ಅಯ್ಯಪ್ಪನ ಬಿಡಲೊಪ್ಪದ ಬಿಜೆಪಿ

ಶನಿವಾರ, ಏಪ್ರಿಲ್ 20, 2019
29 °C
ನಿರ್ಬಂಧವಿದ್ದರೂ ಶಬರಿಮಲೆ ವಿವಾದ ಪ್ರಚಾರಕ್ಕೆ ಬಳಕೆ

ಅಯ್ಯಪ್ಪನ ಬಿಡಲೊಪ್ಪದ ಬಿಜೆಪಿ

Published:
Updated:
Prajavani

ತಿರುವನಂತಪುರ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದ ವಿಚಾರವನ್ನು ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಸ್ತಾಪಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 

ಶಬರಿಮಲೆ ದೇವಾಲಯದಲ್ಲಿನ ಧರ್ಮ ಮತ್ತು ನಂಬಿಕೆಗೆ ಸಾಂವಿಧಾನಿಕ ರಕ್ಷಣೆ ಒದಗಿಸಲಾಗುವುದು ಎಂದು ಬಿಜೆಪಿಯ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದೆ. ಹಾಗಾಗಿ ಈ ವಿಚಾರವನ್ನು ಕೇರಳದ ಬಿಜೆಪಿ ಮುಖಂಡರು ಪ್ರಸ್ತಾಪಿಸುವುದನ್ನು ತಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಕೋಮು ಭಾವನೆ ಕೆರಳಿಸಿ ಮತ ಗಳಿಸುವುದಕ್ಕಾಗಿ ಶಬರಿಮಲೆ ವಿಚಾರವನ್ನು ಚುನಾವಣೆ ಪ್ರಚಾರದಲ್ಲಿ ಬಳಸುವಂತಿಲ್ಲ ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿ ಟೀಕಾ ರಾಮ್‌ ಮೀನಾ ಅವರು ಪ್ರಚಾರದ ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಮತ ಯಾಚನೆ ನಡೆಸಿದ ತ್ರಿಶ್ಶೂರ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ನಟ ಸುರೇಶ್‌ ಗೋಪಿ ಅವರಿಗೆ ಚುನಾವ
ಣಾಧಿಕಾರಿ ನೋಟಿಸ್‌ ಕೂಡ ನೀಡಿದ್ದರು. 

ಶಬರಿಮಲೆ ವಿಚಾರದಲ್ಲಿ ಬಿಜೆಪಿ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಯು ಪೂರ್ವಗ್ರಹ ಹೊಂದಿದ್ದಾರೆ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಆರೋಪಿಸಿದ್ದಾರೆ. ‘ಶಬರಿಮಲೆ ವಿಚಾರದಲ್ಲಿ ನಿಲುವು ಏನು ಎಂಬುದನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಈ ವಿಚಾರದಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಯಾವುದೇ ತಕರಾರು ಇಲ್ಲ. ಹಾಗಿರುವಾಗ, ಕೇರಳದಲ್ಲಿ ಶಬರಿಮಲೆ ವಿಚಾರವನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳುವುದು ಹೇಗೆ? ಅಯೋಧ್ಯೆಯ ರಾಮ ಮಂದಿರ ವಿಚಾರವನ್ನು ಕಳೆದ ಹಲವು ವರ್ಷಗಳಿಂದ ಚುನಾವಣೆಯಲ್ಲಿ ಪ್ರಸ್ತಾಪ ಮಾಡಲಾಗುತ್ತಿಲ್ಲವೇ’ ಎಂದು ಪಿಳ್ಳೆ ಅವರು ಪ್ರಶ್ನಿಸಿದ್ದಾರೆ. 

ಶಬರಿಮಲೆ ವಿಚಾರದಲ್ಲಿ ಬಿಜೆಪಿ ನಿಲುವು ಏನು ಎಂಬುದನ್ನು ಜನರಿಗೆ ತಿಳಿಸಲು ಬಿಜೆಪಿ ಪ್ರಣಾಳಿಕೆಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಲಾಗುವುದು. ಕೇರಳಕ್ಕೆ ಪ್ರಚಾರಕ್ಕೆ ಬರುವ ಬಿಜೆಪಿಯ ಕೇಂದ್ರೀಯ ನಾಯಕರು ಕೂಡ ಪ್ರಣಾಳಿಕೆಯನ್ನು ಮುಂದಿಟ್ಟು ಶಬರಿಮಲೆ ವಿಚಾರದಲ್ಲಿ ಪಕ್ಷದ ನಿಲುವನ್ನು ವಿವರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.  

ಶಬರಿಮಲೆ ವಿಚಾರದಲ್ಲಿ ನಿಲುವು ಏನು ಎಂಬುದನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿದ ಏಕೈಕ ಪಕ್ಷ ಬಿಜೆಪಿ ಎಂದು ಪಿಳ್ಳೆ ಅವರು ಪ್ರತಿಪಾದಿಸಿದ್ದಾರೆ. 

*
ವಯನಾಡ್‌ನಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಶಬರಿಮಲೆ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುತ್ತಾರೆಯೇ?
-ಶ್ರೀಧರನ್‌ ಪಿಳ್ಳೆ, ಬಿಜೆಪಿ ಕೇರಳ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !