ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಬಿಡಿ, ಮತ ಕೊಡಿ: ಘೋಷಣೆಯಲ್ಲೂ ವೈವಿಧ್ಯ

ಮತದಾರನ ಮನಮುಟ್ಟುವ ಘೋಷವಾಕ್ಯ
Last Updated 25 ಮಾರ್ಚ್ 2019, 19:28 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೊರಡಿಸುವ ಘೋಷಣೆಗಳು ಆಕರ್ಷಕವಾಗಿರುತ್ತವೆ. ಕೆಲವೊಂದು ಘೋಷಣೆಗಳು ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿಯೂ ಇರುತ್ತವೆ. ಬೀಡಿ ಕೂಡ 1967ರ ಲೋಕಸಭಾ ಚುನಾವಣೆಯಲ್ಲಿ ಜನಸಂಘದ ಘೋಷಣೆಯಲ್ಲಿ ಸೇರಿಕೊಂಡಿತ್ತು.

ಜನಸಂಘದ ಘೋಷಣೆ ಹೀಗಿತ್ತು: ‘ಜನ್ ಸಂಘ್‌ ಕೊ ವೋಟ್‌ ದೋ, ಬೀಡಿ ಪೀನಾ ಛೋಡ್‌ ದೋ. ಬೀಡಿ ಮೇ ತಂಬಾಕು ಹೆ ಕಾಂಗ್ರೆಸ್‌ವಾಲಾ ಡಾಕು ಹೆ’ (ಜನಸಂಘಕ್ಕೆ ಮತ ಕೊಡಿ, ಬೀಡಿ ಸೇದುವುದು ಬಿಡಿ. ಬೀಡಿಯಲ್ಲಿ ತಂಬಾಕು ಇದೆ, ಕಾಂಗ್ರೆಸ್ಸಿಗರು ಡಕಾಯಿತರು). ಈ ಘೋಷಣೆ ಜನಸಂಘಕ್ಕೆ ಆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ತಂದುಕೊಡಲಿಲ್ಲ. ಆದರೆ, ಜನರಿಗೆ ಮುದ ನೀಡಿದ್ದಂತೂ ಹೌದು.

ಈ ಬಾರಿಯ ಚುನಾವಣೆಗೆ ಬಿಜೆಪಿ ಈಗಾಗಲೇ ಘೋಷಣೆ ಸಿದ್ಧಪಡಿಸಿದೆ. ‘ಅಸಾಧ್ಯವಾದುದೆಲ್ಲ ಈಗ ಸಾಧ್ಯವಾಗಿದೆ’ ಮತ್ತು ‘ನಾನೂ ಚೌಕೀದಾರ’ ಎಂಬುದು ಬಿಜೆಪಿಯ ಘೋಷಣೆಗಳು. ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್‌, ಘೋಷಣೆಯನ್ನು ಇನ್ನೂ ಸಿದ್ಧಪಡಿಸಿಲ್ಲ.

‘ಈ ಬಾರಿ ಮೋದಿ ಸರ್ಕಾರ’ ಎಂಬುದುಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಘೋಷಣೆಯಾಗಿತ್ತು. ‘ನಾನಲ್ಲ, ನಾವು’ ಮತ್ತು ‘ಪ್ರತಿ ಕೈಗೂ ಅಧಿಕಾರ, ಸರ್ವರ ಪ್ರಗತಿ’ ಎಂದು ಕಾಂಗ್ರೆಸ್‌ ಹೇಳಿತ್ತು.

1951ರಲ್ಲಿ ‘ಸ್ವಾವಲಂಬನೆ’ ಎಂಬುದು ಘೋಷಣೆಯಾಗಿತ್ತು. ಆಗಷ್ಟೇ ಹುಟ್ಟಿದ್ದ ಪ್ರಜಾಪ್ರಭುತ್ವದ ಆಕಾಂಕ್ಷೆಯನ್ನು ಈ ಘೋಷಣೆ ಬಿಂಬಿಸುತ್ತಿತ್ತು. ವರ್ಷಗಳು ಕಳೆದಂತೆ ಘೋಷಣೆಗಳು ಹೆಚ್ಚು ಹೆಚ್ಚು ಸೃಜನಶೀಲವಾಗುತ್ತಾ ಹೋದವು.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ರೂಪಿಸಿದ ‘ಜೈ ಜವಾನ್‌, ಜೈ ಕಿಸಾನ್‌’ ಘೋಷಣೆ ಈಗಲೂ ಕೇಳಿಬರುತ್ತಿರುತ್ತದೆ. ಇಂದಿರಾ ಗಾಂಧಿ ಅವರ ಪ್ರತಿಸ್ಪ‍ರ್ಧಿಗಳು ‘ಇಂದಿರಾ ಹಠಾವೊ’ (ಇಂದಿರಾ ಅವರನ್ನು ಓಡಿಸಿ) ಎಂಬ ಘೋಷಣೆ ಹೊರಡಿಸಿದರು. ಇಂದಿರಾ ಅವರು ಅದಕ್ಕೆ ತಟ್ಟನೆ ತಿರುಗೇಟು ಕೊಟ್ಟರು. ‘ಇಂದಿರಾರನ್ನು ಓಡಿಸಿ ಎಂದು ಅವರು ಹೇಳುತ್ತಿದ್ದಾರೆ, ಬಡತನವನ್ನು ಓಡಿಸಿ ಎಂದು ನಾನು ಹೇಳುತ್ತೇನೆ’ ಎಂಬುದು ಇಂದಿರಾ ಅವರ ಘೋಷಣೆಯಾಗಿತ್ತು. ಅಂದು ಅವರು ಹೊರಡಿಸಿದ ‘ಗರೀಬಿ ಹಠಾವೊ’ ಘೋಷಣೆ ಇಂದೂ ಪ್ರತಿಧ್ವನಿಸುತ್ತಿರುತ್ತದೆ.

1970ರ ದಶಕ ಮತ್ತು 1980ರ ದಶಕದ ಮಧ್ಯ ಭಾಗದವರೆಗೆ ರಾಜಕೀಯದಲ್ಲಿ ಹೇಗೆಯೋ ಘೋಷಣೆಗಳ ವಿಚಾರದಲ್ಲಿಯೂ ಇಂದಿರಾ ಅವರ ಪ್ರಾಬಲ್ಯವೇ ಇತ್ತು. ಇಂದಿರಾ ನಿಷ್ಠ ದೇವಕಾಂತ್‌ ಬರೂವಾ ಅವರು ‘ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ’ ಎಂಬ ಘೋಷಣೆ ರೂಪಿಸಿದರು. ತುರ್ತುಪರಿಸ್ಥಿತಿ ನಂತರ 1977ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ‘ಇಂದಿರಾ ಓಡಿಸಿ, ದೇಶ ಉಳಿಸಿ’ ಎಂಬ ಘೋಷಣೆ ಮತ್ತೆ ಕೇಳಿ ಬಂತು.

1977ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್‌ ಪಕ್ಷ 1978ರಲ್ಲಿ ಚಿಕ್ಕಮಗಳೂರು ಉಪಚುನಾವಣೆ ನಡೆಯುವ ಹೊತ್ತಿಗೆ ಸಾಕಷ್ಟು ಚೇತರಿಸಿಕೊಂಡಿತ್ತು. ‘ಸಿಂಹಿಣಿ ಒಂದೇ, ನೂರು ಲಂಗೂರ್‌’ ಎಂಬ ಘೋಷಣೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಕೇಳಿ ಬಂತು.

1984ರಲ್ಲಿ ಇಂದಿರಾ ಹತ್ಯೆಯ ಬಳಿಕ ಹೆಚ್ಚು ಭಾವನಾತ್ಮಕವಾದ ಘೋಷಣೆಯನ್ನು ಕಾಂಗ್ರೆಸ್‌ ರೂಪಿಸಿತ್ತು. ‘ಸೂರ್ಯ ಚಂದ್ರರಿರುವ ತನಕ ಇಂದಿರಾ ಅಮರ’ ಎಂಬುದು ಆಗಿನ ಘೋಷಣೆಯಾಗಿತ್ತು.

1996ರ ಲೋಕಸಭಾ ಚುನಾವಣೆಯಲ್ಲಿ ಪಿ.ವಿ. ನರಸಿಂಹರಾವ್‌ ಅವರು ಪುನರಾಯ್ಕೆ ಬಯಸಿದ್ದರು. ‘ಜಾತಿ ಜನಾಂಗದ ಹೆಸರಲ್ಲಿ ಮತ ಬೇಡ, ಹಸ್ತಕ್ಕಿರಲಿ ಮತ’ ಎಂಬುದು ಅವರ ಘೋಷ ವಾಕ್ಯವಾಗಿತ್ತು. ಆಗ ಬಿಜೆಪಿ ಹೆಚ್ಚು ಆಕರ್ಷಕವಾದ ಘೋಷಣೆಯನ್ನು ಸಿದ್ಧಪಡಿಸಿತ್ತು. ‘ಎಲ್ಲರಿಗೂ ಇರಲಿ ಅವಕಾಶ, ಈ ಬಾರಿ ಅಟಲ್‌ ಬಿಹಾರಿ’ ಎಂದು ಬಿಜೆಪಿ ಹೇಳಿತು.

2004ರಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷ ವಾಕ್ಯ ಬಿಜೆಪಿ ಗೆಲ್ಲಲು ಸಹಕರಿಸಲಿಲ್ಲ. ‘ಸಾಮಾನ್ಯನ ಜತೆಗೆ ಕಾಂಗ್ರೆಸ್‌ನ ಹಸ್ತ’ ಎಂದ ಕಾಂಗ್ರೆಸ್‌ಗೆ ಆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಸಿಕ್ಕವು.

ಆನೆ ಓಡಿದರೆ...

ಪ್ರಾದೇಶಿಕ ಪಕ್ಷಗಳು ಕೂಡ ಘೋಷಣೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಉತ್ತರ ಪ್ರದೇಶದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ 1993ರಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ‘ಒಂದಾಗಿದ್ದಾರೆ ಮುಲಾಯಂ–ಕಾನ್ಶೀರಾಂ, ಹಾರಿ ಹೋಗಿದೆ ಜೈ ಶ್ರೀರಾಂ’ ಎಂಬುದು ಈ ಮೈತ್ರಿಕೂಟದ ಘೋಷಣೆಯಾಗಿತ್ತು.

ಮತ್ತೊಂದು ಬಾರಿ, ‘ಆನೆ ಓಡಿದರೆ ಕೈಯೂ ಉಳಿಯದು, ಕಮಲವೂ ಉಳಿಯದು’ ಎಂಬುದನ್ನುಬಿಎಸ್‌‍ಪಿ ಪ್ರಚಾರದ ವಾಕ್ಯವನ್ನಾಗಿಸಿತ್ತು. ‘ಐದು ವರ್ಷ ಕೇಜ್ರಿವಾಲ್‌’ ಎಂಬುದು ಎಎಪಿಯ ಘೋಷಣೆಯಾಗಿತ್ತು. ‘ತಾಯಿ, ತಾಯ್ನೆಲ ಮತ್ತು ಜನ’ ಎಂಬುದು ತೃಣಮೂಲ ಕಾಂಗ್ರೆಸ್‌ನ ಘೋಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT