ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಡುವೆ ನಾಯಕನಾಗಿ ಬೆಳೆದ ಜಗನ್‌

ಫಲ ಕೊಡಬಹುದೇ ಒಂದು ವರ್ಷದ ಪಾದಯಾತ್ರೆ?
Last Updated 30 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಹೈದರಾಬಾದ್‌: ವಿಭಜಿತ ಆಂಧ್ರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಬೇಕು ಎಂಬ ಹುರುಪು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ವೈ.ಎಸ್‌ ಜಗನ್‌ಮೋಹನ್‌ ರೆಡ್ಡಿ ಅವರಲ್ಲಿ ಇತ್ತು. ಆದರೆ, 2014 ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಈ ಹುದ್ದೆ ಅವರ ಕೈತಪ್ಪಿತು. ಹಾಗಾಗಿ, ಈ ಬಾರಿಯ ವಿಧಾನಸಭಾ ಚುನಾವಣೆ ಅವರಿಗೆ ಬಹಳ ಮುಖ್ಯ. ತಮ್ಮ ಬಗ್ಗೆ ಜನರಲ್ಲಿ ಇದ್ದ ಭಾವನೆಯನ್ನೇ ಬದಲಿಸುವ ಮೂಲಕ ಮುಖ್ಯಮಂತ್ರಿಗೆ ಹುದ್ದೆಗೆ ಅವರು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರು ರಕ್ತ, ಬೆವರು, ಕಣ್ಣೀರು ಹರಿಸಿದ್ದಾರೆ.

ತಂದೆ ವೈ.ಎಸ್‌. ರಾಜಶೇಖರ ರೆಡ್ಡಿ ಅವರು ‘ಪ್ರಜಾ ಪ್ರಸ್ಥಾನಂ’ ಎಂಬ ಪಾದಯಾತ್ರೆಯ ಮೂಲಕ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಈಗ, ಜಗನ್‌ ಅವರು ತಮ್ಮ ‘ಮಹಾ ಸಂಕಲ್ಪ ಪಾದಯಾತ್ರೆ’ಯ ಮೂಲಕ ಸತತ 360 ದಿನ ನಡೆದು ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಪಾದಯಾತ್ರೆಯ ವಿಚಾರದಲ್ಲಿ ತಂದೆಯ ದಾಖಲೆಯನ್ನು ಮುರಿದಿದ್ದಾರೆ.

‘ಜಗನ್‌ ಎಂದರೆ ಬೆಂಗಳೂರಿನ ಭವ್ಯ ಬಂಗಲೆಯಲ್ಲಿ ಇರುವ ಹುಡುಗ’ ಎಂಬ ಭಾವನೆಯನ್ನು ಮರೆಸಿ ಹಾಕಿದ್ದಾರೆ. ಆಂಧ್ರ ಪ್ರದೇಶದ ಮೂಲೆ ಮೂಲೆಯಲ್ಲಿಯೂ ಅವರು ಈಗ ಮನೆಮಾತಾಗಿದ್ದಾರೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೇ ಜಗನ್‌ ಅವರು ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಬದಲಾಗಿದ್ದರು. ಬಿಕ್ಕಟ್ಟು ಎದುರಿಸುತ್ತಿರುವ ಆಂಧ್ರ ಪ್ರದೇಶವನ್ನು ಕಲ್ಯಾಣ ರಾಜ್ಯವಾಗಿ ಪರಿವರ್ತನೆ ಮಾಡುವ ಭರವಸೆಯನ್ನು ಅವರು ಈಗ ನೀಡುತ್ತಿದ್ದಾರೆ.

ಇತರ ನಾಯಕರಿಗೆ ಹೋಲಿಸಿದರೆ ಕಿರಿಯ ವಯಸ್ಸಿನ ಜಗನ್‌ ಅವರು ಯಾವುದೇ ತಪ್ಪು ಮಾಡದಿರಲಿ, ಆ ಮೂಲಕ ಟಿಡಿಪಿ ಅಥವಾ ಪವನ್‌ ಕಲ್ಯಾಣ್‌ ಅವರ ಜನಸೇನಾಕ್ಕೆ ಸಣ್ಣ ಅನುಕೂಲವನ್ನೂ ಒದಗಿಸದಿರಲಿ ಎಂದು ವೈಎಸ್‌ಆರ್‌ಪಿ ಮುಖಂಡರು ಪ್ರಾರ್ಥಿಸುತ್ತಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರ ಟಿಆರ್‌ಎಸ್‌ಗೆ ಜಗನ್‌ ಅವರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿರುವುದು ಚಂದ್ರಬಾಬು ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ ಎಂಬುದು ವೈಎಸ್‌ಆರ್‌ಪಿಗೆ ಈಗ ಅರಿವಾಗಿದೆ. ‘ಅಮಾಯಕ’ ಜಗನ್‌ ಅವರ ಮೂಲಕ ಆಂಧ್ರವನ್ನು ಪರೋಕ್ಷವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಚಂದ್ರಶೇಖರ ರಾವ್‌ ಮುಂದಾಗಿದ್ದಾರೆ ಎಂದು ಚಂದ್ರಬಾಬು ಹೇಳುತ್ತಿದ್ದಾರೆ. ಇದು ನಿಧಾನಕ್ಕೆ ಜನರ ಮನದಾಳಕ್ಕೆ ಇಳಿಯುತ್ತಿದೆ.

ಈ ಬಾರಿ ತನಗೆ ಸ್ಪರ್ಧೆಯೇ ಇಲ್ಲ ಎಂದು ವೈಎಸ್‌ಆರ್‌ಪಿ ಆರಂಭದಲ್ಲಿ ಭಾವಿಸಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ಜಗನ್‌ ಮೇಲೆ ಹಲ್ಲೆ, ಪುಲಿವೆಂದುಲದಲ್ಲಿ ಜಗನ್‌ ಮಾವನ ಹತ್ಯೆ, ಆಂಧ್ರ ಸರ್ಕಾರವು ದತ್ತಾಂಶ ಕಳವು ಮಾಡಿದೆ ಎಂದು ತೆಲಂಗಾಣ ಮಾಡಿರುವ ಆರೋಪಗಳು ಚಂದ್ರಬಾಬು ಅವರಿಗೆ ವರವಾಗಿ ಪರಿಣಮಿಸಿದೆ. ಟಿಡಿಪಿ ಮತ್ತೆ ತೀವ್ರ ಪೈಪೋಟಿ ಒಡ್ಡುವ ಸ್ಥಿತಿಗೆ ಬರಲು ಇವು ಕಾರಣವಾಗಿವೆ.

‘ಭರವಸೆ’ಯ ನಾಯಕ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಯಾವುದೇ ಭರವಸೆ ಈಡೇರಿಸಿಲ್ಲ ಎಂದುರಾಜ್ಯದ ಉದ್ದಕ್ಕೂ ನಡೆಸಿದ ಯಾತ್ರೆ ಸಂದರ್ಭದಲ್ಲಿ ಜಗನ್‌ ಹರಿಹಾಯ್ದಿದ್ದಾರೆ. ತಮ್ಮನ್ನು ಚುನಾಯಿಸಿದರೆ ಜನರು ಕೇಳುವುದೆಲ್ಲವನ್ನೂ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ರ‍್ಯಾಲಿಗಳಲ್ಲಿ ಚಂದ್ರಬಾಬು ಮತ್ತು ಮಗ ಲೋಕೇಶ್‌ ಅವರ ವಿರುದ್ಧ ಜಗನ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾಗ ಸೇರಿದ್ದ ಜನರು ಅದಕ್ಕೆ ದನಿಗೂಡಿಸಿದ್ದರು. ಪಾದಯಾತ್ರೆಯ ಅನುಭವಗಳನ್ನು ಸಮಾವೇಶಗಳಲ್ಲಿ ಹಂಚಿಕೊಳ್ಳುವ ಮೂಲಕ ಒಂದೊಂದು ಸಮುದಾಯವನ್ನೂ ಮುಟ್ಟುವ ಯತ್ನವನ್ನು ಅವರು ಮಾಡುತ್ತಿದ್ದಾರೆ.

ಜಗನ್‌ ಅವರ ಒಂಬತ್ತು ಅಂಶಗಳ ಕಾರ್ಯಕ್ರಮ ‘ನವರತ್ನ’ಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ, ಇವುಗಳಲ್ಲಿ ಕೆಲವನ್ನು ಚಂದ್ರಬಾಬು ಅವರು ಜಾರಿಗೆ ತಂದಿದ್ದಾರೆ. ಏನೇ ಆದರೂ ಅದು ತಮಗೆ ಸಿಕ್ಕ ಜಯ ಎಂದು ಜಗನ್‌ ಹೇಳುತ್ತಿದ್ದಾರೆ. ವ್ಯಾಪಾರಿ ಮನೋಭಾವದ ಚಂದ್ರಬಾಬು ಅವರು ಹೀಗಾದರೂ ಜನೋಪಯೋಗಿ ಕೆಲಸ ಮಾಡಿದಂತಾಯಿತಲ್ಲ ಎಂಬುದು ಅವರ ಪ್ರತಿಕ್ರಿಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT