‘ನಮೋ ಟಿ.ವಿ. ವಿಶೇಷ ಸೇವೆ’

ಭಾನುವಾರ, ಏಪ್ರಿಲ್ 21, 2019
26 °C
ಸುದ್ದಿವಾಹಿನಿ ಎಂದ ಬಳಿಕ ಮಾತು ಬದಲಿಸಿದ ಟಾಟಾ ಸ್ಕೈ

‘ನಮೋ ಟಿ.ವಿ. ವಿಶೇಷ ಸೇವೆ’

Published:
Updated:
Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೊದಿ ಅವರ ಭಾಷಣಗಳು ಹಾಗೂ ಬಿಜೆಪಿ ಪರ ಸುದ್ದಿಗಳನ್ನು ಒಳಗೊಂಡಿರುವ ನಮೋ ಟಿ.ವಿ. ಪ್ರಸಾರ ವಿಚಾರ ತಿರುವು ಪಡೆದುಕೊಂಡಿದೆ. ‘ನಮೋ ಟಿ.ವಿ. ಹಿಂದಿ ಸುದ್ದಿ ವಾಹಿನಿ’ ಎಂದು ಗುರುವಾರ ಹೇಳಿದ್ದ ಡಿಟಿಎಚ್ ಸೇವಾದಾತ ಸಂಸ್ಥೆ ಟಾಟಾ ಸ್ಕೈ, ಸ್ವಲ್ಪ ಸಮಯದಲ್ಲೇ ತನ್ನ ಮಾತು ಬದಲಿಸಿದೆ.

‘ನಮೋ ಟಿ.ವಿ ಹಿಂದಿ ಸುದ್ದಿವಾಹಿನಿ ಅಲ್ಲ. ಅದು ಅಂತರ್ಜಾಲದ ಮೂಲಕ ಪ್ರಸಾರವಾಗುವ ವಿಶೇಷ ಸೇವೆಯಾಗಿದ್ದು, ಇದಕ್ಕೆ ಸರ್ಕಾರದ ಪರವಾನಗಿ ಬೇಕಿಲ್ಲ. ಬಿಜೆಪಿಯಿಂದ ಸುದ್ದಿ ಹಾಗೂ ಮಾಹಿತಿಗಳು ಪೂರೈಕೆಯಾಗುತ್ತವೆ’ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. 

ಗ್ರಾಹಕರೊಬ್ಬರ ಟ್ವೀಟ್‌ಗೆ ಕಳೆದ ವಾರ ಉತ್ತರಿಸಿದ್ದ ಟಾಟಾ ಸ್ಕೈ ಸಿಬ್ಬಂದಿಯೊಬ್ಬರು, ‘ಹಿಂದಿ ಸುದ್ದಿವಾಹಿನಿಯಲ್ಲಿ ರಾಷ್ಟ್ರ ರಾಜಕೀಯದ ತಾಜಾ ಸುದ್ದಿಗಳು ಪ್ರಸಾರವಾಗುತ್ತವೆ’ ಎಂದಿದ್ದರು. ಟ್ವಿಟರ್‌ನಲ್ಲಿ ಮತ್ತಷ್ಟು ಪ್ರಶ್ನೆಗಳು ಎದುರಾದ ಕಾರಣ ಸಂಸ್ಥೆಯ ಸಿಇಒ ಹರಿತ್ ನಾಗ್‌ಪಾಲ್ ಅವರು ಸ್ಪಷ್ಟನೆ ನೀಡಿದರು.

‘ನಮೋ ಟಿ.ವಿ. ಸುದ್ದಿ ವಾಹಿನಿಯಲ್ಲ. ಈ ಮಾಹಿತಿ ತಪ್ಪಾಗಿ ಪ್ರಕಟವಾಗಿದೆ. ಬಿಜೆಪಿಯು ಅಂತರ್ಜಾಲದ ಮೂಲಕ ಸುದ್ದಿ
ಹಾಗೂ ಮಾಹಿತಿಯನ್ನು ಪೂರೈಸುತ್ತದೆ’ ಎಂದು ಹೇಳಿದ್ದಾರೆ. 

‘ಲಾಂಚ್ ಆಫರ್ ಹೆಸರಿನಲ್ಲಿ ಎಲ್ಲ ಚಂದಾದಾರರಿಗೆ ವಾಹಿನಿ ಲಭ್ಯವಾಗಿದೆ. ಇದನ್ನು ಸ್ಥಗಿತಗೊಳಿಸಲು ಅವಕಾಶವಿಲ್ಲ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.  

ಸಮಯ ಕೇಳಿದ ಐಬಿ: ಈ ಸಂಬಂಧ ವರದಿ ನೀಡಲು ಏಪ್ರಿಲ್ 5ರವರೆಗೆ ಸಮಯ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ‘ನಮೋ ಟಿ.ವಿ. ಸಾಮಾನ್ಯ ವಾಹಿನಿ ಅಲ್ಲ. ಅದು ಜಾಹೀರಾತು ವಾಹಿನಿಯಾಗಿದ್ದು, ಪರವಾನಗಿ ಬೇಕಿಲ್ಲ’ ಎಂದು ಸಚಿವಾಲಯದ ಮೂಲಗಳು ಬುಧವಾರ ತಿಳಿಸಿದ್ದವು.

ಮೋದಿ ಚಿತ್ರ ಬಿಡುಗಡೆ ಸದ್ಯಕ್ಕಿಲ್ಲ

ಮೋದಿ ಅವರ ಜೀನವಾಧಾರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಸಂದೀ‌‍ಪ್ ಸಿಂಗ್ ಗುರುವಾರ ಹೇಳಿದ್ದಾರೆ. ಏಪ್ರಿಲ್ 5ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. 

ಚಿತ್ರ ಬಿಡುಗಡೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಶುಕ್ರವಾರ ನಿರ್ಧಾರ ಪ್ರಕಟಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಚಿತ್ರದ ನಿರ್ಮಾಪಕರು ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅವರಿಂದ ಪ್ರತಿಕ್ರಿಯೆ ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾ ಉಪ ಆಯುಕ್ತ ಸಂದೀಪ್ ಸಕ್ಸೇನಾ ಅವರು ಗುರುವಾರ ಹೇಳಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !