ಬೆಂಗಾವಲು ಕಾರಿನಲ್ಲಿ ₹1.8 ಕೋಟಿ ಪತ್ತೆ

ಮಂಗಳವಾರ, ಏಪ್ರಿಲ್ 23, 2019
31 °C
ಅರುಣಾಚಲ ಸಿ.ಎಂ ವಿರುದ್ಧ ಆರೋಪ

ಬೆಂಗಾವಲು ಕಾರಿನಲ್ಲಿ ₹1.8 ಕೋಟಿ ಪತ್ತೆ

Published:
Updated:

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ‘ವೋಟಿಗಾಗಿ ನೋಟು’ ಜಾಲ ಭೇದಿಸಲಾಗಿದೆ ಎಂದು ಕಾಂಗ್ರೆಸ್‌ ಬುಧವಾರ ಆರೋಪಿಸಿದೆ. ಅಲ್ಲಿನ ಮುಖ್ಯಮಂತ್ರಿ ಪೆಮಾ ಖಂಡು ಅವರ ಬೆಂಗಾವಲು ವಾಹನವೊಂದರಲ್ಲಿ ₹1.8 ಕೋಟಿ ಪತ್ತೆಯಾಗಿದೆ. ಹಾಗಾಗಿ ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಒತ್ತಾಯಿಸಿದೆ. 

ಪಸಿಘಾಟ್‌ ಸಮೀಪ ಮಂಗಳವಾರ ಮಧ್ಯರಾತ್ರಿ ಮುಖ್ಯಮಂತ್ರಿ ಬೆಂಗಾವಲು ಪಡೆಯ ಒಂದು ವಾಹನದಲ್ಲಿ ಈ ಹಣ ಪತ್ತೆಯಾಗಿದೆ. ಅದಕ್ಕೆ ಕೆಲವೇ ತಾಸು ಮೊದಲು ಅಲ್ಲಿ ಪ್ರಧಾನಿ ಮೋದಿ ಅವರ ರ್‍ಯಾಲಿ ನಡೆದಿತ್ತು ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. 

ಖಂಡು ಮತ್ತು ಉಪ ಮುಖ್ಯಮಂತ್ರಿ ಚೌನ್‌ ಮೇನ್‌ ಅವರನ್ನು ವಜಾ ಮಾಡಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತಪಿರ್‌ ಗಾವೊ ಅವರ ಉಮೇದುವಾರಿಕೆಯನ್ನು ರದ್ದು ಮಾಡಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ. 

ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಪೊಲೀಸರು ವಾಹನದಿಂದ ಹಣವನ್ನು ವಶಕ್ಕೆ ಪಡೆಯುವ ಎರಡು ವಿಡಿಯೊಗಳನ್ನು ಅವರು ಪ್ರದರ್ಶಿಸಿದ್ದಾರೆ. ವಿಡಿಯೊ ಅಸಲಿಯೇ ಎಂಬುದನ್ನು ಅವರು ಹೇಳಿಲ್ಲ. ಆದರೆ, ಈ ವಿಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ಲಭ್ಯವಿವೆ ಎಂದಿದ್ದಾರೆ.

ಬಿಜೆಪಿ ಮತ್ತು ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

**

‘ಚುಣಾವಣಾ ಆಯೋಗ ಏಕೆ ನಿದ್ದೆ ಮಾಡುತ್ತಿದೆ? ಪ್ರಧಾನಿ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಈತನಕ ಪ್ರಕರಣ ಏಕೆ ದಾಖಲಿಸಿಕೊಂಡಿಲ್ಲ’
-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ಮುಖ್ಯ ವಕ್ತಾರ

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !