ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದುಗೆ ಯಾರಿಗೆ: ಹಣಾಹಣಿ ಕಣ ಸಜ್ಜು

Last Updated 10 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವುದರೊಂದಿಗೆ ದೇಶದ ಮುಂದಿನ ಪ್ರಧಾನಿಯ ಆಯ್ಕೆಗೆ ಕಣ ಸಜ್ಜುಗೊಂಡಿದೆ.

ಎನ್‌ಡಿಎಯ ನೇತೃತ್ವ ವಹಿಸಿರುವ ನರೇಂದ್ರ ಮೋದಿ ಮತ್ತು ಯುಪಿಎಯ ಮುಂದಾಳುತ್ವ ವಹಿಸಿರುವ ರಾಹುಲ್‌ ಗಾಂಧಿ ಅವರು ಪ್ರಧಾನಿ ಹುದ್ದೆಯ ಪ್ರಮುಖ ಹುರಿಯಾಳುಗಳು. ಆದರೆ, ಇತರ ಮೈತ್ರಿಕೂಟಗಳು ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಕೂಡ ಈ ಬಾರಿ ದೇಶದ ಉನ್ನತ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ. ಪ್ರಾದೇಶಿಕ ಪಕ್ಷಗಳ ಗುಂಪುಗಳು ಗಣನೀಯ ಸಂಖ್ಯೆಯ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಎರಡು ಪ್ರಮುಖ ಗುಂಪುಗಳಿಗೆ ಸವಾಲು ಒಡ್ಡುವ ಸಾಧ್ಯತೆ ಇದೆ.

2014ರ ಲೋಕಸಭಾ ಚುನಾವಣೆಯಲ್ಲಿ 44 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವ ಮೂಲಕ ಆಘಾತಕಾರಿ ಸೋಲು ಅನುಭವಿಸಿದ್ದ ಕಾಂಗ್ರೆಸ್‌ ಪಕ್ಷವು ಇತ್ತೀಚೆಗೆ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಚೇತರಿಕೆಯ ಹಾದಿ ಹಿಡಿದಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿನ ಈ ಗೆಲುವು ಕಾಂಗ್ರೆಸ್‌ನಲ್ಲಿ ಭಾರಿ ಹುರುಪು ಮೂಡಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆತಿತ್ತು. 30 ವರ್ಷಗಳ ಬಳಿಕ ಸರ್ಕಾರ ರಚಿಸುವಷ್ಟು ಸಂಖ್ಯಾಬಲಒಂದೇ ಪಕ್ಷಕ್ಕೆ ದೊರೆತಿತ್ತು. ಬಿಜೆಪಿಯ ಜನ ಬೆಂಬಲ ಇನ್ನೂ ಮಾಸಿಲ್ಲ. ಹಾಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆ ಭಾರಿ ಹಣಾಹಣಿ ನಿರೀಕ್ಷಿತ.

2014ರಲ್ಲಿ ಬಿಜೆಪಿ 282 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ, ಈಗ ಬಿಜೆಪಿಯ ಬಲ 268ಕ್ಕೆ ಇಳಿದಿದೆ. ವಿವಿಧ ಕಾರಣಗಳಿಂದಾಗಿ 27 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದಿವೆ. ಅದರಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು ಆರು ಕ್ಷೇತ್ರಗಳಲ್ಲಿ ಮಾತ್ರ.

ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, 2018 ಆ ಪಕ್ಷಕ್ಕೆ ಒಳ್ಳೆಯ ವರ್ಷವಾಗಿರಲಿಲ್ಲ. ಇಲ್ಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಲ್ಲವನ್ನೂ ಬಿಜೆಪಿ ಕಳೆದುಕೊಂಡಿತ್ತು.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಆ ಪಕ್ಷಕ್ಕೆ ಇದು ಮೊದಲ ಲೋಕಸಭಾ ಚುನಾವಣೆ. 2014ರಂತೆಯೇ ಈ ಬಾರಿಯೂ ನರೇಂದ್ರ ಮೋದಿ ಅವರ ವರ್ಚಸ್ಸನ್ನೇಬಿಜೆಪಿ ನೆಚ್ಚಿಕೊಂಡಿದೆ.

ಮೋದಿ ಅವರ ಮುಂದೆ ಕಠಿಣ ಸವಾಲು ಇದೆ ಎಂದೇ ಒಂದು ತಿಂಗಳ ಹಿಂದಿನವರೆಗೆ ವಿಶ್ಲೇಷಿಸಲಾಗಿತ್ತು. ಪುಲ್ವಾಮಾ ದಾಳಿ ಮತ್ತು ಅದಕ್ಕೆ ವಾಯುದಾಳಿಯ ಮೂಲಕ ಭಾರತ ತಿರುಗೇಟು ನೀಡಿದ ಬಳಿಕ ಪರಿಸ್ಥಿತಿ ಬದಲಾದಂತೆ ಕಾಣಿಸುತ್ತಿದೆ.

ರಾಷ್ಟ್ರೀಯತೆಯನ್ನೇ ಚುನಾವಣೆಯ ಮುಖ್ಯ ವಿಷಯವಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ನಿರುದ್ಯೋಗ, ಕೃಷಿ ಸಂಕಷ್ಟಗಳನ್ನೇ ಮುಂದಿಟ್ಟುಕೊಂಡು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಪ್ರಬಲ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತರಲು ಬಿಜೆಪಿ ಶ್ರಮಿಸುತ್ತಿದೆ. ಮೋದಿ ಅವರಿಗೆ ಸರಿಸಾಟಿಯಾಗಬಲ್ಲ ನಾಯಕ ವಿರೋಧ ಪಕ್ಷಗಳಲ್ಲಿ ಇಲ್ಲ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವುದು ಬಿಜೆಪಿಯ ಇನ್ನೊಂದು ಕಾರ್ಯತಂತ್ರ.

ಒಂದು ಕಾಲದಲ್ಲಿ ಪ್ರಭಾವಿಯಾಗಿದ್ದ ಎಡಪಕ್ಷಗಳು ಈಗ ಸೈದ್ಧಾಂತಿಕ ಗುಂಪಾಗಿ ಮಾತ್ರ ಉಳಿದಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಅಧಿಕಾರ ಕಳೆದುಕೊಂಡ ಪಕ್ಷವು ಈಗ ಭಾರಿ ದುರ್ಬಲ. ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ, ಬಿಹಾರದ ಜೆಡಿಯು ಮತ್ತು ಆರ್‌ಜೆಡಿ, ಹರಿಯಾಣದ ರಾಷ್ಟ್ರೀಯ ಲೋಕದಳ, ಒಡಿಶಾದ ಬಿಜು ಜನತಾ ದಳ ಮತ್ತು ಕರ್ನಾಟಕದ ಜೆಡಿಎಸ್‌ ಒಂದು ಗುಂಪಾಗಿ ಉಳಿದಿಲ್ಲ.

ಮಾಯಾವತಿ ಅವರ ಬಿಎಸ್‌ಪಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಹತ್ತ‌ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ಪಕ್ಷ ಸ್ಪರ್ಧಿಸುತ್ತಿದೆ. 1996ರಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಆ ಪಕ್ಷ ಇದೆ. ಆಗ, ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಪ್ರಧಾನಿಯಾಗಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ದೇವೇಗೌಡರಿಗೆ ಬೆಂಬಲ ಕೊಟ್ಟಿತ್ತು.

ಹಿಂದಿ ಭಾಷಿಕ ರಾಜ್ಯಗಳಲ್ಲಿನ ರಾಜಕೀಯ ಸಮೀಕರಣ ಬದಲಾಗಬಹುದು ಎಂಬುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಬಿಜೆಪಿ ಸುಮಾರು 200 ಸ್ಥಾನಗಳನ್ನು ಗಳಿಸಿತ್ತು.

ದೇಶದ ಮಧ್ಯ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ 2014ರಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದಕ್ಕಿತ್ತು. ಅದರ ಪುನರಾವರ್ತನೆ ಈ ಬಾರಿ ಸುಲಭವಲ್ಲ. ಆದರೆ, ‘ಪಾಕಿಸ್ತಾನದ ಮೇಲೆ ನಡೆಸಲಾದ ವಾಯುದಾಳಿ ರಾಜಕೀಯ ಚಿತ್ರಣವನ್ನು ಬದಲಿಸಿದೆ. ಇದು ಎಲ್ಲ ಜಾತಿ ಮತ್ತು ಮೈತ್ರಿ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಮತ ತಂದುಕೊಡಬಹುದು’ ಎಂದು ಬಿಜೆಪಿ ಮುಖಂಡರು ಭಾವಿಸಿದ್ದಾರೆ.

****

ಕಳೆದ ಚುನಾವಣೆಗಳಲ್ಲಿ ಮತ ಪ್ರಮಾಣ

29% - 2009ರಲ್ಲಿ ಕಾಂಗ್ರೆಸ್‌ ಮತ ಪ್ರಮಾಣ

19% -2014ರಲ್ಲಿ ಕಾಂಗ್ರೆಸ್‌ ಮತ ಪ್ರಮಾಣ

31% -2014ರಲ್ಲಿ ಬಿಜೆಪಿಯ ಮತ ಪ್ರಮಾಣ

19% -2009ರಲ್ಲಿ ಬಿಜೆಪಿಯ ಮತ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT