ನವೀನ್‌ ಮುಂದೆ ಸವಾಲು ಹಲವು

ಸೋಮವಾರ, ಏಪ್ರಿಲ್ 22, 2019
29 °C
ಒಡಿಶಾದಲ್ಲಿ ಎರಡು ದಶಕದ ಬಳಿಕ ಅಧಿಕಾರ ಉಳಿಸಿಕೊಳ್ಳಲು ಬಿಜೆಡಿ ಹರಸಾಹಸ

ನವೀನ್‌ ಮುಂದೆ ಸವಾಲು ಹಲವು

Published:
Updated:
Prajavani

ಭುವನೇಶ್ವರ: ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ) ಎರಡು ದಶಕಗಳಲ್ಲಿ ಇದೇ ಮೊದಲಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಭಾರಿ ಸವಾಲು ಎದುರಿಸುತ್ತಿದೆ. ಒಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್‌ನ ವಿರುದ್ಧ ಹೋರಾಡಬೇಕಿದೆ. ಇನ್ನೊಂದೆಡೆ, ಬಿಜೆಡಿಯ ಆಂತರಿಕ ಅತೃಪ್ತಿಯನ್ನು ಶಮನ ಮಾಡುವುದು ಹರಸಾಹಸವಾಗಿದೆ. 

2000ದ ನಂತರದ ಎಲ್ಲ ವಿಧಾನಸಭೆ ಚುನಾವಣೆಯಲ್ಲಿಯೂ ನವೀನ್‌ ಪಟ್ನಾಯಕ್‌ ನೇತೃತ್ವದ ಪಕ್ಷದ ಸಾಧನೆ ಉತ್ತಮಗೊಳ್ಳುತ್ತಲೇ ಹೋಗಿದೆ. ಆದರೆ, ಈ ಬಾರಿ ಮೇಲ್ನೋಟಕ್ಕೆ ಕಾಣುವ ಪರಿಸ್ಥಿತಿ ಭಿನ್ನವಾಗಿದೆ. 

2014ರ  ವಿಧಾನಸಭೆ ಚುನಾವಣೆಯಲ್ಲಿ 147 ಕ್ಷೇತ್ರಗಳ ಪೈಕಿ 117ರಲ್ಲಿ ಬಿಜೆಡಿ ಗೆದ್ದಿತ್ತು. ಕಾಂಗ್ರೆಸ್‌ಗೆ 16 ಮತ್ತು ಬಿಜೆಪಿಗೆ 10 ಕ್ಷೇತ್ರಗಳು ಮಾತ್ರ ಸಿಕ್ಕಿದ್ದವು. ಲೋಕಸಭಾ ಚುನಾವಣೆಯಲ್ಲಿ 21ರ ಪೈಕಿ 20 ಕ್ಷೇತ್ರಗಳು ಬಿಜೆಡಿ ಪಾಲಾಗಿದ್ದವು. ಒಂದು ಕ್ಷೇತ್ರದಲ್ಲಿ ಗೆಲ್ಲಲು ಮಾತ್ರ ಬಿಜೆಪಿಗೆ ಸಾಧ್ಯವಾಗಿತ್ತು. 

2009ರಲ್ಲಿ ಬಿಜೆಪಿ ಜತೆಗಿನ ಸಖ್ಯವನ್ನು ಬಿಜೆಡಿ ಕಡಿದುಕೊಂಡಿತು. ಆ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 103 ಕ್ಷೇತ್ರಗಳಲ್ಲಿ ಬಿಜೆಡಿ ಗೆದ್ದಿತ್ತು. ಕಾಂಗ್ರೆಸ್‌ಗೆ 27 ಕ್ಷೇತ್ರಗಳು ಸಿಕ್ಕರೆ, ಬಿಜೆಪಿಗೆ ಆರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಕ್ಕಿತ್ತು. 

2000 ಮತ್ತು 2004ರಲ್ಲಿ ಬಿಜೆಡಿ ಮತ್ತು ಬಿಜೆಪಿ ಮೈತ್ರಿಕೂಟ ಇತ್ತು. ಮೈತ್ರಿಕೂಟದ ನಾಯಕತ್ವವನ್ನು ಬಿಜೆಡಿಯೇ ವಹಿಸಿಕೊಂಡಿತ್ತು. ಈ ಎರಡೂ ಚುನಾವಣೆಗಳಲ್ಲಿ ಬಿಜೆಡಿ ಕ್ರಮವಾಗಿ 68 ಮತ್ತು 61 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ ಕ್ರಮವಾಗಿ 38 ಮತ್ತು 32 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. 

ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡೂ ಬಲ ವೃದ್ಧಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ತ್ರಿಕೋನ ಸ್ಪರ್ಧೆ ಖಚಿತ. 

ಕೆಲವೇ ತಿಂಗಳ ಹಿಂದೆ ಬಿಜೆಡಿ ಅಜೇಯ ಎಂಬಂತೆ ಕಾಣಿಸುತ್ತಿತ್ತು. ಆದರೆ, ಹಲವು ಅತೃಪ್ತ ಮುಖಂಡರು ಈಗ ಬಿಜೆಡಿ ಬಿಟ್ಟು ಪ್ರತಿಸ್ಪರ್ಧಿ ಪಕ್ಷಗಳಿಗೆ ಸೇರಿಕೊಂಡಿದ್ದಾರೆ. ಅದಲ್ಲದೆ, ಎರಡು ದಶಕಗಳ ಆಡಳಿತ ವಿರೋಧಿ ಅಲೆಯನ್ನೂ ಎದುರಿಸಬೇಕಿದೆ. 

ಈ ಬಾರಿಯ ಚುನಾವಣೆಯಲ್ಲಿ ಬಿಜೆಡಿ ಸಂಪೂರ್ಣವಾಗಿ ಸೋಲಲಿದೆ ಮತ್ತು ಆಡಳಿತವಿರೋಧಿ ಅಲೆಯ ಭಾರಕ್ಕೆ ಸರ್ಕಾರ ಕುಸಿಯಲಿದೆ ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳುತ್ತಿದ್ದಾರೆ. 

ನಬರಂಗ್‌ಪುರ ಸಂಸದ ಬಾಲಭದ್ರ ಮಝಿ, ಶಾಸಕರಾದ ಸುಕಾಂತ್‌ ನಾಯಕ್‌ ಮತ್ತು ತ್ರಿನಾಥ್‌ ಗೊಮಾಂಗೊ ಅವರು ಬಿಜೆಡಿ ತೊರೆದಿದ್ದಾರೆ. 

ಕಾಂಗ್ರೆಸ್ ಶಾಸಕರಾದ ನಬಾ ಕಿಶೋರ್ ದಾಸ್‌ ಮತ್ತು ಜೋಗೇಶ್‌ ಸಿಂಗ್‌ ಅವರು ಬಿಜೆಡಿ ಸೇರಿದ್ದಾರೆ. ಇದು ಪಕ್ಷದ ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ಟಿಕೆಟ್‌ ಸಿಕ್ಕಿಲ್ಲದ ಹಲವು ಮುಖಂಡರು ಈಗ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ತೋಡಿಕೊಳ್ಳುತ್ತಿದ್ದಾರೆ.

ಪ್ರತಿಸ್ಪರ್ಧಿಗಳ ಬಲವೃದ್ಧಿ

* ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಒಡಿಶಾದಲ್ಲಿ ಹಲವು ಸಮಾವೇಶಗಳನ್ನು ನಡೆಸಿದ್ದಾರೆ

* ನವೀನ್‌ ಪಟ್ನಾಯಕ್‌ ಅವರ ತಂದೆ ಬಿಜು ಪಟ್ನಾಯಕ್‌ ಅವರಿಗೆ ನಿಷ್ಠರಾಗಿದ್ದ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮಾಜಿ ಸಂಸದ ವೈಜಯಂತ್‌ ಪಾಂಡಾ ಮತ್ತು ಮಾಜಿ ಸಚಿವ ದಾಮೋದರ್‌ ರಾವುತ್‌ ಅವರು ಬಿಜೆಪಿ ಸೇರಿರುವುದು ಈ ಕಾರ್ಯತಂತ್ರದ ಭಾಗ. ಇನ್ನಷ್ಟು ಜನರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ

* ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಒಡಿಶಾಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ

* ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ಥಾನ ಗೆಲುವಿನ ಬಳಿಕ ಒಡಿಶಾದಲ್ಲಿ ಪಕ್ಷದ ನೆಲೆ ಬಲಗೊಳಿಸಲು ರಾಹುಲ್‌ ಯತ್ನಿಸುತ್ತಿದ್ದಾರೆ

ಪಶ್ಚಿಮ ಭಾಗದ ಮೇಲೆ ಕಣ್ಣು: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ

ನವೀನ್‌ ಪಟ್ನಾಯಕ್‌ ಅವರು ತಮ್ಮ ಸ್ವಕ್ಷೇತ್ರ ಹಿಂಜಿಲಿ ಜತೆಗೆ ರಾಜ್ಯದ ಪಶ್ಚಿಮ ಭಾಗದ ಬಿಜೇಪುರದಿಂದಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದ ಪಶ್ಚಿಮ ಭಾಗ ರಾಜಕೀಯವಾಗಿ ಬಿಜೆಡಿಗೆ ಬಹಳ ಮುಖ್ಯ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.

ಇಲ್ಲಿ ಐದು ಲೋಕಸಭೆ ಮತ್ತು 35 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಇಲ್ಲಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ ಜಯಗಳಿಸಿತ್ತು.

ಈಗ ಪರಿಸ್ಥಿತಿ ಬದಲಾದಂತೆ ಕಾಣಿಸುತ್ತಿದೆ. ಬಿಜೆಪಿ ಇಲ್ಲಿ ನೆಲೆ ಗಟ್ಟಿಗೊಳಿಸಿದೆ. 2017ರಲ್ಲಿ ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯಿತು. ಇಲ್ಲಿನ 209 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 126ರಲ್ಲಿ ಬಿಜೆಪಿ ಗೆದ್ದಿದೆ. ಬಿಜೆಡಿಗೆ 56 ಮತ್ತು ಕಾಂಗ್ರೆಸ್‌ಗೆ 22 ಕ್ಷೇತ್ರಗಳಲ್ಲಿ ಗೆಲುವು ಲಭ್ಯವಾಗಿದೆ.

ನವೀನ್‌ ಅವರು ಇಲ್ಲಿಂದ ಸ್ಪರ್ಧಿಸುವುದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭ ಆಗಬಹುದು ಎಂಬುದು ಬಿಜೆಡಿ ಲೆಕ್ಕಾಚಾರ. ಆದರೆ, ಬಿಜೆಡಿ ದಿಕ್ಕೆಟ್ಟಿದೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ನವೀನ್‌ ಅವರು ಎರಡು ಕಡೆ ಸ್ಪರ್ಧಿಸುವುದೇ ಆ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಎಂಬುದು ಕಾಂಗ್ರೆಸ್‌ನ ಪ್ರತಿಪಾದನೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !