ಉತ್ತರಪ್ರದೇಶ: ಬಿಜೆಪಿಗೆ ಭಿನ್ನಮತದ ಸವಾಲು

ಸೋಮವಾರ, ಏಪ್ರಿಲ್ 22, 2019
31 °C

ಉತ್ತರಪ್ರದೇಶ: ಬಿಜೆಪಿಗೆ ಭಿನ್ನಮತದ ಸವಾಲು

Published:
Updated:

ಲಖನೌ: ಉತ್ತರಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿದ ಪ್ರದರ್ಶನ ಪುನರಾವರ್ತಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯು ಈ ಬಾರಿ ಭಿನ್ನಮತವನ್ನೂ ಎದುರಿಸಬೇಕಾಗಿದೆ. ಟಿಕೆಟ್‌ ಸಿಗದೇ ನಿರಾಶರಾದ ಸುಮಾರು ಒಂದು ಡಜನ್‌ ಹಾಲಿ ಮತ್ತು ಮಾಜಿ ಸಂಸತ್‌ ಸದಸ್ಯರಲ್ಲಿ ಕೆಲವರು ಎದುರಾಳಿ ಪಕ್ಷ ಸೇರಿದ್ದಾರೆ. ಮತ್ತೆ ಕೆಲವರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವ ಬೆದರಿಕೆಯೊಡ್ಡಿದ್ದಾರೆ.

ಆಜಂಗಡ ಕ್ಷೇತ್ರದಲ್ಲಿ ಟಿಕೆಟ್‌ ಸಿಗದ ಕಾರಣ ಮಾಜಿ ಸಂಸತ್‌ ಸದಸ್ಯ ರಮಾಕಾಂತ್‌ ಯಾದವ್‌ ಅವರು ಶುಕ್ರವಾರ ಕಾಂಗ್ರೆಸ್‌ ಸೇರ್ಪಡೆಯಾದರು. ಯಾದವ ಸಮುದಾಯದ ಮೇಲೆ ಪ್ರಭಾವ ಹೊಂದಿರುವ ರಮಾಕಾಂತ್‌ ಅವರನ್ನು ಕಾಂಗ್ರೆಸ್‌ ಪಕ್ಷವು ಗಾಜಿಪುರ ಇಲ್ಲವೇ ಭದೋಹಿ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಇಟಾವಾ ಕ್ಷೇತ್ರದ ಹಾಲಿ ಸಂಸದ ಅಶೋಕ ದೋಹರೆ ಕೂಡ ಕಾಂಗ್ರೆಸ್‌ ಸೇರಿದ್ದಾರೆ.

ಹರದೋಯಿ ಕ್ಷೇತ್ರದಿಂದ ಟಿಕೆಟ್‌ ಸಿಗದ ಕಾರಣ ಹಾಲಿ ಸಂಸದ ಅನ್ಶುಲ್‌ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ತಮ್ಮ ಅಸಮಾಧಾನದ ಸಂಕೇತವಾಗಿ ರಾಜೀನಾಮೆ ಪತ್ರವನ್ನು ವರ್ಮಾ ಅವರು ಬಿಜೆಪಿ ಮುಖ್ಯ ಕಚೇರಿಯ ‘ಚೌಕಿದಾರ’ನಿಗೆ ಹಸ್ತಾಂತರಿಸಿದ್ದರು. ಆ ಮೂಲಕ ಪ್ರಧಾನಿ ಮೋದಿ ಅವರ ‘ಮೈ ಭೀ ಚೌಕೀದಾರ್‌’ ಅಭಿಯಾನದ ವಿರುದ್ಧ ಪ್ರತಿಭಟನೆ ದಾಖಲಿಸಿದ್ದರು.

ಹಾಲಿ ಸಂಸದರಾದ ಪ್ರಿಯಾಂಕ ರಾವತ್‌ (ಬಾರಾಬಂಕಿ) ಮತ್ತು ಭೈರೊಪ್ರಸಾದ್‌ ಮಿಶ್ರಾ (ಬಂಡಾ) ಪಕ್ಷದ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫತೇಪುರ ಸಿಕ್ರಿಯ ಹಾಲಿ ಸಂಸದ ಬಾಬುಲಾಲ್‌ ಚೌಧರಿ ಅವರೂ ಅಧಿಕೃತ ಅಭ್ಯರ್ಥಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ. ಈ ಪ್ರತಿರೋಧದಿಂದಾಗಿ ಯೋಗಿ ಆದಿತ್ಯನಾಥ ಅವರ ತವರು ಕ್ಷೇತ್ರ ಗೋರಖಪುರ ಸೇರಿದಂತೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !