ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ವಾರ್ಷಿಕ ₹72 ಸಾವಿರ; ರಾಹುಲ್‌ ಭರವಸೆ

ಬಡತನ ನಿರ್ಮೂಲನೆ ಯೋಜನೆಯ ಭರವಸೆ ಕೊಟ್ಟ ರಾಹುಲ್‌
Last Updated 25 ಮಾರ್ಚ್ 2019, 20:35 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆಭಾರತದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕಾಗಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತರಲಾಗುವುದು. ಕಡು ಬಡ ಕುಟುಂಬಗಳಿಗೆ ವರ್ಷಕ್ಕೆ ₹72 ಸಾವಿರವನ್ನು ಕನಿಷ್ಠ ಆದಾಯವಾಗಿ ನೀಡಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ಕೊಟ್ಟಿದ್ದಾರೆ.

ದೇಶದ ಶೇ 20ರಷ್ಟು ಕುಟುಂಬಗಳು ಕಡುಬಡತನದಲ್ಲಿವೆ. ಇಂತಹ ಐದು ಕೋಟಿ ಕುಟುಂಬಗಳಿವೆ. ಒಟ್ಟು 25 ಕೋಟಿ ಜನರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ ಎಂದು ರಾಹುಲ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ಇಂದು ಚಾರಿತ್ರಿಕ ದಿನ. ಬಡತನದ ಮೇಲಿನ ಅಂತಿಮ ಪ್ರಹಾರವನ್ನು ಕಾಂಗ್ರೆಸ್‌ ಪಕ್ಷ ಆರಂಭಿಸಿದೆ. ದೇಶಕ್ಕೆ ನ್ಯಾಯ ನಮ್ಮ ಕನಸು ಮತ್ತು ಬದ್ಧತೆ. ಬದಲಾವಣೆಯ ಸಮಯ ಬಂದಿದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯನ್ನು ಅಂತಿಮಗೊಳಿಸುವುದಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಸೋಮವಾರ ನಡೆಯಿತು. ಈ ಸಭೆಯಲ್ಲಿ ಕನಿಷ್ಠ ಆದಾಯ ಖಾತರಿ ಯೋಜನೆಯ ಬಗ್ಗೆ ಚರ್ಚೆ ನಡೆದಿದೆ. ಈ ಸಭೆಯ ಬಳಿಕ ರಾಹುಲ್‌ ಅವರು ಈ ಯೋಜನೆ ಜಾರಿಯ ಭರವಸೆ ಕೊಟ್ಟರು.

‘ದೇಶದ ಬೊಕ್ಕಸದ ಮೇಲೆ ಈ ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಮತ್ತು ಪರಿಣತರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಯೋಜನೆಯನ್ನು ಅಂತಿಮ ಮಾಡಿದ್ದೇವೆ’ ಎಂದು ರಾಹುಲ್‌ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಣವನ್ನು ಶ್ರೀಮಂತರಿಗಷ್ಟೇ ನೀಡುತ್ತಿದ್ದಾರೆ. ಬಡವರಿಗೆ ಕೊಡುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಜನರು ಭಾರಿ ಕಷ್ಟ ಅನುಭವಿಸಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಹೀಗೆ ಕಷ್ಟ ಅನುಭವಿಸಿದವರಿಗೆ ಕಾಂಗ್ರೆಸ್‌ ಪಕ್ಷವು ನ್ಯಾಯ ಒದಗಿಸಲಿದೆ ಎಂದರು.

‘ಮೋದಿ ಅವರು ಶ್ರೀಮಂತರಿಗೆ ಹಣ ಕೊಡುತ್ತಾರೆ. ಆದರೆ, ಕಾಂಗ್ರೆಸ್‌ ಈ ಹಣವನ್ನು ಬಡವರಿಗೆ ನೀಡಲಿದೆ’ ಎಂದು ರಾಹುಲ್‌ ಹೇಳಿದ್ದಾರೆ.

ಲೆಕ್ಕಾಚಾರ

ಅರ್ಥಶಾಸ್ತ್ರಜ್ಞರ ಜತೆಗೆ ನಡೆಸಿದ ಸಮಾಲೋಚನೆ ಪ್ರಕಾರ, ದೇಶದಲ್ಲಿ ಒಂದು ಕುಟುಂಬದ ಕನಿಷ್ಠ ಆದಾಯ ತಿಂಗಳಿಗೆ ₹12 ಸಾವಿರ ಇರಬೇಕು. ಇದಕ್ಕಿಂತ ಕಡಿಮೆ ವರಮಾನ ಇರುವ ಕುಟುಂಬಕ್ಕೆ ತಿಂಗಳಿಗೆ ₹12 ಸಾವಿರ ದೊರೆಯುವ ಖಾತರಿ ನೀಡಲಾಗುವುದು. ಕುಟುಂಬವು ₹12 ಸಾವಿರ ಆದಾಯ ಗಳಿಸುವ ಸ್ಥಿತಿಗೆ ಬಂದಾಗ ಈ ನೆರವನ್ನು ನಿಲ್ಲಿಸಲಾಗುವುದು ಎಂದು ರಾಹುಲ್‌ ಹೇಳಿದ್ದಾರೆ.

*ಬಡತನದ ಮೇಲೆ ಅಂತಿಮ ಪ್ರಹಾರ ಆರಂಭವಾಗಿದೆ. ನಾವು ಬಡತನವನ್ನು ದೇಶದಿಂದ ನಿರ್ಮೂಲನೆ ಮಾಡಲಿದ್ದೇವೆ

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*ಹೇಳಿಕೆಗಳು ಮತ್ತು ಘೋಷಣೆಗಳಿಂದ ಬಡತನ ನಿರ್ಮೂಲನೆ ಆಗದು... ನೀವು (ಕಾಂಗ್ರೆಸ್‌) ಹಲವು ಬಾರಿ ಬಡವರನ್ನು ವಂಚಿಸಿದ್ದೀರಿ. ಮತ್ತೆ ಅದನ್ನೇ ಮಾಡಲು ಯತ್ನಿಸುತ್ತಿದ್ದೀರಿ

– ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

* ಕಾಂಗ್ರೆಸ್‌ ಅಧ್ಯಕ್ಷರು ಘೋಷಿಸಿದ ಯೋಜನೆಯು ಆರ್ಥಿಕ ಶಿಸ್ತನ್ನೇ ಹದಗೆಡಿಸಲಿದೆ. ಈ ಯೋಜನೆ ಜನರು ಕೆಲಸ ಮಾಡದಂತೆ ತಡೆಯಲಿದೆ

– ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT