ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಷಿಗೂ ಇಲ್ಲ ಬಿಜೆಪಿ ಟಿಕೆಟ್‌

ಅಡ್ವಾಣಿ ಬಳಿಕ ಮತ್ತೊಬ್ಬ ಹಿರಿಯ ಮುಖಂಡನಿಗೆ ಅವಕಾಶ ನಿರಾಕರಣೆ
Last Updated 26 ಮಾರ್ಚ್ 2019, 19:36 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಅಮಿತ್‌ ಶಾ ಅವರನ್ನು ಕಣಕ್ಕಿಳಿಸಿದ ಬೆನ್ನಿಗೇ ಮತ್ತೊಬ್ಬ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ಹೇಳಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ರಾಮ್‌ ಲಾಲ್‌ ಅವರು ಈ ವಿಚಾರವನ್ನು ಜೋಷಿ ಅವರಿಗೆ ತಿಳಿಸಿದ್ದಾರೆ. ಟಿಕೆಟ್‌ ನಿರಾಕರಿಸಲಾಗಿರುವ ಮಾಹಿತಿಯನ್ನು ಅಡ್ವಾಣಿ ಅವರಿಗೂ ರಾಮ್‌ ಲಾಲ್‌ ಅವರೇ ಕಳೆದ ವಾರ ತಿಳಿಸಿದ್ದರು.

ಜೋಷಿ ಅವರು ಕಾನ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಸತ್ಯದೇವ್‌ ಪಚೌರಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಜೋಷಿ ಅವರು ಕಾನ್ಪುರದ ಮತದಾರರಿಗೆ ಬರೆದದ್ದು ಎಂದು ಹೇಳಲಾಗಿರುವ ಮೂರು ಸಾಲಿನ ಪತ್ರವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ‘ಕಾನ್ಪುರದ ಮತದಾರರೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾನ್ಪುರ ಅಥವಾ ಬೇರೆ ಯಾವುದೇ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಬಾರದು ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ತಿಳಿಸಿದ್ದಾರೆ’ ಎಂದು ಈ ಪತ್ರದಲ್ಲಿ ಇದೆ. ಈ ಪತ್ರದಲ್ಲಿ ಜೋಷಿ ಅವರ ಸಹಿ ಇಲ್ಲ.

ಜೋಷಿ ಅವರಿಗೆ ಟಿಕೆಟ್‌ ನಿರಾಕರಿಸಿದ್ದನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿವೆ.

‘ಸಂಸತ್ತಿನ ಅಂದಾಜು ಸಮಿತಿಯ ಅಧ್ಯಕ್ಷರಾಗಿರುವ ಜೋಷಿ ಅವರು, ಭಾರತದ ರಕ್ಷಣಾ ವೆಚ್ಚವು ಜಿಡಿಪಿಯ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ 1962ರ ಮಟ್ಟಕ್ಕೆ ಹೋಗಿದೆ ಎಂಬ ವರದಿ ನೀಡಿದ್ದರು. ಈಗ ಜೋಷಿ ಅವರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಮೋದಿ ಅವರು ಆ ವರದಿಗೆ ತಿರುಗೇಟು ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಹೇಳಿದ್ದಾರೆ.

ಪಕ್ಷದ ಹಿರಿಯ ಮುಖಂಡ ಮತ್ತು ದೇವರಿಯ ಕ್ಷೇತ್ರದ ಸಂಸದ ಕಲ್‌ರಾಜ್‌ ಮಿಶ್ರಾ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಆರಂಭದಲ್ಲಿಯೇ ಹೇಳಿದ್ದರು. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್‌ ಅವರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದರು. ಆದರೆ, ಅಡ್ವಾಣಿ ಮತ್ತು ಜೋಷಿ ಅವರು ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಪಕ್ಷದ ಅಪೇಕ್ಷೆಯಂತೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಈ ಇಬ್ಬರೂ ಸಮ್ಮತಿಸಿಲ್ಲ ಎಂದು ಹೇಳಲಾಗಿದೆ.

ಜೋಷಿ ಅವರಿಗೆ ಟಿಕೆಟ್‌ ನಿರಾಕರಿಸುವ ನಿರ್ಧಾರ ಕೈಗೊಳ್ಳುವುದು ಬಿಜೆಪಿಗೆ ಬಹಳ ಕಠಿಣವಾಗಿದೆ. ಈ ನಿರ್ಧಾರವನ್ನು ಮೌನವಾಗಿ ಒಪ್ಪಿಕೊಳ್ಳಲು ಜೋಷಿ ಅವರು ಸಿದ್ಧರಿಲ್ಲ ಎನ್ನಲಾಗಿದೆ. ಮಾರ್ಗದರ್ಶಕ ಮಂಡಳಿಯಲ್ಲಿರುವ ಇತರರ ಜತೆ ಸೇರಿ ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ದಾಖಲಿಸಲು ಅವರು ಸಿದ್ಧವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಚಾರಕ್ಕೂ ಇಲ್ಲ

ಮೊದಲ ಎರಡು ಹಂತಗಳಲ್ಲಿ ಮತದಾನ ನಡೆಯುವ ಕ್ಷೇತ್ರಗಳಿಗೆ 40 ತಾರಾ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಡ್ವಾಣಿ (91) ಮತ್ತು ಜೋಷಿ (85) ಅವರ ಹೆಸರು ಇಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಕ್ಕೆ ಅಡ್ವಾಣಿ ವಿರೋಧ ವ್ಯಕ್ತಪಡಿಸಿದ್ದರು. ಚುನಾವಣೆಯ ಬಳಿಕ ಅಡ್ವಾಣಿ, ಜೋಷಿ ಮತ್ತು ಇತರ ಹಿರಿಯ ಮುಖಂಡರನ್ನು ಸೇರಿಸಿ ಮಾರ್ಗದರ್ಶಕ ಮಂಡಳಿ ಎಂಬ ಸಮಿತಿ ರಚಿಸಲಾಗಿತ್ತು.

ಜೋಷಿ ಅವರು ತಾವು ಪ್ರತಿನಿಧಿಸುತ್ತಿದ್ದ ವಾರಾಣಸಿ ಕ್ಷೇತ್ರವನ್ನು ಮೋದಿ ಅವರಿಗಾಗಿ ಕಳೆದ ಬಾರಿ ಬಿಟ್ಟುಕೊಟ್ಟಿದ್ದರು. ಕಾನ್ಪುರದಿಂದ ಸ್ಪರ್ಧಿಸಿ ಭಾರಿ ಬಹುಮತದಿಂದ ಗೆದ್ದಿದ್ದರು.

ತಾರಾ ಪ್ರಚಾರಕರ ಪಟ್ಟಿಯಲ್ಲಿ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ, ಸುಷ್ಮಾ ಸ್ವರಾಜ್‌, ಉಮಾ ಭಾರತಿ ಮುಂತಾದವರಿದ್ದಾರೆ.

ಸುಷ್ಮಾ ಮತ್ತು ಉಮಾ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಹಿರಿಯ ಮುಖಂಡರಾದ ಬಿ.ಸಿ. ಖಂಡೂರಿ, ಬಿ.ಎಸ್‌. ಕೋಷಿಯಾರಿ ಮತ್ತು ಕರಿಯ ಮುಂಡಾ ಅವರಿಗೆ ಟಿಕೆಟ್‌ ನೀಡಲಾಗಿಲ್ಲ.

* ಸಾಲ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಆರ್‌ಬಿಐ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ಪಟ್ಟಿಯನ್ನು ನೀಡುವಂತೆ ಅಂದಾಜು ಸಮಿತಿಯ ಅಧ್ಯಕ್ಷರಾಗಿದ್ದ ಜೋಷಿ ಸರ್ಕಾರವನ್ನು ಕೇಳಿದ್ದರು. ಹಾಗಾಗಿ, ಜೋಷಿಯನ್ನು ಮೋದಿ ಕ್ಷಮಿಸುವುದು ಸಾಧ್ಯವಿಲ್ಲ

- ಪ್ರಶಾಂತ್‌ ಭೂಷಣ್‌, ವಕೀಲ

*ಅಡ್ವಾಣಿ ಮತ್ತು ಜೋಷಿ ಅವರನ್ನು ಮೋದಿ ಅವರು ಅವಮಾನಿಸುತ್ತಿರುವ ರೀತಿ ಹಿಂದೂ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾದುದು.

- ಅರವಿಂದ ಕೇಜ್ರಿವಾಲ್‌, ಎಎಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT