ರಾಹುಲ್‌ ಮೇಲೆ ಬೀರಿದ ಹಸಿರು ಬೆಳಕು ’ಸ್ನೈಪರ್ ಗುರಿಯಲ್ಲ, ಮೊಬೈಲ್‌ ಫೋನ್‌ ಬೆಳಕು’

ಶುಕ್ರವಾರ, ಏಪ್ರಿಲ್ 19, 2019
30 °C
ಅಮೇಠಿ ಲೋಕಸಭಾಕ್ಷೇತ್ರ

ರಾಹುಲ್‌ ಮೇಲೆ ಬೀರಿದ ಹಸಿರು ಬೆಳಕು ’ಸ್ನೈಪರ್ ಗುರಿಯಲ್ಲ, ಮೊಬೈಲ್‌ ಫೋನ್‌ ಬೆಳಕು’

Published:
Updated:

ನವದೆಹಲಿ: ರಾಹುಲ್‌ ಗಾಂಧಿ ಅವರ ಹಣೆ, ತಲೆಯ ಭಾಗದ ಮೇಲೆ ಬೀಳುತ್ತಿದ್ದ ಹಸಿರು ಬೆಳಕು ಮೊಬೈಲ್‌ ಫೋನ್‌ನಿಂದ ಬಂದಿರುವುದು, ಸ್ನೈಪರ್‌ ರೈಫಲ್‌ನ ಗುರಿಯಿಂದ ಅಲ್ಲ ಎಂದು ಗೃಹ ಸಚಿವಾಲಯ ಗುರುವಾರ ಹೇಳಿದೆ. ಅಮೇಠಿ ಭೇಟಿ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರ ಭದ್ರತೆಯಲ್ಲಿ ಲೋಪ ಉಂಟಾಗಿರುವ ಸಾಧ್ಯತೆ ಬಗ್ಗೆ ಕಾಂಗ್ರೆಸ್‌ ದೂರು ನೀಡಿತ್ತು. 

ಕಾಂಗ್ರೆಸ್‌ ಹಿರಿಯ ಮುಖಂಡರಾದ ಅಹಮದ್‌ ಪಟೇಲ್‌, ಜೈರಾಮ್‌ ರಮೇಶ್‌ ಹಾಗೂ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಗೃಹ ಸಚಿವ ರಾಜನಾಥ ಸಿಂಗ್‌ ಅವರಿಗೆ ಬುಧವಾರ ಪತ್ರ ಬರೆದಿದ್ದು, ರಾಹುಲ್‌ ಗಾಂಧಿ ಅವರ ಭದ್ರತೆ ಬಗ್ಗೆ ಕಾಳಜಿ ವ್ಯಕ್ತಪ‍ಡಿಸಿದ್ದರು. 

ರಾಹುಲ್‌ ಗಾಂಧಿ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದ ಪ್ರತಿಯನ್ನು ಕಾಂಗ್ರೆಸ್‌ ಗೃಹ ಸಚಿವಾಲಯಕ್ಕೆ ಕಳುಹಿಸಿ, ’ರಾಹುಲ್‌ ಗಾಂಧಿ ಅವರ ತಲೆಗೆ ಲೇಸರ್‌(ಹಸಿರು ಬಣ್ಣ) ಗುರಿಯಾಗಿಸಿತ್ತು. ಕಡಿಮೆ ಅವಧಿಯಲ್ಲಿ ಕನಿಷ್ಠ 7 ಬಾರಿ ಬೇರೆ ಬೇರೆ ಸಮಯದಲ್ಲಿ ಲೇಸರ್‌ ಬೆಳಕು ಬೀರಿದೆ’ ಎಂದು ವಿವರಿಸಿದೆ. 

ಕಾಂಗ್ರೆಸ್‌ ಮುಖಂಡರು ಕಳುಹಿಸಿರುವ ಪತ್ರ ತಲುಪಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಆದರೆ, ಪ್ರಧಾನಿ, ಮಾಜಿ ಪ್ರಧಾನಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ನೀಡುವ ಕಮಾಂಡೊಗಳ ವಿಶೇಷ ರಕ್ಷಣಾ ತಂಡಕ್ಕೆ ವಾಸ್ತವದ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿತ್ತು ಎಂದಿದೆ. 

ದೃಶ್ಯಗಳಲ್ಲಿ ಕಂಡು ಬಂದಿರುವ ‘ಹಸಿರು ಬೆಳಕು’, ಎಐಸಿಸಿ ಫೋಟೊಗ್ರಾಫರ್‌ ಬಳಸಿರುವ ಮೊಬೈಲ್‌ ಫೋನ್‌ನಿಂದ ಬಂದುದಾಗಿದೆ. ಅಮೇಠಿ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ರಾಹುಲ್‌ ಗಾಂಧಿ ಮಾಧ್ಯಮಗಳೊಂದಿಗೆ ನಡೆಸುತ್ತಿದ್ದ ಸಂವಾದದ ದೃಶ್ಯ ಸೆರೆಹಿಡಿಯುತ್ತಿದ್ದರು’ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ವಿಶೇಷ ರಕ್ಷಣಾ ತಂಡ(ಎಸ್‌ಪಿಜಿ)ದ ಮುಖ್ಯಸ್ಥರಿಂದ ಪಡೆದಿರುವ ವರದಿಯನ್ನು ಗೃಹ ಸಚಿವಾಲಯದ ವಕ್ತಾರರು ಉಲ್ಲೇಖಿಸಿದ್ದಾರೆ. ಭದ್ರತೆಯಲ್ಲಿ ಯಾವುದೇ ತೊಡಕಾಗಿಲ್ಲ ಎಂದು ಎಸ್‌ಪಿಜಿ ನಿರ್ದೇಶಕರು ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ.

ಈ ವಾಸ್ತವಾಂಶಗಳನ್ನು ಎಸ್‌ಪಿಜಿ ರಾಹುಲ್‌ ಗಾಂಧಿ ಅವರ ಕಚೇರಿಗೂ ತಲುಪಿಸಿರುವುದಾಗಿ ಗೃಹ ಸಚಿವಾಲಯ ಹೇಳಿದೆ. 

ಬರಹ ಇಷ್ಟವಾಯಿತೆ?

 • 9

  Happy
 • 7

  Amused
 • 3

  Sad
 • 1

  Frustrated
 • 5

  Angry

Comments:

0 comments

Write the first review for this !