ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಸಭೆ: ಏಳನೇ ಬಾರಿ ಖರ್ಗೆ ಬಹಿಷ್ಕಾರ

ಕೇಂದ್ರ ಸರ್ಕಾರದ ಆಹ್ವಾನ ತಿರಸ್ಕಾರ: ಪ್ರಧಾನಿಗೆ ಪತ್ರ
Last Updated 15 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ನವದೆಹಲಿ: ಲೋಕಪಾಲರ ಆಯ್ಕೆ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ಕರೆದಿದ್ದ ಸಭೆಯನ್ನು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಬಹಿಷ್ಕರಿಸಿದ್ದಾರೆ.

ಇದರೊಂದಿಗೆ, ಸರ್ಕಾರ ಕಳೆದ ಫೆಬ್ರುವರಿ 28ರಂದು ಲೋಕಪಾಲರ ಆಯ್ಕೆ ಪ್ರಕ್ರಿಯೆ ಆರಂಭಿಸಿದ ನಂತರ ನಡೆಸಿದ ಎಲ್ಲ ಏಳು ಸಭೆಗಳನ್ನೂ ಖರ್ಗೆ ಬಹಿಷ್ಕರಿಸಿದಂತಾಗಿದೆ.

ಶುಕ್ರವಾರ ನಡೆಯುವ ಆಯ್ಕೆ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವಂತೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಖರ್ಗೆ ಅವರಿಗೆಗುರುವಾರ ಆಹ್ವಾನ ನೀಡಿತ್ತು.

ಕೇಂದ್ರ ಸರ್ಕಾರದ ಆಹ್ವಾನ ತಿರಸ್ಕರಿಸಿ ಪ್ರಧಾನಿಗೆ ಪತ್ರ ಬರೆದಿರುವ ಖರ್ಗೆ, ಇಂತಹ ಮಹತ್ವದ ವಿಷಯದಲ್ಲಿ ವಿರೋಧ ಪಕ್ಷಗಳ ಧ್ವನಿಗೆ ಬೆಲೆ ನೀಡದಿರುವ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿಗೆ ಪತ್ರ:‘ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲಿ ವಿಶೇಷ ಆಹ್ವಾನಿತರಿಗೆ ಯಾವುದೇ ಗುರುತರ ಜವಾಬ್ದಾರಿ ಇಲ್ಲದ ಕಾರಣ ಸಭೆಗೆ ಹಾಜರಾಗುವುದರಲ್ಲಿ ಅರ್ಥವಿಲ್ಲ’ ಎಂದು ಖರ್ಗೆ ಅವರು ಗುರುವಾರ ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಇಂತಹ ಮಹತ್ವದ ನಿರ್ಧಾರಗಳಲ್ಲಿ ವಿರೋಧ ಪಕ್ಷಗಳ ಧ್ವನಿಗೆ ಮನ್ನಣೆ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ಬಹು ದೊಡ್ಡ ವಿರೋಧ ಪಕ್ಷದ ನಾಯಕನನ್ನು ಲೋಕಪಾಲ ಆಯ್ಕೆ ಸಮಿತಿ ಸದಸ್ಯನನ್ನಾಗಿ ನೇಮಕ ಮಾಡಲು ಲೋಕಪಾಲ ಕಾಯ್ದೆಯ ನಿಬಂಧನೆಗಳಿಗೆ ತಿದ್ದುಪಡಿ ತರುವ ಸಣ್ಣ ಪ್ರಯತ್ನವನ್ನೂ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ಅವರು ಟೀಕಿಸಿದ್ದಾರೆ.

ಪೂರ್ವ ನಿಗದಿಯಂತೆ ಎಲ್ಲ ಸಭೆಗಳೂ ನಡೆದಿವೆ. ಸಮಿತಿ ರಚಿಸಿದ್ದ ಶೋಧನಾ ಸಮಿತಿಯು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿದ ಪಟ್ಟಿಯನ್ನೂ ಸಿದ್ಧಪಡಿಸಿದೆ. ಈ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಇಲ್ಲ ಎಂದು ಹೇಳಿದ್ದಾರೆ.

* ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದಲ್ಲಿ ಕಳೆದ ವರ್ಷ ಲೋಕಪಾಲ ಶೋಧನಾ ಸಮಿತಿ ನೇಮಕ ಮಾಡಿರುವ ಕೇಂದ್ರ ಸರ್ಕಾರ

* ಲೋಕಪಾಲ ಮತ್ತು ಸದಸ್ಯರ ಹುದ್ದೆಗೆ ಈಗಾಗಲೇ ಮೂವರ ಹೆಸರನ್ನು ಲೋಕಪಾಲ ಆಯ್ಕೆ ಸಮಿತಿಗೆ ಶಿಫಾರಸು ಮಾಡಿರುವ ಶೋಧನಾ ಸಮಿತಿ

* ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಕ್ಕೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಲೋಕಪಾಲ ಕಾಯ್ದೆ ರೂಪಿಸಿತ್ತು

*

ಲೋಕಪಾಲರ ಆಯ್ಕೆಯಲ್ಲಿ ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ. ಈ ಪ್ರಕ್ರಿಯೆಯಿಂದ ವಿರೋಧ ಪಕ್ಷಗಳನ್ನು ಹೊರಗಿಡಬೇಕು ಎನ್ನುವ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT