ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ದಾರಿಯಲ್ಲಿ ದ್ರಾವಿಡ ನಾಡು: ಮುನ್ನಡೆಗೆ ಮೇಲಾಟ

ತಮಿಳುನಾಡಿನ ಭವಿಷ್ಯದ ಭಾಷ್ಯ ಬರೆಯಲಿರುವ ಮತದಾನ l ಕರುಣಾನಿಧಿ, ಜಯಲಲಿತಾ ನಿಧನದ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆ
Last Updated 16 ಏಪ್ರಿಲ್ 2019, 2:46 IST
ಅಕ್ಷರ ಗಾತ್ರ

ಚೆನ್ನೈ: ಲೋಕಸಭೆಗೆ ಗುರುವಾರ ಮತ ಚಲಾಯಿಸಲಿರುವ ತಮಿಳುನಾಡು ನಿಜಕ್ಕೂ ಕವಲು ದಾರಿಯಲ್ಲಿದೆ. ತಮಿಳು ರಾಜಕಾರಣದ ದಿಗ್ಗಜರಾದ ಡಿಎಂಕೆಯ ಕರುಣಾನಿಧಿ ಮತ್ತು ಎಐಎಡಿಎಂಕೆಯ ಜಯಲಲಿತಾ ಅವರ ನಿಧನಾನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಈ ಚುನಾವಣೆಯ ಫಲಿತಾಂಶವು ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸುವುದರಲ್ಲಿ ನಿರ್ಣಾಯಕ. ಅಷ್ಟೇ ಅಲ್ಲ, ದ್ರಾವಿಡ ನಾಡಿನ ಹೊಸ ತಲೆಮಾರಿನ ನಾಯಕರು ಯಾರು ಎಂಬುದನ್ನೂ ಇದು ನಿಚ್ಚಳಗೊಳಿಸಲಿದೆ.

ರಾಜ್ಯದಲ್ಲಿ ಐದು ಪ್ರಮುಖ ಗುಂಪುಗಳು ಕಣದಲ್ಲಿವೆ. ಡಿಎಂಕೆ ಮತ್ತು ಎಐಎಡಿಎಂಕೆ ನೇತೃತ್ವದ ಎರಡು ಮೈತ್ರಿಕೂಟಗಳು ಬಲವಾಗಿವೆ. ಎಐಎಡಿಎಂಕೆಯಿಂದ ಸಿಡಿದು ಹೊರಬಂದಿರುವ ಟಿಟಿವಿ ದಿನಕರನ್‌ ಅವರು ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ಎಂಬ ಪಕ್ಷ ಕಟ್ಟಿದ್ದಾರೆ. ಪ್ರಸಿದ್ಧ ನಟ ಕಮಲಹಾಸನ್‌ ಅವರು ಮಕ್ಕಳ್‌ ನೀದಿ ಮಯ್ಯಂ (ಎಂಎನ್‌ಎಂ) ಎಂಬ ಪಕ್ಷ ಸ್ಥಾಪಿಸಿದ್ದಾರೆ. ತಮಿಳು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ) ಕೂಡ ಕಣದಲ್ಲಿದೆ.

ತಮಿಳನಾಡಿನ ಮತದಾರರ ಸಂಖ್ಯೆ ಸುಮಾರು ಆರು ಕೋಟಿ. ಇದೇ 18ರಂದು ಒಂದೇ ಹಂತದಲ್ಲಿ ಎಲ್ಲ ಕ್ಷೇತ್ರಗಳಿಗೆ ಮತದಾನ ಆಗಲಿದೆ. ಈ ಚುನಾವಣೆಯ ಪಲಿತಾಂಶವು ಹಲವು ವಿಧಗಳಲ್ಲಿ ತಮಿಳುನಾಡಿನ ಭವಿಷ್ಯದ ಭಾಷ್ಯ ಬರೆಯಲಿದೆ. ದಿನಕರನ್‌ ಅವರ ಪಕ್ಷ ಏನು ಮಾಡಲಿದೆ ಎಂಬುದು ಎಲ್ಲರೂ ಕುತೂಹಲದಿಂದ ನೋಡುತ್ತಿರುವ ಒಂದು ಅಂಶ. ಎಐಎಡಿಎಂಕೆಯ ಮತಬ್ಯಾಂಕ್‌ಗೆ ದಿನಕರನ್‌ ಲಗ್ಗೆ ಹಾಕುವುದು ನಿಶ್ಚಿತ ಎನ್ನಲಾಗಿದೆ. ಎಂಎನ್‌ಎಂ ಪಕ್ಷವು ಬಿಜೆಪಿವಿರೋಧಿ ಮತಗಳನ್ನು ಒಡೆಯಲಿದೆ. ಆದರೆ, ಇದರ ಪ್ರಮಾಣ ಎಷ್ಟು ಎಂಬುದು ನಿಗೂಢ ಎಂಬ ವಿಶ್ಲೇಷಣೆ ಇದೆ.

ವಿಧಾನಸಭೆಯ 18 ಕ್ಷೇತ್ರಗಳಿಗೂ ಗುರುವಾರ ಮತದಾನ ನಡೆಯಲಿದೆ. ಈ ಉಪಚುನಾವಣೆಯ ಫಲಿತಾಂಶಕ್ಕೆ ಈಗಿನ ರಾಜ್ಯ ಸರ್ಕಾರವನ್ನೇ ಉರುಳಿಸುವ ಶಕ್ತಿ ಇದೆ.

ಮೋದಿಯೇ ಕೇಂದ್ರ

ಆಡಳಿತ ಮತ್ತು ವಿರೋಧ ಪಕ್ಷಗಳೆರಡರ ಗಮನವನ್ನೂ ಹಿಡಿದಿಟ್ಟ ಒಬ್ಬ ವ್ಯಕ್ತಿ ಹಿಂದಿನ ಯಾವ ಚುನಾವಣೆಯಲ್ಲಿಯೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನವರಲ್ಲ. ಹಾಗಿದ್ದರೂ ಎರಡೂ ಮೈತ್ರಿಕೂಟಗಳು ಅವರನ್ನು ಕೇಂದ್ರವಾಗಿಸಿಯೇ ಪ್ರಚಾರ ನಡೆಸುತ್ತಿವೆ.

ಮೋದಿ ವಿರೋಧಿ ಅಲೆ ಸಾಮಾಜಿಕ ಜಾಲತಾಣಕ್ಕಷ್ಟೇ ಸೀಮಿತವಾದ ವಿಚಾರ ಅಲ್ಲ. ಬಿಜೆಪಿ ಮತ್ತು ಎಐಎಡಿಎಂಕೆ ವಿರುದ್ಧ ತಳಮಟ್ಟದಲ್ಲಿ ಭಾರಿ ಅತೃಪ್ತಿ ಇದೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟದ ಸ್ಥಿತಿ ಉತ್ತಮವಾಗಿರುವಂತೆ ಕಾಣಿಸುತ್ತಿದೆ. ರಾಜ್ಯದ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಮೋದಿ ವಿರೋಧಿ ಅಲೆ ಹೆಚ್ಚು ದಟ್ಟವಾಗಿ ಕಾಣಿಸುತ್ತಿದೆ. ಹಾಗಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬಲ ಇಲ್ಲಿ ಹೆಚ್ಚು ಎನ್ನಲಾಗುತ್ತಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಆತ್ಮವಿಶ್ವಾಸ ಹೆಚ್ಚು.

ಡಿಎಂಕೆ ಮತ್ತು ಕಾಂಗ್ರೆಸ್‌ನ ಟೀಕಾಪ್ರಹಾರದ ಮುಖ್ಯ ಗುರಿ ಮೋದಿ ಅವರೇ. ರಾಜ್ಯದ ಎಐಎಡಿಎಂಕೆ ಸರ್ಕಾರದ ಬಗೆಗಿನ ಟೀಕೆಗಳಿಗೆ ಏನಿದ್ದರೂ ಎರಡನೇ ಸ್ಥಾನ. ಇಬ್ಬರು ದಿಗ್ಗಜರು ಇಲ್ಲದ ಮೊದಲ ಚುನಾವಣೆಯಾದ ಕಾರಣ ಈ ಪಕ್ಷಗಳ ಮತ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಸ್ಟಾಲಿನ್‌ಗೆ ಅಗ್ನಿ ಪರೀಕ್ಷೆ

ಎಡಪ್ಪಾಡಿ ಪಳನಿಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಿದ್ದರೆ ಅವರ ಪಕ್ಷವು ಕನಿಷ್ಠ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆದರೆ, ಅವರಿಗೆ ಮಾತ್ರ ಅಲ್ಲ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರಿಗೂ ಇದು ಅಗ್ನಿಪರೀಕ್ಷೆ. ನಾಯಕನಾಗಿ ಅವರ ಜನಪ್ರಿಯತೆ ಮತ್ತು ರಾಜಕಾರಣಿಯಾಗಿ ಅವರ ಚಾತುರ್ಯವನ್ನು ಫಲಿತಾಂಶವು ಒರೆಗೆ ಹಚ್ಚಲಿದೆ.

ಸ್ಟಾಲಿನ್‌ ಅವರಿಗೆ ಪೂರಕವಾದ ರಾಜಕೀಯ ವಾತಾವರಣ ಈಗ ಇದೆ. ಜನಪ್ರಿಯತೆ ಕಳೆದುಕೊಂಡ ರಾಜ್ಯ ಸರ್ಕಾರ, ಬಿಜೆಪಿ ಮತ್ತು ಮೋದಿ ವಿರುದ್ಧ ಆಡಳಿತವಿರೋಧಿ ಅಲೆ, ಜಯಲಲಿತಾ ಅವರ ಅನುಪಸ್ಥಿತಿ ಹಾಗೂ ದಿನಕರನ್‌ ಅವರಿಂದಾಗಿ ಎಐಎಡಿಎಂಕೆ ಮತಗಳ ವಿಭಜನೆ ಎಲ್ಲವೂ ಅವರಿಗೆ ಪೂರಕ.

‘ಈ ಬಾರಿ ಎಲ್ಲ 39 ಕ್ಷೇತ್ರಗಳಲ್ಲಿ ಸ್ಟಾಲಿನ್‌ ಗೆಲ್ಲಬೇಕು. ಇಲ್ಲದಿದ್ದರೆ ಡಿಎಂಕೆ ಸಂಘಟನೆ ಬಲವಾಗಿಲ್ಲ ಎಂದೇ ಅರ್ಥ. ಈ ಬಾರಿಯ ಫಲಿತಾಂಶ ಏನೇ ಆದರೂ ಪಕ್ಷವು ತನ್ನ ಸಾರ್ವಜನಿಕ ವರ್ಚಸ್ಸನ್ನು ಉತ್ತಮಪಡಿಸಿಕೊಳ್ಳಬೇಕಾದ ಅಗತ್ಯ ಇದೆ’ ಎಂದು ಭಾರತೀದಾಸನ್‌ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಿ. ರಾಮಜಯಂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT