ಸೋಮವಾರ, ಮೇ 23, 2022
30 °C
ಇಂದಿನಿಂದ ಲೋಕಸಭೆಯ ಮುಂಗಾರು ಅಧಿವೇಶನ

ಲೋಕಸಭೆ ಮುಂಗಾರು ಅಧಿವೇಶನ: ಅವಿಶ್ವಾಸ ನೋಟಿಸ್‌, ಗದ್ದಲ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯ ಎರಡು ನೋಟಿಸ್‌ಗಳು ಸಲ್ಲಿಕೆಯಾಗಿವೆ. 12 ವಿರೋಧ ಪಕ್ಷಗಳು ಒಂದಾಗಿ ಒಂದು ನೋಟಿಸ್‌ ನೀಡಿದ್ದರೆ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಕೂಡ ಒಂದು ನೋಟಿಸ್‌ ಸಲ್ಲಿಸಿದೆ. ಹಾಗಾಗಿ ಬುಧವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ.

ಅವಿಶ್ವಾಸ ಗೊತ್ತುವಳಿ ಮಂಡಿಸಲು 12 ಪಕ್ಷಗಳು ಸಹಮತ ಸೂಚಿಸಿವೆ. ಅಮಾಯಕರ ಮೇಲೆ ಗುಂಪುಗಳಿಂದ ಸಾಯ ಹೊಡೆತದ ಪ್ರಕರಣಗಳು, ಕೃಷಿ ಬಿಕ್ಕಟ್ಟು ಮತ್ತು ವಿದೇಶಾಂಗ ವ್ಯವಹಾರದಲ್ಲಿನ ವೈಫಲ್ಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ವಿರೋಧ ಪಕ್ಷಗಳ ಉದ್ದೇಶ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. 

12 ಪಕ್ಷಗಳು ಸಲ್ಲಿಸಿರುವ ನೋಟಿಸ್‌ಗೆ ಟಿಡಿಪಿ ಸಲ್ಲಿಸಿರುವ ನೋಟಿಸ್‌ ಜತೆಗೆ ಯಾವುದೇ ಸಂಬಂಧ ಇಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. 

ಗದ್ದಲದ ಇನ್ನೊಂದು ಕಾರಣ: ಕಾಂಗ್ರೆಸ್‌ ಮುಸ್ಲಿಮರ ಪಕ್ಷ ಎಂದು ಆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ ಎಂಬ ವರದಿ ಕೂಡ ಅಧಿವೇಶನದಲ್ಲಿ ಗದ್ದಲಕ್ಕೆ ಕಾರಣವಾಗಬಹುದು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೊದಲು ನಡೆಯಲಿರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ಮತ್ತು ವಿರೋಧ ಪಕ್ಷಗಳು ಇದನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ನಡೆಸಲಿವೆ.

ರಾಹುಲ್‌ ಹೇಳಿಕೆ ವಿಚಾರವನ್ನು ಮುನ್ನೆಲೆಗೆ ತರಲು ಬಿಜೆಪಿ ಯತ್ನಿಸಿದರೆ, ಎನ್‌ಡಿಎ ವಿರುದ್ಧ ಒಂದಾಗಲು ಚಿಂತಿಸುತ್ತಿರುವ ವಿರೋಧ ಪಕ್ಷಗಳು ಅದಕ್ಕೆ ತಿರುಗೇಟು ನೀಡಬಹುದು. ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ವಿಫಲವಾಗಿದೆ, ರಾಷ್ಟ್ರದಾದ್ಯಂತ ಅಮಾಯಕರ ಮೇಲೆ ಗುಂಪು ದಾಳಿಗಳು ನಡೆಯುತ್ತಿವೆ, ಕಾಶ್ಮೀರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ ಮತ್ತು ಬೆಲೆ ಏರಿಕೆಯಾಗಿದೆ ಎಂಬ ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಯತ್ನಿಸಬಹುದು. 

ಬಜೆಟ್‌ ಅಧಿವೇಶನದ ರೀತಿಯಲ್ಲಿಯೇ ಮಳೆಗಾಲದ ಅಧಿವೇಶನವೂ ಗದ್ದಲದಲ್ಲಿಯೇ ಕಳೆದು ಹೋಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ. ಬಜೆಟ್‌ ಅಧಿವೇಶನದಲ್ಲಿ ಯಾವುದೇ ಚರ್ಚೆ ಆಗಿರಲಿಲ್ಲ. ಹಣಕಾಸು ಮಸೂದೆ ಕೂಡ ಚರ್ಚೆಯೇ ಇಲ್ಲದೆ ಅಂಗೀಕಾರವಾಗಿತ್ತು. 

ಹಿಂದುತ್ವ ಕಾರ್ಯಸೂಚಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದೇ ಮುಂದಿನ ಚುನಾವಣೆ ಎದುರಿಸಲು ಸುರಕ್ಷಿತವಾದ ಮಾರ್ಗ ಎಂದು ಬಿಜೆಪಿಯ ಹಲವು ಹಿರಿಯ ಮುಖಂಡರು ಭಾವಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭೆ ಚುನಾವಣೆ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಲು ಇದುವೇ ಸರಿಯಾದ ಕಾರ್ಯತಂತ್ರ ಎಂದು ಬಿಜೆಪಿ ನಂಬಿದೆ. ಹಾಗಾಗಿಯೇ ರಾಹುಲ್‌ ಹೇಳಿಕೆ ಸದನದಲ್ಲಿ ಪ್ರತಿಧ್ವನಿಸಬಹುದು ಎಂದು ವಿಶ್ಲೇಷಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು