ಒಡಕು ಮಾತೇ ಕಾರ್ಯತಂತ್ರ

ಭಾನುವಾರ, ಏಪ್ರಿಲ್ 21, 2019
26 °C
ಧ್ರುವೀಕರಣದ ಹೇಳಿಕೆ–ಅದಕ್ಕೆ ವಿಧಿಸುವ ಶಿಕ್ಷೆ ಒಂದಕ್ಕೊಂದು ಪೂರಕ

ಒಡಕು ಮಾತೇ ಕಾರ್ಯತಂತ್ರ

Published:
Updated:
Prajavani

ನವದೆಹಲಿ: ಲೋಕಸಭೆ ಚುನಾವಣೆಯ ಕಾವು ಏರುತ್ತಿದೆ. ರಾಜಕಾರಣಿಗಳ ಮಾತು ಲಗಾಮಿಲ್ಲದೆ ಹರಿದಾಡುತ್ತಿದೆ. ದ್ವೇಷ ಬಿತ್ತುವ ಮಾತಿನ ಜತೆಗೆ ಕೆಲವೊಮ್ಮೆ ಸೊಂಟದ ಕೆಳಗಿನ ಮಾತು ಕೂಡ ಎಗ್ಗಿಲ್ಲದೆ ಬಳಕೆಯಾಗುತ್ತಿದೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಎಸ್‌ಪಿ ಮುಖಂಡ ಆಜಂ ಖಾನ್‌ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಜಯಪ್ರದಾ ಅವರ ಒಳಉಡುಪಿನ ಬಣ್ಣದ ಬಗ್ಗೆ ನೀಡಿರುವ ಹೇಳಿಕೆ ಒಡಕು ಮಾತಿಗೆ ಇತ್ತೀಚಿನ ಉದಾಹರಣೆ. ಭಾರತದ ರಕ್ಷಣಾ ಪಡೆ ಮೋದಿ ಅವರ ಸೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು. ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದವರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ. ಮುಸ್ಲಿಂ ಮತದಾರರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡಿದವರು ಕೇಂದ್ರ ಸಚಿವೆ ಮೇನಕಾ ಗಾಂಧಿ. ಈ ಎಲ್ಲರಿಗೂ ಪ್ರಚಾರ ನಿರ್ಬಂಧದ ಶಿಕ್ಷೆಯನ್ನು ಆಯೋಗ ವಿಧಿಸಿದೆ. 

ಇಂತಹ ಹೇಳಿಕೆಗಳು ಬಾಯ್ತಪ್ಪಿ ಆಡುವ ಮಾತುಗಳಲ್ಲ, ಅವು ಆಯಾ ಪಕ್ಷದ ಕಾರ್ಯತಂತ್ರದ ಭಾಗವಾಗಿಯೇ ಇರುತ್ತವೆ. ತಮ್ಮ ಪರವಾಗಿ ಮತದಾರರನ್ನು ಧ್ರುವೀಕರಿಸುವುದು ಇದರ ಹಿಂದಿನ ಉದ್ದೇಶ ಎಂದು ಇಂತಹ ಕಾರ್ಯತಂತ್ರಗಳ ಹಿಂದೆ ಇರುವ ‘ಪ್ರಚಾರ ನಿರ್ವಾಹಕರು’ ಹೇಳುತ್ತಾರೆ. ಇಂತಹ ಹೇಳಿಕೆಗೆ ಆಯೋಗವು ನೀಡುವ ಶಿಕ್ಷೆ ಕೂಡ ಈ ಕಾರ್ಯತಂತ್ರದ ಹಿಂದೆ ಅವಿತಿರುವ ಉದ್ದೇಶಕ್ಕೆ ಪೂರಕವಾಗಿಯೇ ಇರುತ್ತದೆ ಎಂದೂ ಅವರು ಹೇಳುತ್ತಾರೆ. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೌಕೀದಾರ ಕಳ್ಳ’ ಎಂದು ಹೇಳಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಸಭ್ಯ ಭಾಷೆ ಬಳಸಿದ ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ಸತ್ಪಾಲ್‌ ಸಿಂಗ್‌ ಸತ್ತಿ ಅವರ ವಿರುದ್ಧ ದೂರು ದಾಖಲಾಗಿದೆ. ತಾವು ತಪ್ಪೇನೂ ಮಾಡಿಲ್ಲ ಎಂದೇ ಸತ್ತಿ ಅವರು ವಾದಿಸುತ್ತಿದ್ದಾರೆ. 

ಪ್ರಧಾನಿಗಳಾಗಿದ್ದ ಕಾಂಗ್ರೆಸ್‌ನ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಭಾರತದ ರಕ್ಷಣಾ ಪಡೆಗಳನ್ನು ಕಟ್ಟುತ್ತಿದ್ದಾಗ ಮೋದಿ ಅವರಿಗೆ ಚೆಡ್ಡಿ ಹಾಕಿಕೊಳ್ಳುವುದಕ್ಕೇ ಬರುತ್ತಿರಲಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಹೇಳಿರುವುದು ಕೂಡ ವಿವಾದವಾಗಿತ್ತು. 

ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ಅವರು ತಮ್ಮ ದುಪ್ಪಟ್ಟಾದ ಒಳಗೆ ಅವಿತುಕೊಳ್ಳುವುದೇ ಒಳ್ಳೆಯದು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಇತ್ತೀಚೆಗೆ ಹೇಳಿದ್ದರು. 

ರಾಹುಲ್‌ ಗಾಂಧಿ ಅವರ ತಂದೆ ರಾಜೀವ್ ಗಾಂಧಿಯೇ ಹೌದು ಎನ್ನುವುದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪುರಾವೆ ಒದಗಿಸುವುದಕ್ಕೆ ಸಾಧ್ಯವೇ ಎಂದು ಬಿಜೆಪಿಯ ಮುಖಂಡ ವಿನಯ ಕಟಿಯಾರ್‌ ಪ್ರಶ್ನಿಸಿದ್ದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. 

ರಾಹುಲ್‌ ವಿರುದ್ಧ ನಡೆದ ವೈಯಕ್ತಿಕ ವಾಗ್ದಾಳಿಗಳು ಅಸಂಖ್ಯ. ಅದೇ ರೀತಿ ಮೋದಿ ಅವರ ವಿರುದ್ಧವೂ ವೈಯಕ್ತಿಕ ಮಟ್ಟದ ಟೀಕೆಗಳು ವ್ಯಕ್ತವಾಗಿವೆ. 

ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲ ಪ್ರಮುಖ ನಾಯಕರ ವಿರುದ್ಧವೂ ಅವಹೇಳನಕಾರಿ ಹೇಳಿಕೆಗಳು ತುಂಬಿ ತುಳುಕುತ್ತಿವೆ. ಅದೇ ರೀತಿ, ರಾಜಕೀಯ ಪಕ್ಷಗಳ ರ‍್ಯಾಲಿಗಳಲ್ಲಿಯೂ ಅಸಭ್ಯ ಭಾಷೆ ಬಳಕೆಗೆ ಯಾವುದೇ ಕಡಿವಾಣ ಇಲ್ಲ. 

‘ಸಾಮಾಜಿಕ ಜಾಲ ತಾಣಗಳ ಮೂಲಕ ನಡೆಯುವ ಪ್ರಚಾರದ ಕೇಂದ್ರವೇ ಅವಹೇಳನಕಾರಿ ಮಾತುಗಳು. ಕೆಲವೊಮ್ಮೆ ಇಂತಹ ಅಸಭ್ಯ ಭಾಷೆಯನ್ನು ವ್ಯಕ್ತಿಗಳ ಪರವಾಗಿ ಬಳಸಲಾಗುತ್ತಿದೆ. ಕೆಲವೊಮ್ಮೆ ಪಕ್ಷಕ್ಕಾಗಿಯೂ ಮಾಡಲಾಗುತ್ತಿದೆ’ ಎಂದು ಚುನಾವಣಾ ಸಂವಹನ ತಜ್ಞರೊಬ್ಬರು ಹೇಳುತ್ತಾರೆ. 

ಇಂತಹ ತಜ್ಞರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಆದರೆ, ‘ವಿವಾದಾತ್ಮಕ ಹೇಳಿಕೆಗಳನ್ನೇ ನೀಡಿ ಎಂದು ಪ್ರಚಾರ ತಜ್ಞರು ನಾಯಕರಿಗೆ ಹೇಳುತ್ತಾರೆ ಎಂಬುದು ನನಗೆ ಗೊತ್ತು. ಜಾತಿ ಮತ್ತು ಧರ್ಮದ ಆಧಾರದಲ್ಲಿ ಧ್ರುವೀಕರಣಕ್ಕೆ ಕಾರಣವಾಗುವ ಹೇಳಿಕೆ ನೀಡಲು ಸಲಹೆ ನೀಡಲಾಗುತ್ತದೆ’ ಎಂದು ವಿವಿಧ ಪಕ್ಷಗಳ ನಾಯಕರ ಪರವಾಗಿ ಕೆಲಸ ಮಾಡಿರುವ ಅನೂಪ್‌ ಶರ್ಮಾ ಹೇಳುತ್ತಾರೆ. 

‘ಮೋದಿಯನ್ನು ಸಿಕ್ಸರ್‌ಗೆ ಅಟ್ಟಿ’

ಪಟ್ನಾ: ‘ನೀವು ಅಲ್ಪಸಂಖ್ಯಾತರು. ಆದರೆ, ಈ ಭಾಗದಲ್ಲಿ ನೀವೇ ಬಹುಸಂಖ್ಯಾತರು. ನಿಮ್ಮ ಮತಗಳೇ ಶೇ 62ಕ್ಕೂ ಹೆಚ್ಚು. ನೀವೆಲ್ಲಾ ಒಂದಾಗಿದ್ದರೆ ಮೋದಿಯನ್ನು ಸಿಕ್ಸರ್‌ಗೆ ಅಟ್ಟಬಹುದು’ ಎಂದು ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು ಬಿಹಾರದ ಕಥಿಹಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ. 

ತಾರೀಖ್‌ ಅನ್ವರ್‌ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. 

ಒವೈಸಿ ಅವರಂತಹ ನಾಯಕರಿಂದ ಮೋಸ ಹೋಗಬೇಡಿ. ಮುಸ್ಲಿಂ ಮತಗಳನ್ನು ಒಡೆಯುವುದಕ್ಕಾಗಿಯೇ ಅವರು ಇಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂದೂ ಸಿಧು ಹೇಳಿದ್ದಾರೆ. ಸಿಧು ಅವರ ಮಾತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಬಿಜೆಪಿ, ಆಯೋಗಕ್ಕೆ ದೂರು ನೀಡಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !