ಮಹಾರಾಷ್ಟ್ರ: ಆಡಳಿತ ಪಕ್ಷದ ನೆಮ್ಮದಿ ಕೆಡಿಸಿದ ಅನ್ನದಾತನ ಬೇಗುದಿ

ಶುಕ್ರವಾರ, ಏಪ್ರಿಲ್ 26, 2019
32 °C
ಬರಗಾಲ, ಕೃಷಿ ಸಂಕಷ್ಟ, ನೋಟು ರದ್ದತಿಯೇ ಲೋಕಸಭೆ ಚುನಾವಣೆ ವಿಷಯ

ಮಹಾರಾಷ್ಟ್ರ: ಆಡಳಿತ ಪಕ್ಷದ ನೆಮ್ಮದಿ ಕೆಡಿಸಿದ ಅನ್ನದಾತನ ಬೇಗುದಿ

Published:
Updated:
Prajavani

ಮುಂಬೈ: ತೀವ್ರ ಬರಗಾಲ, ಕೃಷಿ ಕ್ಷೇತ್ರದ ಸಂಕಷ್ಟ, ಇನ್ನೂ ಕಾಡುತ್ತಿರುವ ನೋಟು ರದ್ದತಿಯ ಪರಿಣಾಮಗಳು, ಜಿಎಸ್‌ಟಿ ಅನುಷ್ಠಾನದ ಗೊಂದಲದ ಜತೆಗೆ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಇರಿಸಿರುವ ಬೇಡಿಕೆಗಳು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಕಾಣುತ್ತಿರುವ ವಿಚಾರಗಳು.

ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. ರಾಜ್ಯದ ಅರ್ಧ ಭಾಗದಷ್ಟು ಪ್ರದೇಶ ಬರಗಾಲಕ್ಕೆ ತುತ್ತಾಗಿದೆ. ನೀರಿನ ಕೊರತೆ ಎಲ್ಲೆಡೆಯ ಸಮಸ್ಯೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಹಾಗಾಗಿ ಒಳನಾಡು ಎದುರಿಸುತ್ತಿರುವ ಸಮಸ್ಯೆಗಳು ಆ ಪಕ್ಷಕ್ಕೆ ದೊಡ್ಡ ಸವಾಲು. 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ದೇವೇಂದ್ರ ಫಡಣವೀಸ್‌ ನೇತೃತ್ವದ ಬಿಜೆಪಿ–ಶಿವಸೇನಾ ಸರ್ಕಾರ ಈವರೆಗೆ ಸುಮಾರು ₹10 ಸಾವಿರ ಕೋಟಿ ಪರಿಹಾರ ಕೊಟ್ಟಿವೆ. 

ನೀರಿನ ಕೊರತೆ ನೀಗುವುದಕ್ಕಾಗಿ ಜಲಯುಕ್ತ ಶಿವರ್‌ ಅಭಿಯಾನ ಎಂಬ ಕಾರ್ಯಕ್ರಮವನ್ನು ಮಹಾರಾಷ್ಟ್ರ ಸರ್ಕಾರ ಹಾಕಿಕೊಂಡಿದೆ. ಆದರೆ, ರಾಜ್ಯವನ್ನು ಬರಮುಕ್ತಗೊಳಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿಲ್ಲ ಎಂದು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟ ಆರೋಪಿಸುತ್ತಿದೆ. 

ಕಳೆದ ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು. 

ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ಮೈತ್ರಿಕೂಟವು ಬಿಜೆಪಿ–ಶಿವಸೇನಾ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಲಿದೆ. ಎರಡೂ ಮೈತ್ರಿಕೂಟಗಳಲ್ಲಿ ಹಲವು ಸಣ್ಣ ಪಕ್ಷಗಳು ಇವೆ. ಹಾಗಾಗಿ, ಮಹಾರಾಷ್ಟ್ರದ ಬಹುಪಾಲು ಕ್ಷೇತ್ರಗಳಲ್ಲಿ ನೇರ ಹಣಾಹಣಿಯೇ ನಡೆಯುವ ನಿರೀಕ್ಷೆ ಇದೆ. ಬೆಲೆ ಏರಿಕೆ ಮತ್ತು ಹಣದುಬ್ಬರ, ನೋಟು ರದ್ದತಿ ಮತ್ತು ಜಿಎಸ್‌ಟಿ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟ ನಿರ್ಧರಿಸಿದೆ. 

ಈ ಸಮಸ್ಯೆಗಳು ನಿಜಕ್ಕೂ ಜನ ಜೀವನವನ್ನು ಕಂಗೆಡಿಸಿದೆ ಎಂದು ಮುಂಬೈ ಮಹಾನಗರದ ನಿವಾಸಿ ಸುಬ್ರತಾ ರಾಯ್‌ ಹೇಳುತ್ತಾರೆ. ‘ಇದು ಸುಳ್ಳುಗಳ ಸರ್ಕಾರ, ಸುಳ್ಳು ಭರವಸೆಗಳ ಸರ್ಕಾರ’ ಎಂದು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಮುಖಂಡರು ಹೇಳುತ್ತಿದ್ದಾರೆ.  

ಡಾ. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರು ವಂಚಿತ್‌ ಬಹುಜನ ಅಘಾಡಿ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಪಕ್ಷ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೋದಿ ಅವರು ಸಂವಿಧಾನವನ್ನೇ ಬದಲಾಯಿಸಬಹುದು ಎಂದು ಪ್ರಕಾಶ್‌ ಅಂಬೇಡ್ಕರ್‌ ಹೇಳುತ್ತಾರೆ. 

ಮೋದಿ ಅವರ ನೆಚ್ಚಿನ ಬುಲೆಟ್‌ ರೈಲು ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದು ಚುನಾವಣೆಯಲ್ಲಿ ಪ್ರತಿಫಲನಗೊಳ್ಳಬಹುದು. ಬುಲೆಟ್‌ ರೈಲು ಮಾರ್ಗವು ಠಾಣೆ ಮತ್ತು ಪಾಲ್ಘರ್‌ ಜಿಲ್ಲೆಗಳ ಮೂಲಕ ಮುಂಬೈ ತಲುಪುತ್ತದೆ. ಬುಲೆಟ್‌ ರೈಲು ಯೋಜನೆಗಾಗಿನ ಭೂ ಸ್ವಾಧೀನಕ್ಕೆ ಈ ಜಿಲ್ಲೆಗಳ ರೈತರು ತೀವ್ರ ಪ್ರತಿರೋಧ ಒಡುತ್ತಿದ್ದಾರೆ.

 

ಮೀಸಲು ಗೋಜಲು

ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಮರಾಠ ಸಮುದಾಯಕ್ಕೆ ಮಹಾರಾಷ್ಟ್ರ ಸರ್ಕಾರ ಶೇ 16ರಷ್ಟು ಮೀಸಲು ನೀಡಿದೆ. ಮಹಾರಾಷ್ಟ್ರದ 11.25 ಕೋಟಿ ಜನಸಂಖ್ಯೆಯಲ್ಲಿ ಮರಾಠರ ಪಾಲು ಶೇ 33. ರಾಜ್ಯದ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಸಮುದಾಯ ಇದು. 

ಮಹಾರಾಷ್ಟ್ರದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಈಗ ಶೇ 68ಕ್ಕೆ ಏರಿದೆ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ 69ರಷ್ಟಿದೆ. ದೇಶದಲ್ಲಿ ಅತಿ ಹೆಚ್ಚು ‍ಪ್ರಮಾಣದಲ್ಲಿ ಮೀಸಲಾತಿ ಇರುವ ಎರಡನೇ ರಾಜ್ಯ ಮಹಾರಾಷ್ಟ್ರ. ಸುಪ್ರೀಂ ಕೋರ್ಟ್ ರೂಪಿಸಿದ ನಿಯಮ ಪ್ರಕಾರ ಯಾವುದೇ ರಾಜ್ಯದಲ್ಲಿ ಮೀಸಲಾತಿ ಶೇ 50ರಷ್ಟನ್ನು ಮೀರುವಂತಿಲ್ಲ. 

ಮರಾಠರು ಮೂಲಭೂತವಾಗಿ ಕೃಷಿಕರು. ರಾಜಕೀಯವಾಗಿ ಪ್ರಭಾವಿಗಳು. ಹಾಗಾಗಿ ಈ ವಿಚಾರವನ್ನು ವಿವರವಾಗಿ ಪ‍ರಿಶೀಲಿಸುವ ಅಗತ್ಯ ಇದೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ. 

ತಮಗೂ ಮೀಸಲಾತಿ ಬೇಕು ಎಂದು ಮುಸ್ಲಿಂ, ಧನ್‌ಗಾರ್‌, ಕುರುಬ ಸಮುದಾಯ ಕೂಡ ಬೇಡಿಕೆ ಮುಂದಿಟ್ಟಿವೆ. 

* ಬರ, ರೈತರ ಸಂಕಷ್ಟ, ನೀರಿನ ಕೊರತೆ, ಬೆಳೆ ವೈಫಲ್ಯ ಮತ್ತು ಗ್ರಾಮೀಣ ಅರ್ಥ ವ್ಯವಸ್ಥೆಯ ತಪ್ಪು ನಿರ್ವಹಣೆಗಳೆಲ್ಲವೂ ಜತೆಯಾಗಿವೆ. ಇದುವೇ ಈ ಚುನಾವಣೆಯ ಮುಖ್ಯ ವಿಷಯ

– ಕಿಶೋರ್‌ ತಿವಾರಿ, ವಸಂತರಾವ್‌ ನಾಯ್ಕ್‌ ಶೇಟಿ ಸ್ವಾವಲಂಬನ್‌ ಮಿಷನ್‌ನ ಅಧ್ಯಕ್ಷ

ಮೈತ್ರಿ ಸೀಟು ಹಂಚಿಕೆ

ಎನ್‌ಡಿಎ

ಬಿಜೆಪಿ: 25

ಶಿವಸೇನಾ: 23

ಯುಪಿಎ

ಕಾಂಗ್ರೆಸ್‌: 26

ಎನ್‌ಸಿಪಿ: 22

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !