ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾ ಮತದ ಮೊದಲ ಹಂತ ನಾಳೆ

20 ರಾಜ್ಯಗಳ 91 ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ
Last Updated 9 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜನತಂತ್ರದ ಹಬ್ಬದ ಸಂಭ್ರಮ ಗುರುವಾರ ಆರಂಭವಾಗಲಿದೆ. ಲೋಕಸಭೆಗೆ ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತ ಚಲಾವಣೆ ಆಗಲಿದೆ.

ಬಿಜೆಪಿಯ ಮುಖ್ಯ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮೊದಲ ಹಂತದಲ್ಲಿ ಮತದಾನ ನಡೆಯುವ ಪ್ರದೇಶಗಳಲ್ಲಿ ಅವಿರತವಾಗಿ ಸುತ್ತಾಡಿದ್ದಾರೆ.

ಬಹಿರಂಗ ಪ್ರಚಾರ ಮಂಗಳವಾರ ಸಂಜೆ 5 ಗಂಟೆಗೆ ಕೊನೆಗೊಂಡಿದೆ. ಮತ ಗಳಿಕೆಯ ಕೊನೆಯ ಕ್ಷಣದ ಪ್ರಯತ್ನಗಳು ನಡೆಯುತ್ತಿವೆ.

ಯಾರಿಗೆ ಮತ ಹಾಕಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲದ ಮತದಾರರನ್ನು ಓಲೈಸುವ ಕೆಲಸ ಬಿರುಸು ಪಡೆದಿದೆ.

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳಿಗೂ ಗುರುವಾರವೇ ಮತದಾನ ನಡೆಯಲಿದೆ. ಒಡಿಶಾದ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ಆಗಲಿದೆ.

ಎನ್‌ಡಿಎ ಸರ್ಕಾರ ಪುನರಾಯ್ಕೆ ಆಗಲಿದೆಯೇ ಅಥವಾ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಲಿವೆಯೇ ಎಂಬುದನ್ನು ನಿರ್ಧರಿಸುವ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೆ ಇರುವ ಪಣ ಬಹಳ ದೊಡ್ಡದು.

ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ, ಎನ್‌ಡಿಎ ಅಧಿಕಾರಕ್ಕೆ ಮರಳುವ ಸಾಧ್ಯತೆ ಹೆಚ್ಚು. ಕೆಲವು ಸಮೀಕ್ಷೆಗಳು ಎನ್‌ಡಿಎಗೆ ಸರಳ ಬಹುಮತ ಕೊಟ್ಟರೆ, ಕೆಲವು ಸಮೀಕ್ಷೆಗಳು ಈ ಮೈತ್ರಿಕೂಟವು ಬಹುಮತದ ಹತ್ತಿರ ಬರಲಿವೆ ಎಂದು ಅಂದಾಜಿಸಿವೆ.

ಆಂಧ್ರದಲ್ಲಿ ಹಣಾಹಣಿ ತೀವ್ರ

ಆಂಧ್ರ‍ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಯ ಎಲ್ಲಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಆಡಳಿತಾರೂಢ ಟಿಡಿಪಿ ಮತ್ತು ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ.

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೂ ಈ ಹಂತದಲ್ಲಿ ಮತ ಚಲಾವಣೆ ಆಗಲಿದೆ. ಕಳೆದ ಡಿಸೆಂಬರ್‌ನಲ್ಲಿ ಇಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಕೆ. ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ಗೆ ಭಾರಿ ಬಹುಮತ ಸಿಕ್ಕಿದೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೊಡ್ಡ ಬಲ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT