ಪ್ರಾದೇಶಿಕ ಪಕ್ಷಗಳಿಗೆ ನೆಲೆಯೇ ಇಲ್ಲ

ಮಂಗಳವಾರ, ಏಪ್ರಿಲ್ 23, 2019
29 °C
ಉತ್ತರಾಖಂಡ: ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ l ಎಸ್‌ಪಿ–ಬಿಎಸ್‌ಪಿ ಲೆಕ್ಕಕ್ಕಿಲ್ಲ

ಪ್ರಾದೇಶಿಕ ಪಕ್ಷಗಳಿಗೆ ನೆಲೆಯೇ ಇಲ್ಲ

Published:
Updated:
Prajavani

ಡೆಹ್ರಾಡೂನ್‌ (ಪಿಟಿಐ): ಉತ್ತರಾಖಂಡ ದಲ್ಲಿ ಲೋಕಸಭೆಯ ಐದು ಕ್ಷೇತ್ರಗಳಿವೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಈ ಬಾರಿ ಸಮಾಜವಾದಿ ಪಕ್ಷ ಸ್ಪರ್ಧಿಸದಿರಲು ನಿರ್ಧರಿಸಿದೆ. ಬಿಎಸ್‌ಪಿ ಹಿಂದಿನ ಚುನಾವಣೆಗಳಲ್ಲಿ ಹೆಚ್ಚು ಮತವನ್ನೇನೂ ಪಡೆದುಕೊಂಡಿಲ್ಲ. ರಾಜ್ಯದ ಸಣ್ಣ ಪಕ್ಷಗಳಿಗೂ ಹೇಳಿಕೊಳ್ಳುವಂತಹ ನೆಲೆ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದೇ 11ರಂದು ಇಲ್ಲಿನ ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 

2000ದಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ಬಳಿಕ ಈ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಾಬಲ್ಯವೇ ಇದೆ. 2004ರಲ್ಲಿ ಎಸ್‌ಪಿ ಅಭ್ಯರ್ಥಿ ಹರಿದ್ವಾರದಿಂದ ಒಮ್ಮೆ ಗೆದ್ದಿದ್ದರು. ಎಸ್‌ಪಿಯ ರಾಜೇಂದ್ರ ಸಿಂಗ್‌ ಬಾಡಿ ಅವರು ಬಿಎಸ್‌ಪಿಯ ಭಗವಾನ್‌
ದಾಸ್‌ ಅವರನ್ನು ಸೋಲಿಸಿ ಸಂಸದರಾಗಿದ್ದರು. 

2009ರಲ್ಲಿ ಇಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. 2014ರಲ್ಲಿ ಈ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಕಿತ್ತುಕೊಂಡಿತು. 

ಇಲ್ಲಿ ಕಾಂಗ್ರೆಸ್‌–ಬಿಜೆಪಿ ನಡುವೆ ಸದಾ ನೇರ ಸ್ಪರ್ಧೆಯೇ ಇದೆ ಯಾಕೆ ಎಂಬುದನ್ನು ರಾಜಕೀಯ ವಿಶ್ಲೇಷಕ ಜೈಸಿಂಗ್‌ ರಾವತ್‌ ಅವರು
ಹೀಗೆ ವಿವರಿಸುತ್ತಾರೆ: ‘ಇದು ಗಡಿ ರಾಜ್ಯ. ಇಲ್ಲಿನ ಗಣನೀಯ ಪ್ರಮಾಣದ ನಿವಾಸಿಗಳು ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ, ರಾಷ್ಟ್ರೀಯ ಭಾವನೆ ಇಲ್ಲಿ ಯಾವಾಗಲೂ ಮುನ್ನೆಲೆಯಲ್ಲಿಯೇ ಇರುತ್ತದೆ. ಪ್ರಾದೇಶಿಕ ಪಕ್ಷಗಳು ಅಥವಾ ಜನಾಂಗೀಯವಾದಿ ಪಕ್ಷಗಳಿಗೆ ಇಲ್ಲಿ ಅವಕಾಶ ಸಿಕ್ಕಿಲ್ಲ’. 

ಉತ್ತರಾಖಂಡದ ಪ್ರಮುಖ ನಾಯಕರಾದ ಗೋವಿಂದವಲ್ಲಭ ಪಂತ್‌, ಹೇಮಾವತಿ ನಂದನ್‌ ಬಹುಗುಣ ಮತ್ತು ಎನ್‌.ಡಿ. ತಿವಾರಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಇತ್ತು. ಇಲ್ಲಿನ ಜನರು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿಯೇ ಯೋಚಿಸುತ್ತಾರೆ ಎಂದು ಅವರು ವಿವರಿಸುತ್ತಾರೆ.

ಯಾವತ್ತೂ ಇಲ್ಲಿ ಗೆಲ್ಲದ ಬಿಎಸ್‌ಪಿ, ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಆ ಪಕ್ಷದ ವಕ್ತಾರ ರಾಜೇಂದ್ರ ಸಿಂಗ್‌ ಹೇಳುತ್ತಾರೆ. 

ಎಸ್‌ಪಿ ಮತ್ತು ಬಿಎಸ್‌ಪಿಯ ಮೈತ್ರಿ ಉತ್ತರಾಖಂಡಕ್ಕೂ ವಿಸ್ತರಿಸಿದೆ.

ಈ ಮೈತ್ರಿ ಲೆಕ್ಕಾಚಾರದಂತೆ ಪೌರಿ ಕ್ಷೇತ್ರ ಎಸ್‌ಪಿ ಪಾಲಿಗೆ ಬಂದಿದೆ. ಹಾಗಿದ್ದರೂ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರಲು ಆ ಪ‍ಕ್ಷ ನಿರ್ಧರಿಸಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಹೆಂಡತಿ ಡಿಂಪಲ್‌ ಯಾದವ್‌ ಅವರ ತವರು ಉತ್ತರಾಖಂಡ. ಹಾಗಾಗಿ ಪೌರಿಯಿಂದ ಡಿಂಪಲ್‌ ಸ್ಪರ್ಧಿಸಬಹುದು ಎಂಬ ವದಂತಿ ವ್ಯಾಪಕವಾಗಿ
ಹರಡಿತ್ತು. 

ಫಲ’ ನೀಡಲಿಲ್ಲ ಪ್ರತ್ಯೇಕ ರಾಜ್ಯ

ಎರಡು ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯದಿಂದಾಗಿ ಪ್ರಾದೇಶಿಕ ಪಕ್ಷಗಳು ಇಲ್ಲಿ ನೆಲ ಕಾಣಲು ಸಾಧ್ಯವಾಗಲೇ ಇಲ್ಲ. ಪ್ರತ್ಯೇಕ ಉತ್ತರಾಖಂಡ ರಾಜ್ಯಕ್ಕಾಗಿ ಉತ್ತರಾಖಂಡ ಕ್ರಾಂತಿ ದಳವು 1990ರ ದಶಕದಲ್ಲಿ ಚಳವಳಿ ನಡೆಸಿತ್ತು. ಆದರೆ, ಉತ್ತರಾಖಂಡ ಪ್ರತ್ಯೇಕ ರಾಜ್ಯವಾದ ಬಳಿಕ ಈ ಪಕ್ಷಕ್ಕೆ ಹೆಚ್ಚಿನ ಜನಬೆಂಬಲ ದೊರೆಯಲಿಲ್ಲ.  

ಪ್ರಾದೇಶಿಕ ಪಕ್ಷ ಕಟ್ಟುವ ಹಲವು ಯತ್ನಗಳು ಹಿಂದೆ ನಡೆದಿವೆ. ಆದರೆ, ಅವೆಲ್ಲವೂ ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಬಳಿಕ ವಿಲೀನವಾದವು. 

ಎದೆಗುಂದದ ಹೋರಾಟ

ಉತ್ತರಾಖಂಡ ಕ್ರಾಂತಿ ದಳ ಈ ರಾಜ್ಯದ ರಾಜಕಾರಣದಲ್ಲಿ ಈಗಲೂ ಇದೆ. ಈ ಪಕ್ಷಕ್ಕೆ ದೊಡ್ಡ ಬೆಂಬಲ ನೆಲೆಯೇನೂ ಇಲ್ಲ. ಈ ಪಕ್ಷದ ಅಧ್ಯಕ್ಷ ದಿವಾಕರ್ ಭಟ್‌ ಅವರು ಉತ್ತರಾಖಂಡ ಪ್ರತ್ಯೇಕ ರಾಜ್ಯ ಚಳವಳಿಯ ಅತ್ಯಂತ ದೊಡ್ಡ ನಾಯಕ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷದ ಯಾವುದೇ ಅಭ್ಯರ್ಥಿಗೆ ಠೇವಣಿ ದೊರೆತಿಲ್ಲ. ಈ ಬಾರಿ ಎಲ್ಲ ಐದು ಕ್ಷೇತ್ರಗಳಿಂದಲೂ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. 

ಖಂಡೂರಿ ಅತೃಪ್ತಿ?

ಬಿ.ಸಿ. ಖಂಡೂರಿ ಅವರು ಉತ್ತರಾಖಂಡದಲ್ಲಿ ಬಿಜೆಪಿಯ ಹಿರಿಯ ಮುಖಂಡ. ಈ ರಾಜ್ಯದ ಮುಖ್ಯಮಂತ್ರಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ರಕ್ಷಣಾ ವಿಚಾರಗಳ ಸಂಸತ್‌ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಖಂಡೂರಿ ಅವರನ್ನು ತೆಗೆಯಲಾಯಿತು. ಇದು ಅವರಿಗೆ ಅತೃಪ್ತಿ ಉಂಟು ಮಾಡಿದೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಈ ರಾಜ್ಯದಲ್ಲಿ ನಡೆಸಿದ ರ್‍ಯಾಲಿಯ ಪೋಸ್ಟರ್‌ಗಳಲ್ಲಿ ಖಂಡೂರಿ ಅವರ ಚಿತ್ರ ಇರಲಿಲ್ಲ.

ಅದಕ್ಕೂ ಮೊದಲು, ಖಂಡೂರಿ ಅವರ ಮಗ ಮನೀಶ್‌ ಖಂಡೂರಿ ಅವರು ಕಾಂಗ್ರೆಸ್‌ ಸೇರಿದ್ದರು. ಈ ಬಾರಿ ಅವರು ಪೌರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈಗ ಬಿ.ಸಿ.ಖಂಡೂರಿ ಅವರು ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !