ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಪ್ರದೇಶ: ಬಿಜೆಪಿಗೆ ಅಳುಕು, ಕಾಂಗ್ರೆಸ್‌ಗೆ ಹುರುಪು

ಬಹುಕಾಲದ ಬಳಿಕ ಕಮಲ ಪಾಳಯಕ್ಕೆ ಸರಿಸಮನಾಗಿ ನಿಲ್ಲಲು ‘ಕೈ’ ತಂತ್ರ
Last Updated 30 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶದ 29 ಲೋಕಸಭಾ ಕ್ಷೇತ್ರಗಳಿಗೆ ಕೊನೆಯ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂದರೆ, ಇಲ್ಲಿನ ಮತದಾನದ ಮೊದಲ ಹಂತ ಏಪ್ರಿಲ್‌ 29ರಂದು ನಡೆಯಲಿದೆ. ಹಾಗಾಗಿ ಚುನಾವಣೆಯ ಕಾವು ಇಲ್ಲಿ ಇನ್ನೂ ಏರಿಲ್ಲ. ಮುಖ್ಯ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಿನ ಅರ್ಧಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ.

ಬಿಜೆಪಿ ಈವರೆಗೆ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಅದರಲ್ಲಿ ಐವರು ಹೊಸಬರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಇಲ್ಲಿ ಗೆದ್ದದ್ದು ಮೂರು ಕ್ಷೇತ್ರಗಳಲ್ಲಿ ಮಾತ್ರ. ರತ್‌ಲಂ–ಜಬುವಾ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದ ಕಾಂತಿಲಾಲ್‌ ಭುರಿಯಾ ಅವರನ್ನು ಕಾಂಗ್ರೆಸ್‌ ಮತ್ತೆ ಕಣಕ್ಕೆ ಇಳಿಸಿದೆ. ಕಮಲನಾಥ್‌ ಅವರು ಗೆದ್ದಿದ್ದ ಚಿಂದ್ವಾರಾ ಕ್ಷೇತ್ರದಿಂದ ಅವರ ಮಗ ನಕುಲ್‌ನಾಥ್‌ ಅವರನ್ನು ಕಣಕ್ಕಿಳಿಸಲಾಗಿದೆ.

ಗುಣಾ ಕ್ಷೇತ್ರದಲ್ಲಿ ಕಳೆದ ಬಾರಿ ಜ್ಯೋತಿರಾದಿತ್ಯ ಸಿಂಧಿಯಾ ಗೆದ್ದಿದ್ದರು. ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್‌ ಈವರೆಗೆ ಘೋಷಿಸಿಲ್ಲ. ಸಿಂಧಿಯಾ ಕುಟುಂಬವು ಪರಂಪರಾಗತವಾಗಿ ಹಿಡಿತ ಹೊಂದಿರುವ ಕ್ಷೇತ್ರ ಇದು. ಸಿಂಧಿಯಾ ಅವರನ್ನು ಗ್ವಾಲಿಯರ್‌ ಅಥವಾ ಇಂದೋರ್‌ನಿಂದ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆಯೂ ಇದೆ. ಜ್ಯೋತಿರಾದಿತ್ಯ ಅವರ ಹೆಂಡತಿ ಪ್ರಿಯದರ್ಶಿನಿ ರಾಜೇ ಅವರನ್ನು ಗುಣಾ ಅಥವಾ ಗ್ವಾಲಿಯರ್‌ನಿಂದ ಕಣಕ್ಕೆ ಇಳಿಸುವ ಚಿಂತನೆಯೂ ಇದೆ.

ಕಳೆದ ವರ್ಷದ ಕೊನೆಗೆ ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಪಕ್ಷ ಅಲ್ಲಿ ಸರ್ಕಾರ ರಚಿಸಿದೆ. ಹಾಗಾಗಿ ಪಕ್ಷವು 2014ಕ್ಕೆ ಹೋಲಿಸಿದರೆ ಭಾರಿ ಆತ್ಮವಿಶ್ವಾಸದಿಂದ ಇದೆ. 1989ರ ನಂತರ ಎಂದೂ ಗೆಲ್ಲಲಾಗದ ಭೋಪಾಲ್‌ ಕ್ಷೇತ್ರದಿಂದ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರನ್ನು ಕಣಕ್ಕೆ ಇಳಿಸುವ ಸಾಹಸದ ಹಿಂದೆ ಇರುವುದು ಇದೇ ಆತ್ಮವಿಶ್ವಾಸ. ಕಾಂಗ್ರೆಸ್‌ನ ಈ ನಿರ್ಧಾರ ಬಿಜೆಪಿಯಲ್ಲಿ ಸ್ವಲ್ಪ ಆತಂಕ ಮೂಡಿಸಿರುವುದು ಸುಳ್ಳಲ್ಲ.

ಭೋಪಾಲ್‌ ಕ್ಷೇತ್ರದಲ್ಲಿನ ಈ ಸವಾಲಿನ ಜೊತೆಗೆ ಬಿಜೆಪಿಯ ಚಿಂತೆಗೆ ಇತರ ಕಾರಣಗಳೂ ಇವೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಾರಿ ಭಿನ್ನಾಭಿಪ್ರಾಯ ಇದೆ. ಹಲವು ಮುಖಂಡರು ಪಕ್ಷದ ವಿರುದ್ಧ ಕೆಲಸ ಮಾಡುವ ಅಪಾಯವೂ ಇದೆ. ಬಿಜೆಪಿಯ ಹಿರಿಯ ಮುಖಂಡರಾದ ರಾಮ್‌ಲಾಲ್‌ ಮತ್ತು ವಿನಯ ಸಹಸ್ರಬುದ್ಧೆ ಅವರು ಭಿನ್ನಮತ ಶಮನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯ ರೀತಿಯಲ್ಲಿಯೇ ಫಲಿತಾಂಶ ಬರಬಹುದೇ ಎಂಬ ಆತಂಕ ಬಿಜೆಪಿ ಮುಖಂಡರನ್ನು ಕಾಡುತ್ತಿದೆ.

ಬಿಜೆಪಿಗೆ ಭಿನ್ನಮತದ ಭೀತಿ

230 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 107 ಸದಸ್ಯ ಬಲ ಹೊಂದಿದೆ. ಸರಳ ಬಹುಮತದ 116 ಸಂಖ್ಯೆ ತಲುಪಲು ಬೇಕಿರುವುದು ಒಂಬತ್ತು ಸದಸ್ಯರು ಮಾತ್ರ. ಆದರೆ, ಕಳೆದ ವರ್ಷ ನಡೆದ ಚುನಾವಣೆಯಲ್ಲಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಭಿನ್ನಮತವೇ ಮುಳುವಾಗಿದೆ ಎಂಬುದು ಬಿಜೆಪಿಯ ನಂಬಿಕೆ. ಈ ಬಾರಿಯೂ ಅದು ಪುನರಾವರ್ತನೆ ಆಗಿಬಿಟ್ಟರೆ ದೊಡ್ಡ ಹಾನಿ ಆಗಬಹುದು ಎಂಬ ಭೀತಿಯಲ್ಲಿ ಬಿಜೆಪಿ ಇದೆ.‌

ಅತೃಪ್ತಿ ಶಮನಕ್ಕೆ ‘ಕೈ’ ಕಸರತ್ತು

ಆಡಳಿತಾರೂಢ ಕಾಂಗ್ರೆಸ್‌ನಲ್ಲಿಯೂ ಅತೃಪ್ತಿ ಇದೆ. ಆದರೆ, ಅದು ಬಿಜೆಪಿಯೊಳಗಿನ ಭಿನ್ನಮತದಷ್ಟು ತೀವ್ರವಾಗಿಲ್ಲ ಎಂಬುದು ಕಾಂಗ್ರೆಸ್‌ ಮುಖಂಡರ ಸಮಾಧಾನ. ಕಳೆದ ವರ್ಷ ಪಕ್ಷದ ಪರವಾಗಿ ಸೃಷ್ಟಿಯಾಗಿರುವ ಅಲೆಯನ್ನು ಹಾಳುಗೆಡವಬಾರದು ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಕಮಲನಾಥ್‌ ಎಚ್ಚರಿಕೆ ಕೊಟ್ಟಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರೂ ಅವರೇ ಆಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ತಮ್ಮ ಬೇಡಿಕೆ ಕೈಬಿಟ್ಟರೆ ಅವರಿಗೆ ನೀಡಲು ತಮ್ಮಲ್ಲಿ ಸಾಕಷ್ಟು ಹುದ್ದೆಗಳಿವೆ ಎಂಬ ಆಮಿಷದ ಸಂದೇಶವನ್ನೂ ಕಮಲನಾಥ್‌ ಮುಂದಿಟ್ಟಿದ್ದಾರೆ.

ಬಿಜೆಪಿ

ಅನುಕೂಲ

* ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು

* ರಾಷ್ಟ್ರೀಯ ಸುರಕ್ಷತೆ ಮತ್ತು ದೇಶಭಕ್ತಿಯನ್ನು ಮುನ್ನೆಲೆಗೆ ತಂದು ಮತವಾಗಿ ಪರಿವರ್ತಿಸುವ ವಿಶ್ವಾಸ

* ಕಳೆದ ಲೋಕಸಭಾ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಗೆದ್ದ ಹುರುಪು

ಅನನುಕೂಲ

* ವಿಧಾನಸಭೆ ಚುನಾವಣೆ ಸೋಲಿನಿಂದಾಗಿ ಕುಗ್ಗಿದ ಆತ್ಮವಿಶ್ವಾಸ

* ಟಿಕೆಟ್‌ ಹಂಚಿಕೆ ಬಗೆಗಿನ ಅಸಮಾಧಾನ, ಭಿನ್ನಮತ

* ಕಾಂಗ್ರೆಸ್‌ ಪಕ್ಷದ ಮೃದು ಹಿಂದುತ್ವವು ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕ

ಕಾಂಗ್ರೆಸ್‌

ಅನುಕೂಲ

* ಆಡಳಿತ ಪಕ್ಷ ಎಂಬ ಹುಮ್ಮಸ್ಸು, ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಕಾರಣ ಆಡಳಿತ ವಿರೋಧಿ ಅಲೆ ಇಲ್ಲ

* ಆಡಳಿತ ಪಕ್ಷ ಎಂಬ ಕಾರಣಕ್ಕೆ ಪಕ್ಷದೊಳಗಿನ ಅತೃಪ್ತಿ ಶಮನ ಮಾಡಬಹುದು ಎಂಬ ನಂಬಿಕೆ

* ರೈತರ ಸಾಲ ಮನ್ನಾ ಮತ್ತು ನಿರುದ್ಯೋಗಿ ಯುವಜನರಿಗೆ ಉದ್ಯೋಗದ ಯೋಜನೆ ಕೈಹಿಡಿಯಬಹುದು ಎಂಬ ವಿಶ್ವಾಸ

ಅನನುಕೂಲ

* ವಿಧಾನಸಭೆ ಚುನಾವಣೆ ಗೆದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರ ನೆಲೆ ಇಲ್ಲ

* ದೀರ್ಘ ಕಾಲದಿಂದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿಲ್ಲ ಎಂಬ ಅಳುಕು

* ಸಾಲು ಸಾಲು ಹಿರಿಯ ನಾಯಕರು ಪರಸ್ಪರ ಕಾಲೆಳೆದರೆ ಆಗುವ ಅಪಾಯದ ಭೀತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT