ದೆಹಲಿಯಲ್ಲಿ ಎಎಪಿ ಜತೆಗಿಲ್ಲ ಕಾಂಗ್ರೆಸ್‌ ಮೈತ್ರಿ: ಶೀಲಾ ದೀಕ್ಷಿತ್‌

ಮಂಗಳವಾರ, ಮಾರ್ಚ್ 19, 2019
20 °C

ದೆಹಲಿಯಲ್ಲಿ ಎಎಪಿ ಜತೆಗಿಲ್ಲ ಕಾಂಗ್ರೆಸ್‌ ಮೈತ್ರಿ: ಶೀಲಾ ದೀಕ್ಷಿತ್‌

Published:
Updated:
Prajavani

ನವದೆಹಲಿ: ಲೋಕಸಭಾ ಚುನಾವಣೆಗಾಗಿ ದೆಹಲಿಯಲ್ಲಿ ಎಎಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಲ್ಲಿನ ಕಾಂಗ್ರೆಸ್‌ ಘಟಕದ ಮುಖ್ಯಸ್ಥೆ ಶೀಲಾ ದೀಕ್ಷಿತ್‌ ಘೋಷಿಸಿದ್ದಾರೆ. 

‘ಎಎಪಿ ಜತೆಗೆ ಮೈತ್ರಿ ಬೇಡ ಎಂಬ ಸರ್ವಾನುಮತದ ನಿರ್ಧಾರಕ್ಕೆ ಬಂದಿದ್ದೇವೆ. ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ, ಇನ್ನಷ್ಟು ಪ್ರಬಲವಾಗಲಿದೆ’ ಎಂದು ಶೀಲಾ ಹೇಳಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಮಾತನಾಡಿದ ಬಳಿಕ ಅವರು ಈ ವಿಚಾರ ತಿಳಿಸಿದರು. 

ಇದನ್ನೂ ಓದಿ: ಬಿಜೆಪಿ–ಕಾಂಗ್ರೆಸ್‌ ಅಪವಿತ್ರ ಮೈತ್ರಿ: ಕೇಜ್ರಿವಾಲ್‌ ಆಕ್ರೋಶ

ದೆಹಲಿ ಘಟಕದ ಮುಖಂಡರು ಮತ್ತು ರಾಹುಲ್‌ ಮಧ್ಯೆ ಸುಮಾರು ಎರಡು ತಾಸು ಚರ್ಚೆ ನಡೆದಿದೆ. ಬಹುಮತದ ನಿರ್ಧಾರದ ಪರವಾಗಿ ತಾವು ನಿಲ್ಲುವುದಾಗಿ ರಾಹುಲ್‌ ಚರ್ಚೆಯ ಸಂದರ್ಭದಲ್ಲಿ ತಿಳಿಸಿದರು. ಪಕ್ಷವು ಗಟ್ಟಿಯಾಗುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ. 

ಸಭೆಯಲ್ಲಿದ್ದ ಪ್ರತಿಯೊಬ್ಬರ ಅಭಿಪ್ರಾಯವನ್ನೂ ರಾಹುಲ್‌ ಪಡೆದುಕೊಂಡರು. ಹೆಚ್ಚಿನ ಜನರು ಮೈತ್ರಿಗೆ ವಿರುದ್ಧವಾಗಿದ್ದರು. ಹಾಗಾಗಿ ಏಕಾಂಗಿ ಸ್ಪರ್ಧೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಇದನ್ನೂ ಓದಿ: ಡಿಎಂಕೆ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಆಯ್ಕೆ ಸಮಿತಿಯ ಸಭೆಯು ಒಂದೆರಡು ದಿನಗಳಲ್ಲಿ ನಡೆಯಲಿದೆ ಎಂದು ಶೀಲಾ ತಿಳಿಸಿದ್ದಾರೆ. 

ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಎಪಿ ಈಗಾಗಲೇ ಪ್ರಕಟಿಸಿದೆ. 

ದೆಹಲಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪಿ.ಸಿ. ಚಾಕೊ, ದೆಹಲಿ ಘಟಕದ ಮಾಜಿ ಅಧ್ಯಕ್ಷ ಅಜಯ ಮಾಕನ್‌ ಮುಂತಾದವರು ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿಯನ್ನು ಸೋಲಿಸಲು ಎಎಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಈ ಇಬ್ಬರೂ ವ್ಯಕ್ತಪಡಿಸಿದ್ದಾರೆ. ಆದರೆ, ಉಳಿದ ಮುಖಂಡರು ಮೈತ್ರಿಗೆ ವಿರುದ್ಧವಾಗಿದ್ದರು. 

ಇದನ್ನೂ ಓದಿ: ಬಿಜೆಪಿ–ಜೆಡಿಯು ಮೈತ್ರಿ ಬಿಹಾರಕ್ಕೆ ಸೀಮಿತ

ಎಎ‍ಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ‘ವಿಶ್ವಾಸಾರ್ಹ ಮಿತ್ರ’ ಎಂದು ಪರಿಗಣಿಸುವುದು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಎಎಪಿಯೇ ಅತಿ ದೊಡ್ಡ ವೈರಿ. ಈ ವರ್ಷದ ಕೊನೆಯಲ್ಲಿ ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಮೇಲೆ ಪಕ್ಷವು ಗಮನ ಕೇಂದ್ರೀಕರಿಸಬೇಕು ಎಂದು ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಟ್ಟರು. 

ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳ ಮಹಾಮೈತ್ರಿ ಪ್ರಯತ್ನಕ್ಕೆ ಕಾಂಗ್ರೆಸ್‌ ಪಕ್ಷದ ಈ ನಿರ್ಧಾರ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗಿ ಅದರಿಂದ ಬಿಜೆಪಿಗೆ ಲಾಭವಾಗದಂತೆ ನೋಡಿಕೊಳ್ಳಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಆದರೆ, ದೆಹಲಿಯಲ್ಲಿ ಆ ಪ್ರಯತ್ನ ಫಲ ನೀಡಿಲ್ಲ. 

ಎಎಪಿಗೆ ಮೂರು, ಕಾಂಗ್ರೆಸ್‌ಗೆ ಮೂರು ಮತ್ತು ಒಂದು ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಬಿಟ್ಟುಕೊಡುವ ಪ್ರಸ್ತಾವವನ್ನು ಎಎಪಿ ಮುಂದಿಟ್ಟಿತ್ತು. ಪಕ್ಷೇತರರಿಗೆ ಎಂದು ಇರಿಸಿಕೊಳ್ಳಲಾಗುವ ಕ್ಷೇತ್ರವನ್ನು ಬಿಜೆಪಿಯ ಬಂಡಾಯ ನಾಯಕ ಯಶವಂತ ಸಿನ್ಹಾ ಅವರಿಗೆ ಕೊಡಲು ಎಎಪಿ ಬಯಸಿತ್ತು ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !