ಉತ್ತರ ಪ್ರದೇಶ: 80 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಕಾಂಗ್ರೆಸ್‌ ಸಜ್ಜು

7
ಬಿಜೆಪಿ ವಿರುದ್ಧ ಒಗ್ಗೂಡಿದ ಪಕ್ಷಗಳು

ಉತ್ತರ ಪ್ರದೇಶ: 80 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಕಾಂಗ್ರೆಸ್‌ ಸಜ್ಜು

Published:
Updated:

ಲಖನೌ: ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಕಾಂಗ್ರೆಸ್‌ ಭಾನುವಾರ ಘೋಷಿಸಿದೆ.

ಸಮಾಜವಾದಿ ಪಾರ್ಟಿ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಮೈತ್ರಿಯಿಂದ ಹೊರಗಿಟ್ಟ ಮರುದಿನವೇ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಬಿಜೆಪಿ ವಿರುದ್ಧ ಸ್ಪರ್ಧಿಸಲು ಸಮರ್ಥವಾಗಿರುವ ಜಾತ್ಯತೀತ ಪಕ್ಷಗಳ ಮೈತ್ರಿಗೆ ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್‌ ಹೇಳಿದೆ.

‘ಉತ್ತರ ಪ್ರದೇಶದ ಮಹಾಮೈತ್ರಿಯಲ್ಲಿ ಕಾಂಗ್ರೆಸ್‌ ಸಹ ಇರಬೇಕಿತ್ತು. ಆದರೆ, ನಮ್ಮ ಜೊತೆಗೆ ಬರಲು ಕೆಲವ
ರಿಗೆ ಇಷ್ಟವಿಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ರಾಷ್ಟ್ರ ಮಟ್ಟದಲ್ಲಿ ಎಲ್ಲ ಜಾತ್ಯತೀತ ಪಕ್ಷಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶದ ಉಸ್ತುವಾರಿ ಗುಲಾಂ ನಬಿ ಆಜಾದ್‌ ಭಾನುವಾರ ಪತ್ರಕರ್ತರಿಗೆ ತಿಳಿಸಿದರು.

‘ಎಸ್‌ಪಿ–ಬಿಎಸ್‌ಪಿ ಮೈತ್ರಿಯಿಂದ ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟಿದ್ದಕ್ಕೆ ನಮ್ಮ ಕಾರ್ಯಕರ್ತರಿಗೆ ಬೇಸರವಾಗಿಲ್ಲ. ಮೈತ್ರಿಕೂಟದಲ್ಲಿದ್ದರೆ 25 ಕ್ಷೇತ್ರಗಳಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಬೇಕಿತ್ತು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ, ಈಗ 80 ಕ್ಷೇತ್ರಗಳಲ್ಲೂ ಸ್ಪರ್ಧಿಸಲಾಗುವುದು’ ಎಂದು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. 2009ರ ಲೋಕಸಭೆ ಚುನಾವಣೆಯಲ್ಲಿ 21 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ ಇದು ದುಪ್ಪಟ್ಟು ಆಗಲಿದೆ’ ಎಂದು ಆಜಾದ್‌ ವಿಶ್ವಾಸ ವ್ಯಕ್ತಪಡಿಸಿದರು. 

‘ಬಿಜೆಪಿಯನ್ನು ಸೋಲಿಸಲು ಸಮರ್ಥವಾಗಿರುವ ಯಾವುದೇ ರಾಜಕೀಯ ಪಕ್ಷ ನಮ್ಮ ಜತೆಗೆ ಬಂದರೆ ಸ್ಥಾನ ಹೊಂದಾಣಿಕೆಗೆ ಸಿದ್ಧರಿದ್ದೇವೆ’ ಎಂದ ಅವರು, ರಾಷ್ಟ್ರೀಯ ಲೋಕ ದಳ ಜತೆಗೆ ಮೈತ್ರಿ ಸಾಧ್ಯತೆ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.

ಬಿಹಾರ ಮೈತ್ರಿ ಘೋಷಣೆ ವಿಳಂಬ

ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟಕ್ಕೆ ಸೇರಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈಗ ಬಿಹಾರದಿಂದಲೂ ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಹಿತಕರವಲ್ಲದ ಸುದ್ದಿಯೊಂದು ಬಂದಿದೆ. ಬಿಹಾರದಲ್ಲಿ ಲಾಲು ಪ್ರಸಾದ್‌ ಅವರ ಆರ್‌ಜೆಡಿ ಬೆನ್ನೇರಿಯೇ ಕಾಂಗ್ರೆಸ್‌ ಮುಂದಕ್ಕೆ ಸಾಗಬೇಕು. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳ ನಡುವಣ ಸೀಟು ಹಂಚಿಕೆಯ ಬಗ್ಗೆ ಈವರೆಗೆ ಯಾವುದೂ ಅಂತಿಮ ಆಗಿಲ್ಲ. 

ಮಹಾಮೈತ್ರಿ ಕೂಟವನ್ನು ಹಲವು ಸಣ್ಣ ಪಕ್ಷಗಳು ಸೇರಿವೆ. ಪ್ರತಿ ಪಕ್ಷವೂ ಹೆಚ್ಚು ಕ್ಷೇತ್ರಗಳಿಗೆ ಬೇಡಿಕೆ ಇಡುತ್ತಿವೆ. ಇದು ಸೀಟು ಹಂಚಿಕೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ.

ಹಾಗಾಗಿ, ಬಿಹಾರದ ಸೀಟು ಹಂಚಿಕೆ ಘೋಷಣೆಯನ್ನು ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಲಾಗಿದೆ. 

ಮೈತ್ರಿಕೂಟದ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಫೆಬ್ರುವರಿ 3ರಂದು ಪಟ್ನಾದ ಗಾಂಧಿ ಮೈದಾನದಲ್ಲಿ ಸಮಾವೇಶ ಉದ್ದೇಶಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ. ಅದಾದ ಬಳಿಕವೇ ಸೀಟು ಹಂಚಿಕೆ ವಿವರ ಬಹಿರಂಗವಾಗಲಿದೆ ಎಂದು ಮೈತ್ರಿಕೂಟದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಸೀಟು ಹಂಚಿಕೆ ವಿವರಗಳನ್ನು ಮಕರ ಸಂಕ್ರಾಂತಿ ಹೊತ್ತಿಗೆ ಬಹಿರಂಗಪಡಿಸಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು.

ಮೈತ್ರಿಕೂಟದಿಂದ ಪ್ರಬಲ ಸ್ಪರ್ಧೆ

ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಬಿಜೆಪಿ ಮಿತ್ರ ಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಹೇಳಿದೆ. 

‘ಯಾವುದೇ ಮೈತ್ರಿ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಪಕ್ಷವೂ ಧೈರ್ಯ ಹೊಂದಿಲ್ಲ. ದೇಶದಲ್ಲಿ ಮೈತ್ರಿಕೂಟದ ಯುಗ ಆರಂಭವಾಗಿದೆ. ಎಸ್‌ಪಿ–ಬಿಎಸ್‌ಪಿ ಮೈತ್ರಿಯು ಪ್ರಬಲ ಸ್ಪರ್ಧೆ ನೀಡಲಿದೆ’ ಎಂದು ಉತ್ತರ ಪ್ರದೇಶದ ಸಚಿವ ಹಾಗೂ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜಭರ್‌ ಹೇಳಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಶೇ 60ಕ್ಕೂ ಹೆಚ್ಚು ಜನರ ಒಲವಿದೆ ಎಂಬ ತಪ್ಪು ಕಲ್ಪನೆಯಲ್ಲಿ ಬಿಜೆಪಿ ಇದೆ. ಇಂಥ ಭ್ರಮೆ ಹೊಂದಿದ್ದರಿಂದಲೇ ಕಳೆದ ವರ್ಷ ನಡೆದ ಲೋಕಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿತು’ ಎಂದು ಅವರು ಮಿತ್ರ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಎಸ್‌ಪಿ–ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ವದಂತಿಯನ್ನು ತಳ್ಳಿ ಹಾಕಿದ ಅವರು, ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಯಬೇಕಾದರೆ, ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಮೂರು ವರ್ಗಗಳಾಗಿ ವಿಂಗಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !