌ ತಮ್ಮ ಪ್ರತಿಸ್ಪರ್ಧಿಗಳನ್ನು ಬೇಸ್ತು ಬೀಳಿಸಿದ್ದು ಹಲವು ಬಾರಿ. ಹಾಗಾಗಿಯೇ ಅವರು ಬಿಹಾರದ ಪ್ರಕ್ಷುಬ್ಧ ರಾಜಕಾರಣದಲ್ಲಿ ಸದಾ ಚಲಾವಣೆಯಲ್ಲಿ ಇರುವ ನಾಣ್ಯ.

ಹಾಗಿದ್ದರೂ ನಿತೀಶ್‌ ರಾಜಕಾರಣ ಏಳು ಬೀಳುಗಳ ಕತೆಯೂ ಹೌದು. 2014ರ ಲೋಕಸಭಾ ಚುನಾವಣೆಗೆ ಒಂದು ವರ್ಷ ಮೊದಲು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದುಬಿಜೆಪಿ ಬಿಂಬಿಸಿದ್ದನ್ನು ವಿರೋಧಿಸಿ ಆ ಪಕ್ಷದ ಜತೆಗಿನ ದೀರ್ಘ ಕಾಲದ ಮೈತ್ರಿಯನ್ನು ನಿತೀಶ್‌ ಕಡಿದುಕೊಂಡರು. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಭಾರಿ ಏಟು ತಿಂದರು. ಬದ್ಧ ಪ್ರತಿಸ್ಪರ್ಧಿ ಲಾಲು ಜತೆಗೆ2015ರ ಬಿಹಾರ ವಿಧಾನಸಭೆ ಚುನಾವಣೆಗೆ ಮುಂಚೆ ಸ್ನೇಹ ಬೆಳೆಸಿದರು. ಈ ಮೈತ್ರಿಕೂಟವು ಬಿಹಾರದಲ್ಲಿ ಬಿಜೆಪಿಯ ಜೈತ್ರಯಾತ್ರೆಗೆ ತಡೆ ಒಡ್ಡಿತು. ನಿತೀಶ್‌ ಮತ್ತೆ ಮುಖ್ಯಮಂತ್ರಿಯಾದರು.

ಇದಾಗಿ ಎರಡು ವರ್ಷ ಪೂರ್ಣಗೊಳ್ಳುವುದಕ್ಕೆ ಮೊದಲೇ ಆರ್‌ಜೆಡಿ–ಜೆಡಿಯು–ಕಾಂಗ್ರೆಸ್‌ ಮೈತ್ರಿಕೂಟದಿಂದ ನಿತೀಶ್‌ ಹೊರನಡೆದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಕೆಲವೇ ತಾಸುಗಳಲ್ಲಿ ಬಿಜೆಪಿ ಜತೆಗೆ ಮೈತ್ರಿಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾದರು. ನಿತೀಶ್‌ ಅವರ ಮೈತ್ರಿ ನಿಷ್ಠೆ ಬದಲು ಕೂಡ ಈ ಲೋಕಸಭಾ ಚುನಾವಣೆಯ ವಿಷಯವಾಗಬಹುದು.

ಪ್ರಾಮಾಣಿಕ ರಾಜಕಾರಣಿ ಎಂಬ ವರ್ಚಸ್ಸು ಹೊಂದಿರುವ ನಿತೀಶ್‌ ಒಂದು ಕಾಲದಲ್ಲಿ ಮೋದಿ ಅವರಿಗೆ ಪರ್ಯಾಯ ನಾಯಕ ಎಂಬಂತೆ ಬಿಂಬಿತವಾಗಿದ್ದರು. ಆದರೆ, ಈಗ ಮೋದಿ ಅವರಿಗಾಗಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಿಸಿಕೊಡುವ ಹೊಣೆ ಹೊತ್ತುಕೊಂಡಿದ್ದಾರೆ.

ಆರ್‌ಜೆಡಿ–ಕಾಂಗ್ರೆಸ್‌ ಮತ್ತು ಇತರ ಸಣ್ಣ ಪಕ್ಷಗಳು ಬಿಹಾರದಲ್ಲಿ ಮಹಾಮೈತ್ರಿಕೂಟವನ್ನು ರಚಿಸಿಕೊಂಡಿವೆ. ಬಿಹಾರದಲ್ಲಿ ಗಟ್ಟಿ ನೆಲೆ ಇರುವ ಆರ್‌ಜೆಡಿ ಜತೆಗೆ ಹಲವು ಸಣ್ಣ ಪಕ್ಷಗಳು ಈ ಮೈತ್ರಿಕೂಟದಲ್ಲಿವೆ. ಈ ಮೈತ್ರಿಕೂಟ ಎನ್‌ಡಿಎಗೆ ಭಾರಿ ಸವಾಲು ಒಡ್ಡುವ ಸಾಧ್ಯತೆ ಹೆಚ್ಚು.

ಬಿಹಾರದಲ್ಲಿ ಎನ್‌ಡಿಎಯ ಮುಂದಾಳು ನಿತೀಶ್‌ ಎಂಬುದು ನಿರ್ವಿವಾದ. ನಿತೀಶ್‌ ಮೇಲೆ ಸಾಕಷ್ಟು ಕಾಲದ ಆಡಳಿತ ವಿರೋಧಿ ಅಲೆ ಇದೆ. ಲಾಲು ಪ್ರಸಾದ್‌ ಅವರ ಯಾದವ ಸಮುದಾಯಕ್ಕೆ ನಿತೀಶ್‌ ಮೇಲೆ ಸಿಟ್ಟಿದೆ ಎಂದು ಹೇಳಲಾಗುತ್ತಿದೆ. ಆರ್‌ಜೆಡಿ ಜತೆ ಮೈತ್ರಿಮಾಡಿಕೊಂಡು ಅಧಿಕಾರಕ್ಕೆ ಬಂದ ನಿತೀಶ್‌ ಮಧ್ಯದಲ್ಲಿಯೇ ಎದ್ದು ಹೋಗಿರುವುದು ಇದಕ್ಕೆ ಕಾರಣ.

ನಿತೀಶ್‌ ಅವರು ಮತ್ತೆ ಬಿಜೆಪಿ ಜತೆಗೆ ಹೋಗಿರುವುದರಿಂದ ರಾಜ್ಯದ ಜನಸಂಖ್ಯೆಯಲ್ಲಿ ಶೇ 17ರಷ್ಟಿರುವ ಮುಸ್ಲಿಂ ಸಮುದಾಯಕ್ಕೂ ಅತೃಪ್ತಿ ಇದೆ ಎನ್ನಲಾಗುತ್ತಿದೆ. ಇತರ ಹಿಂದುಳಿದ ವರ್ಗಗಳ ನಿಷ್ಠೆ ಎರಡೂ ಮೈತ್ರಿಕೂಟಗಳ ನಡುವೆ ಹಂಚಿಹೋಗಬಹುದು. ಹಾಗಾಗಿ, ಈ ಬಾರಿ ನಿತೀಶ್‌ ಅವರು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಭಾರಿ ಹೆಣಗಾಟ ನಡೆಸಬೇಕಾಗಬಹುದು.

ಮುಂದಿನ ವರ್ಷ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಲೋಕಸಭಾ ಚುನಾವಣೆಯ ಫಲಿತಾಂಶ ಮುಂದಿನ ವರ್ಷ ಏನಾಗಬಹುದು ಎಂಬ ಸುಳಿವು ಕೊಡಬಹುದು. ನಿತೀಶ್‌ ಅವರಿಗೆ ಇದು ಬಹಳ ಮುಖ್ಯ.

ಮಹಾಮೈತ್ರಿಯ ಸೀಟು ಹಂಚಿಕೆ ಕೊನೆಗೂ ಅಂತಿಮ

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಯ ಸೀಟು ಹಂಚಿಕೆ ಕೊನೆಗೂ ಅಂತಿಮವಾಗಿದೆ.

40 ಕ್ಷೇತ್ರಗಳ ಪೈಕಿ 19ರಲ್ಲಿ ಆರ್‌ಜೆಡಿ ಸ್ಪರ್ಧಿಸಲಿದೆ. ಕಾಂಗ್ರೆಸ್‌ಗೆ ಒಂಬತ್ತು ಕ್ಷೇತ್ರಗಳನ್ನು ನೀಡಲಾಗಿದೆ. ಉಳಿದ 12 ಕ್ಷೇತ್ರಗಳ ಪೈಕಿ ಐದರಲ್ಲಿ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಸ್ಪರ್ಧಿಸಲಿದೆ. ಜಿತನ್‌ ರಾಂ ಮಾಂಝಿ ಅವರ ಎಚ್ಎಎಂ ಮತ್ತು ಮುಕೇಶ್‌ ಸಾಹ್ನಿ ಅವರ ವಿಐಪಿ ತಲಾ ಮೂರರಲ್ಲಿ ಸ್ಪರ್ಧಿಸಲಿವೆ. ಎಡಪಕ್ಷ ಸಿಪಿಐ–ಎಂಎಲ್‌ಗೆ ಒಂದು ಕ್ಷೇತ್ರ ಬಿಟ್ಟುಕೊಡಲಾಗಿದೆ.

ಸೀಟು ಹಂಚಿಕ್ಕೆ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿ ಅತೃಪ್ತಿ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿಯೇ, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಆರ್‌ಜೆಡಿ ಪ್ರಕಟಿಸಿಲ್ಲ.

‘ಕೆಲವು ಕ್ಷೇತ್ರಗಳ ಬಗ್ಗೆ ಭಿನ್ನಾಭಿಪ್ರಾಯ ಇದೆ. ಒಂದೆರಡು ದಿನಗಳಲ್ಲಿ ಇದನ್ನು ಬಗೆಹರಿಸುತ್ತೇವೆ’ ಎಂದು ವಕ್ತಾರ ಮನೋಜ್‌ ಝಾ ಹೇಳಿದ್ದಾರೆ.

ಸೇಡಿಗೂ ಇದೆ ಅವಕಾಶ

ನಿತೀಶ್‌ ಜತೆಗೆ ಜಗಳ ಮಾಡಿಕೊಂಡ ಆರ್‌ಎಲ್‌ಎಸ್‌ಪಿಯ ಉಪೇಂದ್ರ ಕುಶ್ವಾಹಾ ಮತ್ತು ಎಚ್‌ಎಎಂನ ಜಿತನ್‌ ರಾಂ ಮಾಂಝಿ ಅವರು ನಿತೀಶ್‌ ಇಲ್ಲದ ಎನ್‌ಡಿಎ ತೆಕ್ಕೆಗೆ ಸೇರಿದ್ದರು. ನಿತೀಶ್‌ ಎನ್‌ಡಿಎಗೆ ಮರಳುತ್ತಿದ್ದಂತೆಯೇ ಈ ಎರಡೂ ಪಕ್ಷಗಳು ಮಹಾಮೈತ್ರಿ ಸೇರಿಕೊಂಡಿವೆ.

ಕುಶ್ವಾಹಾ ಅವರು ಕರಾಕತ್‌ನಿಂದ ಮತ್ತು ಮಾಂಝಿ ಅವರು ಗಯಾ ಕ್ಷೇತ್ರಗಳಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ನಿತೀಶ್‌ ಅವರು ಮತ್ತೆ ಬಿಜೆಪಿ ಜತೆಗೆ ಹೋಗಿದ್ದನ್ನು ವಿರೋಧಿಸಿದ್ದ ಶರದ್‌ ಯಾದವ್‌ ಅವರು ಲೋಕತಾಂತ್ರಿಕ ಜನತಾ ದಳ ಎಂಬ ಪಕ್ಷ ಕಟ್ಟಿ ಮಹಾಮೈತ್ರಿಯ ಭಾಗವಾಗಿದ್ದಾರೆ. ಹಿಂದೆ ಹಲವು ಬಾರಿ ಅವರು ಮಾಧೇಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಅವರು ಅಲ್ಲಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಿಂದಲೂ ಜೆಡಿಯು ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಹಾಗಾಗಿ, ತಮ್ಮ ‘ಶತ್ರು’ಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿತೀಶ್‌ಗೆ ಅವಕಾಶ ಇದೆ.

ಶರದ್‌ ಯಾದವ್‌ಗೆ ಆರ್‌ಜೆಡಿ ಟಿಕೆಟ್‌

ಜೆಡಿಯುನ ಮಾಜಿ ಅಧ್ಯಕ್ಷ ಶರದ್‌ ಯಾದವ್‌ ಅವರು ಆರ್‌ಜೆಡಿ ಟಿಕೆಟ್‌ನಲ್ಲಿಯೇ ಮಾಧೇಪುರದಿಂದ ಸ್ಪರ್ಧಿಸಲಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅವರು ತಮ್ಮ ಲೋಕತಾಂತ್ರಿಕ ಜನತಾ ದಳವನ್ನು ಆರ್‌ಜೆಡಿ ಜತೆಗೆ ವಿಲೀನ ಮಾಡಲಿದ್ದಾರೆ.

2014ರಲ್ಲಿ ಆರ್‌ಜೆಡಿಯ ಪಪ್ಪು ಯಾದವ್‌ ಅವರು ಮಾಧೇಪುರದಲ್ಲಿ ಶರದ್‌ ಅವರನ್ನು ಸೋಲಿಸಿದ್ದರು. ಮಾಧೇಪುರವನ್ನು ನಾಲ್ಕು ಬಾರಿ ಲೋಕಸಭೆಯಲ್ಲಿ ಶರದ್‌ ಪ್ರತಿನಿಧಿಸಿದ್ದಾರೆ. ಒಮ್ಮೆ ಅವರು ಈ ಕ್ಷೇತ್ರದಲ್ಲಿ ಲಾಲು ಅವರನ್ನು ಸೋಲಿಸಿದ್ದರು. 2004ರ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಶರದ್‌ ಅವರನ್ನು ಸೋಲಿಸುವ ಮೂಲಕ ಲಾಲು ಲೆಕ್ಕ ಚುಕ್ತಾ ಮಾಡಿಕೊಂಡಿದ್ದಾರೆ.

ಮೈತ್ರಿಯೊಳಗೆ ಯಾರಿಗೆ ಮೇಲುಗೈ

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಯು ಮತ್ತು ಬಿಜೆಪಿ ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಉಳಿದ ಆರು ಕ್ಷೇತ್ರಗಳನ್ನು ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿಗೆ ಬಿಟ್ಟುಕೊಡಲಾಗಿದೆ. ಈ ಹಂಚಿಕೆಯಲ್ಲಿ ನಿತೀಶ್‌ಗೆ ಹಿನ್ನಡೆ ಆಗಿದೆ ಎಂದು ಕೆಲವರು ಹೇಳಿದರೆ, ನಿತೀಶ್‌ ಮೇಲುಗೈ ಸಾಧಿಸಿದ್ದಾರೆ ಎಂಬುದು ಅವರ
ಅನುಯಾಯಿಗಳ ವಾದ.

ಬಿಹಾರದ ಎನ್‌ಡಿಎಯಲ್ಲಿ ಜೆಡಿಯು ಮುಖ್ಯ ಪಕ್ಷ. ಮುಖ್ಯಮಂತ್ರಿ ಸ್ಥಾನವೂ ಆ ಪಕ್ಷಕ್ಕೇ ಇದೆ. ಹಾಗಿರುವಾಗ ಲೋಕಸಭಾ ಚುನಾವಣೆಯ ಸ್ಥಾನ ಹಂಚಿಕೆಯಲ್ಲಿ ಸಿಂಹಪಾಲು ಜೆಡಿಯು ಪಕ್ಷಕ್ಕೆ ಸಿಗಬೇಕಿತ್ತು ಎಂಬ ವಾದ ಇದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಗೆಲ್ಲಲು ಸಾಧ್ಯವಾಗಿದ್ದು ಎರಡು ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿ 22 ಕ್ಷೇತ್ರಗಳನ್ನು ಗೆದ್ದಿತ್ತು. ಹಾಗಿರುವಾಗ ಜೆಡಿಯುಗೆ 17 ಕ್ಷೇತ್ರಗಳು ಸಿಕ್ಕಿದ್ದು ದೊಡ್ಡ ಮೇಲುಗೈ.

ಕಳೆದ ಬಾರಿ ಗೆದ್ದ ಐದು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿರುವುದು ದೊಡ್ಡ ಗೆಲುವು ಎಂದು ನಿತೀಶ್‌ ನಿಷ್ಠರು ಹೇಳುತ್ತಿದ್ದಾರೆ.

ಮೈತ್ರಿಯಲ್ಲಿ ಕನ್ಹಯ್ಯಾಗಿಲ್ಲ ಸ್ಥಾನ

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಕನ್ಹಯ್ಯಾ ಕುಮಾರ್‌ ಅವರು ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಮಹಾಮೈತ್ರಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಹಳ ಬಲವಾಗಿಯೇ ಕೇಳಿ ಬಂದಿತ್ತು. ಆದರೆ ಈ ಸಾಧ್ಯತೆ ಈಗ ಕ್ಷೀಣವಾಗಿದೆ.

ಕನ್ಹಯ್ಯಾ ಅವರು ಸದಸ್ಯರಾಗಿರುವ ಸಿಪಿಐಗೆ ಬಿಹಾರ ಮಹಾಮೈತ್ರಿಯಲ್ಲಿ ಯಾವುದೇ ಕ್ಷೇತ್ರ ದೊರೆತಿಲ್ಲ. ಹಾಗಾಗಿ, ಕನ್ಹಯ್ಯಾ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ.

‘ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಜತೆಗೆ ಮಾತುಕತೆ ನಡೆಸಿದ್ದೆವು. ಬೇಗುಸರಾಯ್‌ ಮತ್ತು ಮಧುಬನಿ ಸೇರಿ ಆರು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಲಾಲು ಭರವಸೆ ಕೊಟ್ಟಿದ್ದರು. ಈಗ ಪಕ್ಷದ ವ್ಯವಹಾರ ನೋಡಿಕೊಳ್ಳುತ್ತಿರುವ ತೇಜಸ್ವಿ ಯಾದವ್‌ಗೆ ಈ ವಿಚಾರ ತಿಳಿದಂತಿಲ್ಲ. ಮಹಾಮೈತ್ರಿಯಲ್ಲಿ ಇಲ್ಲ ಎಂದಾದರೆ ನಾವು ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತೇವೆ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಿಪಿಐನ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಹೇಳಿದ್ದಾರೆ.

ಕನ್ಹಯ್ಯಾ ಅವರ ವಿಚಾರ ಸೀಟು ಹಂಚಿಕೆ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪವಾಗಿಯೇ ಇಲ್ಲ ಎಂದು ಆರ್‌ಜೆಡಿ ಮುಖಂಡರು ಹೇಳಿದ್ದಾರೆ.

ದೇಶದ್ರೋಹ ಆರೋಪದ ಪ್ರಕರಣದಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಬಿಡುಗಡೆಯಾಗಿ ಬಿಹಾರಕ್ಕೆ ಬಂದಾಗ ಲಾಲು ಅವರು ಹಾರ್ದಿಕ ಸ್ವಾಗತ ನೀಡಿದ್ದರು.

ತೇಜಸ್ವಿ ಅವರು ಮಾಡಿದ ದೂರವಾಣಿ ಕರೆಗಳಿಗೆ ಕನ್ಹಯ್ಯಾ ಅವರು ಸ್ಪಂದಿಸಲಿಲ್ಲ. ಹಾಗಾಗಿ ಕನ್ಹಯ್ಯಾ ಅವರಿಗೆ ಟಿಕೆಟ್‌ ಕೊಡಲು ನಿರಾಕರಿಸಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ.

***

* ವೈಯಕ್ತಿಕ ಬದ್ಧತೆಯ ವಿಚಾರದಲ್ಲಿ ಜಯಪ್ರಕಾಶ್‌ ನಾರಾಯಣ್‌, ರಾಮ್‌ಮನೋಹರ್‌ ಲೋಹಿಯಾ ಮತ್ತು ಕರ್ಪೂರಿ ಠಾಕೂರ್‌ ಅವರ ಹಾದಿಯಲ್ಲಿ ಸಾಗುತ್ತಿರುವ ತಮ್ಮ ತಲೆಮಾರಿನ ಏಕೈಕ ನಾಯಕ ನಿತೀಶ್‌

-ಕೆ.ಸಿ.ತ್ಯಾಗಿ, ಜೆಡಿಯು ವಕ್ತಾರ

* ಮೋದಿ ಅವರ ಸವಾಲು ಎದುರಿಸಲು ಗಂಭೀರವಾದ ಏನನ್ನಾದರೂ ಮಾಡಬೇಕು ಎಂದು ಬಿಜೆಪಿ ಜತೆಗಿನ ಸಖ್ಯ ಕಡಿದುಕೊಂಡಾಗ ನಿತೀಶ್‌ ಅವರಿಗೆ ಹೇಳಿದ್ದೆ. ಅದಕ್ಕೆ ಕಿವಿಗೊಡುವ ಬದಲು ಅವರು ನನ್ನನ್ನು ಜೆಡಿಯುನಿಂದ ಹೊರಗೆ ಹಾಕಿದರು

-ಶಿವಾನಂದ ತಿವಾರಿ,ಆರ್‌ಜೆಡಿ ಉಪಾಧ್ಯಕ್ಷ (ನಿತೀಶ್‌ ಅವರ ಜತೆ ದೀರ್ಘ ಕಾಲ ಇದ್ದವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT