ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಪ್ರಮುಖ ಪ್ರತಿಸ್ಪರ್ಧಿ ಮಮತಾ

ಟಿಎಂಸಿ ಮುಖ್ಯಸ್ಥೆಯ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆ ಬಿಚ್ಚಿಟ್ಟ ಪ್ರಣಾಳಿಕೆ
Last Updated 28 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿ ವಿರೋಧಿ ಪಕ್ಷಗಳ ನಾಯಕತ್ವ ಯಾರಿಗೆ ಮತ್ತು ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹಳ ಎಚ್ಚರಿಕೆಯ ಉತ್ತರವನ್ನೇ ಕೊಡುತ್ತಾರೆ. ಅಂದರೆ, ಮುಂದಾಳು ಯಾರು ಎಂಬುದಕ್ಕೆ ಅವರು ನೇರ ಉತ್ತರ ನೀಡಿದ್ದೇ ಇಲ್ಲ. ಆದರೆ, ತಮ್ಮಲ್ಲೂ ಪ್ರಧಾನಿ ಹುದ್ದೆಗೆ ಏರುವ ಮಹತ್ವಾಕಾಂಕ್ಷೆ ಇದೆ ಎಂಬುದನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಎಲ್ಲ ಮಹತ್ವದ ನಿರ್ಧಾರಗಳನ್ನು ಪ್ರಣಾಳಿಕೆಯಲ್ಲಿ ಟೀಕಿಸಲಾಗಿದೆ. ಈ ಸಮಸ್ಯೆಗಳನ್ನು ಟಿಎಂಸಿ ಹೇಗೆ ಪರಿಹರಿಸಲಿದೆ ಎಂಬ ವಿವರಣೆಯನ್ನೂ ನೀಡಲಾಗಿದೆ. ಟಿಎಂಸಿಯ ಪ್ರಣಾಳಿಕೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬದಲಿಗೆ ರಾಷ್ಟ್ರೀಯ ವಿಚಾರಗಳಿಗೆ ಮಹತ್ವ ಕೊಡಲಾಗಿದೆ. ಪ್ರಾದೇಶಿಕ ನಾಯಕತ್ವದಿಂದ ರಾಷ್ಟ್ರ ನಾಯಕತ್ವದೆಡೆಗೆ ಸಾಗುವ ಮಮತಾ ಅವರ ಪ್ರಯತ್ನ ಪ್ರಣಾಳಿಕೆಯಲ್ಲಿ ಎದ್ದು ಕಾಣುತ್ತಿದೆ.

ನೋಟು ರದ್ದತಿ, ಜಿಎಸ್‌ಟಿ ಜಾರಿ, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ, ಕಾಶ್ಮೀರ ವಿವಾದ, ರಕ್ಷಣಾ ಖರೀದಿಯಂತಹ ವಿಚಾರಗಳು ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿವೆ. ನೋಟು ರದ್ದತಿಯು ‘ಕಠೋರ ಮತ್ತು ನಿರ್ದಯ ನಡೆ’ ಎಂದು ಟೀಕಿಸಲಾಗಿದೆ. ಕೃಷಿ, ಸಣ್ಣ ಉದ್ಯಮ ಮತ್ತು ಅಸಂಘಟಿತ ವಲಯದ ಮೇಲೆ ಇದು ಭಾರಿ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ,ನೋಟು ರದ್ದತಿಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲಾಗುವುದು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲನ್ನೂ ಒಡ್ಡಲಾಗಿದೆ.

ಜಿಎಸ್‌ಟಿಯನ್ನು ಮರುಪರಿಶೀಲನೆಗೆ ಒಳಪಡಿಸಲಾಗುವುದು ಎಂದೂ ಟಿಎಂಸಿ ಹೇಳಿದೆ. ಈಗಿರುವ ಮಾದರಿಯಲ್ಲಿ ಜಿಎಸ್‌ಟಿ ಜನರವಿರೋಧಿ ಎಂದು ಕಂಡುಬಂದರೆ ಅದನ್ನು ರದ್ದುಪಡಿಸಲಾಗುವುದು ಎಂದು ಹೇಳಲಾಗಿದೆ. ಯಾವುದೇ ಸಿದ್ಧತೆ ಇಲ್ಲದೆ ಜಿಎಸ್‌ಟಿ ಜಾರಿ ಮಾಡಲಾಗಿದೆ ಎಂದು ಕೇಂದ್ರದ ವಿರುದ್ಧ ಆರೋಪ ಮಾಡಲಾಗಿದೆ.

ರಫೇಲ್‌ ಒಪ್ಪಂದದಿಂದ ಹಿಡಿದು ಕಾಶ್ಮೀರ ವಿವಾದದವರೆಗೆ ವಿವಿಧ ವಿಚಾರಗಳ ಬಗ್ಗೆ ಮೋದಿ ಅವರನ್ನು ಮಮತಾ ಟೀಕಿಸಿದ್ದಾರೆ. ಕಾಶ್ಮೀರ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿರುವ ಮಮತಾ ಅವರು, ಈ ವಿವಾದ ಪರಿಹಾರವಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರಗಳು ಮತ್ತು ಅದಕ್ಕೆ ಮಮತಾ ಅವರ ವಿರೋಧವನ್ನು ಪ್ರಣಾಳಿಕೆಯಲ್ಲಿ ಎದುರುಬದುರಾಗಿ ಇರಿಸಲಾಗಿದೆ. ಈ ಮೂಲಕ, ಮೋದಿ ಅವರ ಪ್ರಮುಖ ಪ್ರತಿಸ್ಪರ್ಧಿ ಮಮತಾ ಅವರೇ ಎಂದು ಬಿಂಬಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಭಾರಿ ಯಶಸ್ಸು ಸಾಧಿಸಿರುವ ಮಮತಾ ಅವರು ರಾಷ್ಟ್ರ ರಾಜಕಾರಣದತ್ತ ದೃಷ್ಟಿ ನೆಟ್ಟಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸಾರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT