ಬಿಹಾರ: ಸಮೋಸಾದಲ್ಲಿ ಆಲೂ ಈಗಲೂ ಇದೆ, ಲಾಲು ಮಾತ್ರ ಪ್ರಚಾರ ಕಣದಲ್ಲಿಲ್ಲ

ಮಂಗಳವಾರ, ಏಪ್ರಿಲ್ 23, 2019
27 °C

ಬಿಹಾರ: ಸಮೋಸಾದಲ್ಲಿ ಆಲೂ ಈಗಲೂ ಇದೆ, ಲಾಲು ಮಾತ್ರ ಪ್ರಚಾರ ಕಣದಲ್ಲಿಲ್ಲ

Published:
Updated:
Prajavani

ಪಟ್ನಾ: ‘ಎಲ್ಲಿವರೆಗೆ ಸಮೋಸಾದಲ್ಲಿ ಇರುತ್ತದೆಯೋ ಆಲೂ, ಅಲ್ಲಿತನಕ ಬಿಹಾರ ರಾಜಕಾರಣದಲ್ಲಿ ಲಾಲು’ ಎಂಬಂತಹ ಪ್ರಾಸಬದ್ಧ ಹೇಳಿಕೆಗಳನ್ನು ಗ್ರಾಮ್ಯ ಭಾಷೆಯಲ್ಲಿ ನೀಡುತ್ತಾ ಚುನಾವಣಾ ಪ್ರಚಾರದಲ್ಲಿ ಜನರನ್ನು ರಂಜಿಸುತ್ತಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಇಲ್ಲದೆ ಬಿಹಾರದ ಚುನಾವಣಾ ಪ್ರಚಾರ ಕಣ ಈ ಬಾರಿ ಕಳೆಗಟ್ಟಿಲ್ಲ. 

ಸಮೋಸಾದಲ್ಲಿ ಆಲೂ ಈಗಲೂ ಇದೆ, ಆದರೆ ಲಾಲು ಮಾತ್ರ ಪ್ರಚಾರದಲ್ಲಿ ಕಾಣಿಸುತ್ತಿಲ್ಲ. 1977ರಲ್ಲಿ ಲೋಕಸಭೆಗೆ ಲಾಲು ಮೊದಲ ಬಾರಿ ಗೆದ್ದ ನಂತರ ಇಲ್ಲಿವರೆಗೆ ಬಿಹಾರದ ಚುನಾವಣೆಯಲ್ಲಿ ಲಾಲು ಸದಾ ಇದ್ದರು. 

ಮೇವು ಹಗರಣದಲ್ಲಿ 2013ರಲ್ಲಿ ಅವರಿಗೆ ಶಿಕ್ಷೆಯಾಯಿತು. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದು ಸಾಧ್ಯವಿಲ್ಲದಾಯಿತು. ಹಾಗಿದ್ದರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೆ ಅವರಿಗೆ ನಿಷೇಧ ಇರಲಿಲ್ಲ. ಹಾಗಾಗಿಯೇ 2014ರ ಲೋಕಸಭೆ ಮತ್ತು 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅವರು ಪ್ರಚಾರದ ಮುಂಚೂಣಿಯಲ್ಲಿದ್ದರು. ಹಾಸ್ಯ, ಚತುರೋಕ್ತಿಗಳಿಂದ ಲಾಲು ಜನಮನ ಗೆದ್ದರೂ 2014ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಭಾರಿ ಹಿನ್ನಡೆ ಆಗಿತ್ತು. ಆದರೆ, 2015ರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಮೂಡಿಬಂತು. 

2017ರ ಡಿಸೆಂಬರ್‌ನಲ್ಲಿ ಮೇವು ಹಗರಣದ ವಿವಿಧ ಪ್ರಕರಣಗಳ ಶಿಕ್ಷೆ ಅನುಭವಿಸುವುದಕ್ಕಾಗಿ ಲಾಲು ಅವರು ಜೈಲಿಗೆ ಹೋಗಬೇಕಾಯಿತು. ಪರಿಣಾಮವಾಗಿ ಈ ಬಾರಿಯ ಲೋಕಸಭಾ ಚುನಾವಣೆ ವರ್ಣರಹಿತವಾಗಿಬಿಟ್ಟಿದೆ. ಅವರ ಬೆಂಬಲಿಗರಿಗಂತೂ ಉತ್ಸಾಹವೇ ಇಲ್ಲದಂತಾಗಿದೆ. ಭಾರಿ ಸಂಕಷ್ಟದ ಸಂದರ್ಭದಲ್ಲಿಯೂ ಬಿಹಾರದ ಶೇ 20ರಷ್ಟು ಮತದಾರರು ಅವರ ಜತೆಗೆ ನಿಂತಿದ್ದಾರೆ. 

ಮೀಸಲಾತಿಯ ಮರುಪರಿಶೀಲನೆ ಅಗತ್ಯ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದನ್ನೇ ಮುಂದಿಟ್ಟುಕೊಂಡು 2015ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ–ಜೆಡಿಯು–ಕಾಂಗ್ರೆಸ್‌ ಮೈತ್ರಿಕೂಟದ ಪರ ಅಲೆ ಏಳುವಂತೆ ಮಾಡುವಲ್ಲಿ ಲಾಲು ಯಶಸ್ಸಿಯಾಗಿದ್ದರು. ಲಾಲು ಅವರ ಗೈರುಹಾಜರಿಯಲ್ಲಿ ಅವರ ಮಗ ತೇಜಸ್ವಿ ಯಾದವ್‌ ಅವರು ಆರ್‌ಜೆಡಿಯ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಲಾಲು ಅವರಿಗಿರುವ ಆಕರ್ಷಣೆಯನ್ನು ಸರಿಗಟ್ಟುವುದು ತಮಗೆ ಸಾಧ್ಯವಿಲ್ಲ ಎಂಬುದು ಸ್ವತಃ ತೇಜಸ್ವಿ ಅವರಿಗೆ ಗೊತ್ತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !