ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ತಯಾರಿ ಶುರು

ರಣತಂತ್ರ ರೂಪಿಸಲು ಸಜ್ಜಾದ ಬಿಜೆಪಿ
Last Updated 12 ಡಿಸೆಂಬರ್ 2018, 19:23 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಮುಂಬರುವ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವತ್ತ ಚಿತ್ತ ಹರಿಸಿವೆ.

ಪಂಚ ರಾಜ್ಯಗಳಲ್ಲಿ ಹೀನಾಯವಾಗಿ ಸೋಲುಂಡ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಗುರುವಾರ ನಡೆಯಲಿರುವ 28 ರಾಜ್ಯಗಳ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಚುನಾವಣಾ ರಣತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಹಿಂದಿ ಭಾಷಿಕ ಪ್ರದೇಶಗಳಲ್ಲಿ ಬಿಜೆಪಿಯನ್ನು ಮಣಿಸಿದ ಕಾಂಗ್ರೆಸ್‌ ಬಹಳ ವರ್ಷಗಳ ನಂತರ ದೊರೆತಿರುವ ಗೆಲುವನ್ನು ಸಂಭ್ರಮಿಸುತ್ತಿದೆ.

ಐದು ರಾಜ್ಯಗಳ ಫಲಿತಾಂಶವನ್ನು ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಕಾಂಗ್ರೆಸ್‌ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೊರೆತ ಜನಾದೇಶ ಎಂದು ಬಿಂಬಿಸಲು ಯತ್ನಿಸುತ್ತಿದೆ.

ಸೋಲಿನ ಹೊಣೆಯನ್ನು ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ತಲೆಗೆ ಕಟ್ಟುವ ಧ್ವನಿಗಳನ್ನು ಬಿಜೆಪಿ ಹತ್ತಿಕ್ಕಿದೆ. ಆಯಾ ರಾಜ್ಯಗಳ ಸ್ಥಳೀಯ ಸಮಸ್ಯೆಗಳು ಸೋಲಿಗೆ ಕಾರಣ ಎಂದು ಬಿಜೆಪಿ ವಿಶ್ಲೇಷಿಸಿದೆ.

2014ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್‌ ಕೂಡ ಇದೇ ತಂತ್ರ ಅನುಸರಿಸಿತ್ತು. ಪಕ್ಷದ ಸೋಲಿನ ಹೊಣೆಯನ್ನು ರಾಹುಲ್‌ ಬದಲು ಸ್ಥಳೀಯ ನಾಯಕರ ತಲೆಗೆ ಕಟ್ಟಿತ್ತು.

ಬಿಜೆಪಿಯ ನಕಾರಾತ್ಮಕ ರಾಜಕಾರಣದ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅನುಸರಿಸಬಹುದಾದ ರಣತಂತ್ರದ ಸುಳಿವು ಎನ್ನಲಾಗಿದೆ.

‘ಛತ್ತೀಸಗಡದಲ್ಲಿ ಬಿಜೆಪಿ ಹೀನಾಯ ಸೋಲು ಕೇವಲ ರಮಣ್‌ ಸಿಂಗ್‌ ಅವರ ಸೋಲಲ್ಲ. ವಾಸ್ತವವಾಗಿ ಮೋದಿ ಮತ್ತು ಶಾ ಜೋಡಿಯ ಸೋಲು. ಇದೇ ಫಲಿತಾಂಶ 2019ರ ಚುನಾವಣೆಯಲ್ಲೂ ಪುನರಾವರ್ತನೆಯಾಗಲಿದೆ’ ಎಂದು ಛತ್ತೀಸಗಡ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೆಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದಂತೆ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೆಸೆಯಲಾಗುವುದು ಎಂದು ರಾಜಸ್ಥಾನದ ಕಾಂಗ್ರೆಸ್‌ ಮುಖಂಡ ಪ್ರೀತಂ ಸಿಂಗ್‌ ಭವಿಷ್ಯ ನುಡಿದಿದ್ದಾರೆ.

ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಉತ್ಸಾಹ ಇಮ್ಮಡಿಸಿದೆ. ಲೋಕಸಭಾ ಚುನಾವಣೆ ಮೋದಿ–ಶಾ ಜೋಡಿಗೆ ಸುಲಭದ ತುತ್ತಲ್ಲ ಎಂಬ ಸಂದೇಶವನ್ನು ರಾಹುಲ್‌ ರವಾನಿಸಿದ್ದಾರೆ.

ಬದಲಾಗದ ಮೋದಿ ದಿನಚರಿ

ಐದು ರಾಜ್ಯಗಳ ಚುನಾವಣಾ ಫಲಿತಾಂಶ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಗ್ನಿಪರೀಕ್ಷೆಯೇ ಆಗಿತ್ತು. ಆದರೆ, ಮತ ಎಣಿಕೆ ನಡೆದ ಮಂಗಳವಾರ ಮೋದಿ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೋದಿ ಅವರು ಎಂದಿನಂತೆಯೇ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಪೂರ್ವನಿಯೋಜಿತ ಕಾರ್ಯಕ್ರಮಗಳಲ್ಲಿ ಭಾಗಿಯಾದರು, ಬುಧವಾರ ನಡೆಯಬೇಕಿದ್ದ ಆರೋಗ್ಯ ಸಮಾವೇಶದ ಭಾಷಣವನ್ನು ಸಿದ್ಧಪಡಿಸಿದರು ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಭಾಗಿಯಾದರು.

‘ಪ್ರಧಾನಿಗೆ ಮಂಗಳವಾರವೂ ಇತರ ದಿನಗಳ ಹಾಗೆಯೇ ಇನ್ನೊಂದು ದಿನವಾಗಿತ್ತು’ ಎಂದು ಪ್ರಧಾನಿ ಸಹಾಯಕರೊಬ್ಬರು ಹೇಳಿದ್ದಾರೆ.

ಮಧ್ಯಾಹ್ನವರೆಗೆ ಅಧಿವೇಶನದಲ್ಲಿ ಪಾಲ್ಗೊಂಡ ಮೋದಿ ಅವರು ಸಂಜೆ ಉತ್ತರ ಪ್ರದೇಶದ ಅಭಿವೃದ್ಧಿ ಕೆಲಸಗಳ ಪರಿಶೀಲನಾ ಸಭೆಯಲ್ಲಿ ಭಾಗಿಯಾದರು. ಫಲಿತಾಂಶ ಪ್ರಕಟವಾದ ಮರುದಿನ, ಬುಧವಾರವೂ ಪ್ರಧಾನಿ ಅವರ ದಿನಚರಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT