ಮಂಗಳವಾರ, ನವೆಂಬರ್ 19, 2019
28 °C

ಗಿನ್ನಿಸ್ ರೆಕಾರ್ಡ್ | ಉದ್ದ ಕೂದಲು, ಕುಳ್ಳ ಮಹಿಳೆ, ದೇಶ ಸುತ್ತಿದ ದಂಪತಿ...!

Published:
Updated:

ನವದೆಹಲಿ: ಜಗತ್ತಿನಲ್ಲಿ ಅತಿ ಉದ್ದದ ತಲೆಗೂದಲು ಹೊಂದಿರುವ ಹದಿಹರೆಯದ ತರುಣಿ ಎಂಬ ಶ್ರೇಯವನ್ನು ಗುಜರಾತ್‌ನ 16ರ ಹರೆಯದ ತರುಣಿ ನೀಲಾಂಶಿ ಪಟೇಲ್‌ ಈ ವರ್ಷವೂ ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಗಿನ್ನಿಸ್ ವಿಶ್ವದಾಖಲೆಯಲ್ಲಿ ನಮೂದಾಗಿದ್ದ ನೀಲಾಂಶಿಯ ಸಾಧನೆಯನ್ನು ಈ ವರ್ಷವೂ ಯಾರೂ ಮುರಿದಿಲ್ಲ.

ನೀಲಾಂಶಿ ಸಾಧನೆ ಈಗ ನೆನಪಾಗಲು ಕಾರಣವಿದೆ. ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ಸ್‌ 2020 ಪುಸ್ತಕ ಇದೀಗ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ನಮೂದಾಗಿರುವ ಭಾರತೀಯರ ಕೆಲ ಸಾಧನೆಗಳು ಎಲ್ಲರ ಗಮನ ಸೆಳೆದಿವೆ.

ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ಸಾರಿಗೆ ಬಳಸಿ ಅತಿ ದೂರ ಸಂಚರಿಸಿದವರು, ಜಗತ್ತಿನ ಅತಿಕುಳ್ಳ ಮಹಿಳೆ, ಪೇಪರ್‌ ಕಪ್‌ಗಳ ಅತಿದೊಡ್ಡ ಸಂಗ್ರಹ, ಜಗತ್ತಿನ ಅತಿ ಮಲಿನ ನಗರದ ನಮೂದುಗಳನ್ನು ಜನರು ಆಸಕ್ತಿಯಿಂದ ಗಮನಿಸುತ್ತಿದ್ದಾರೆ.

ಈ ಪುಸ್ತಕ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಹಲವು ಆನ್‌ಲೈನ್ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯ.


ನೀಲಾಂಶಿ ಪಟೇಲ್

ಖುಷಿಖುಷಿ ಹುಡುಗಿ ನೀಲಾಂಶಿ

ಗುಜರಾತ್‌ನ ಅರಾವಳಿ ಜಿಲ್ಲೆ ಮೊಡಾಸಾ ಪಟ್ಟಣದ ಈ ಹುಡುಗಿಯ ತಲೆಗೂದಲ ಉದ್ದ 5 ಅಡಿ 7 ಇಂಚು. ತನ್ನ 6ನೇ ವಯಸ್ಸಿಗೆ ಕೂದಲಿಗೆ ಕತ್ತರಿಯಾಡಿಸುವುದು ನಿಲ್ಲಿಸಿದ ಈ ಹುಡುಗಿಯ ಹೆಸರು ಇದೀಗ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕದಲ್ಲಿ ನಮೂದಾಗಿದೆ.

‘ನನಗೆ ಆರು ವರ್ಷವಿದ್ದಾಗ ಒಮ್ಮೆ ಹೇರ್‌ ಕಟ್ ಮಾಡಿಸಿಕೊಂಡಿದ್ದೆ. ಅದೆಷ್ಟು ಕೆಟ್ಟದಾಗಿತ್ತು ಅಂದ್ರೆ, ಇನ್ನೆಂದೂ ಹೇರ್‌ ಕಟ್ ಮಾಡಿಸಲೇಬಾರದು ಅಂತ ಅಂದೇ ಡಿಸೈಡ್ ಮಾಡಿಬಿಟ್ಟೆ. ಅಂದಿನಿಂದ ಇಲ್ಲಿಯವರೆಗೆ ತಲೆಗೂದಲು ಕತ್ತರಿಸಲಿಲ್ಲ’ ಎಂದು ನೀಲಾಂಶಿ ತನ್ನನ್ನು ಭೇಟಿಯಾದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಳು.

‘ವಾರಕ್ಕೊಮ್ಮೆ ತಲೆಗೆ ಸ್ನಾನ ಮಾಡುತ್ತೇನೆ. ತಲೆ ಬಾಚಲು, ಜಡೆ ಹೆಣೆಯಲು ಅಮ್ಮ ಸಹಾಯ ಮಾಡುತ್ತಾರೆ. ಇಷ್ಟುದ್ದದ ಕೂದಲು ಇರುವ ಕಾರಣ ನನಗೆ ತೊಂದರೆ ಆಗುತ್ತಿದೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ನಿಜ ಹೇಳಬೇಕು ಅಂದ್ರೆ ಅಂಥದ್ದೇನೂ ಇಲ್ಲ. ಈ ಕುದಲು ನನಗೆ ಅದೃಷ್ಟ. ನಾನು ಆಟ ಆಡ್ತೀನಿ, ಓಡ್ತೀನಿ ನನ್ನ ವಯಸ್ಸಿನ ಉಳಿದೆಲ್ಲಾ ಹುಡುಗಿಯರಂತೆ ಖುಷಿಯಾಗಿದ್ದೀನಿ. ಮನೆಯಲ್ಲಿದ್ದಾಗ ಜಡೆ ಹಾಕಿಕೊಳ್ತೀನಿ. ಟೇಬಲ್ ಟೆನಿಸ್ ಅಥವಾ ಬೇರೆ ಆಟಗಳನ್ನು ಆಡುವಾಗ ಅಥವಾ ತಲೆಯ ಮೇಲೆ ತುರುಬು (ಬನ್) ಕಟ್ಟಿಕೊಳ್ತೀನಿ’ ಎನ್ನುತ್ತಾಳೆ ನೀಲಾಂಶಿ.

ಪುಟ್ಟ ಮಹಿಳೆ ಜ್ಯೋತಿ

ಜಗತ್ತಿನ ಅತಿ ಕುಳ್ಳ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದವರು ನಾಗಪುರದ ಜ್ಯೋತಿ ಕಿಸನ್‌ಜಿ ಅಮ್ಗೆ. ಇದೀಗ 26ರ ಹರೆಯಲ್ಲಿರುವ ಜ್ಯೋತಿ ಅವರ ಉದ್ದ 62.8 ಸೆಂ.ಮೀ. (2 ಅಡಿ). ಕುಳ್ಳಗಿರುವುದು ಜ್ಯೋತಿ ಅವರ ಜೀವನೋತ್ಸಾಹವನ್ನೇನೂ ಕುಗ್ಗಿಸಿಲ್ಲ. ತನ್ನ ವಯಸ್ಸಿನ ಇತರೆಲ್ಲಾ ಮಹಿಳೆಯರಂತೆ ಜ್ಯೋತಿ ಸಹ ತಾನು ಹಾಕುವ ಬಟ್ಟೆ, ಬಳೆ, ಬಿಂದಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಹಲವು ಟೀವಿ ಷೋಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿಗೆ ಸೆಲಬ್ರಿಟಿಗಳಿಗೆ ಇರುವಷ್ಟು ಜನಪ್ರಿಯತೆ ಇದೆ.

ಇಷ್ಟೇ ಅಲ್ಲ ಇನ್ನಷ್ಟು...

ಪೆಂಗ್ವಿನ್ ರ್‍ಯಾಂಡಮ್ ಹೌಸ್ ಪ್ರಕಾಶಕನ ಸಂಸ್ಥೆ ಹೊರತಂದಿರುವ ಈ ಪುಸ್ತಕದಲ್ಲಿ ಸಾವಿರಾರು ಹೊಸ ದಾಖಲೆಗಳು ಸ್ಥಾನ ಪಡೆದಿವೆ. ಅಚ್ಚರಿ ಹುಟ್ಟಿಸುವ ಪ್ರಾಣಿಗಳು, ಹುಬ್ಬೇರಿಸುವಂತೆ ಮಾಡುವ ಭೂಗೋಳದ ಅಂಶಗಳು, ಚಿತ್ರವಿಚಿತ್ರ ಸಾಧನೆಗಳು ಎಲ್ಲ ವಯೋಮಾನದವರ ಗಮನ ಸೆಳೆಯುವಂತಿವೆ.

ಪುಣೆಯ ಶ್ರೀಧರ್ ಚಿಲ್ಲನ್ ಒಂದೇ ಕೈಯಲ್ಲಿ ಅತಿ ಉದ್ದದ ಉಗುರು ಹೊಂದಿರುವ ಶ್ರೇಯಕ್ಕೆ ಪಾತ್ರರಾಗಿದ್ದವರು. ಅವರ ಎಡಗೈಲಿದ್ದ ಉಗುರುಗಳ ಒಟ್ಟು ಉದ್ದ (ಐದೂ ಬೆರಳು ಸೇರಿ) 29 ಅಡಿ 10 ಇಂಚು. ಇದೀಗ 83ರ ಹರೆಯದಲ್ಲಿರುವ ಅವರು ಸತತ 66 ವರ್ಷ ಉಗುರು ಬೆಳೆಸಿದ್ದರು. ಆದರೆ ಉಗುರುಗಳ ತೂಕದ ಕಾರಣ ಎಡಗೈ ಅಲುಗಿಸಲೂ ಆಗುತ್ತಿರಲಿಲ್ಲ. ಕೊನೆಗೆ ಬೇರೆ ಮಾರ್ಗ ಕಾಣದೆ ಉಗುರು ಕತ್ತರಿಸಿಕೊಂಡಿದ್ದರು. ಆದರೆ ಇಂದಿಗೂ ಜಗತ್ತಿನ ಅತಿ ಉದ್ದದ ಉಗುರು ಬೆಳೆಸಿದ ದಾಖಲೆ ಅವರ ಹೆಸರಿನಲ್ಲಿಯೇ ಇದೆ.

ಬಸ್‌ ಏರಿ ದೇಶ ಸುತ್ತಿದರು

ಇನ್ನು ಸಾರ್ವಜನಿಕ ಸಾರಿಗೆ ಬಳಸಿ ಇಡೀ ದೇಶ ಸುತ್ತಿದೆ ಜೊತ್ಸ್ನಾ ಮಿಶ್ರಾ ಮತ್ತು ದುರ್ಗಾ ಚರಣ್ ಅವರದು ವಿಶಿಷ್ಟ ಸಾಧನೆ. ಇವರು ಕೇವಲ 40 ದಿನಗಳಲ್ಲಿ (2018ರ ಫೆ.18ರಿಂದ ಮಾರ್ಚ್‌ 30) ಒಡಿಶಾದಿಂದ ಗುಜರಾತ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಬರೋಬ್ಬರಿ 29,119 ಕಿ.ಮೀ. ಸಂಚರಿಸಿದ್ದಾರೆ. ಪ್ರಯಾಣಕ್ಕೆ ಕೇವಲ ಸಾರ್ವಜನಿಕ ಸಾರಿಗೆ ಅಂದರೆ ಬಸ್ ಮತ್ತು ರೈಲು ಮಾತ್ರ ಬಳಸಿದ್ದರು. ಇವರ ಹೆಸರೂ ಗಿನ್ನೆಸ್ ಪುಸ್ತಕದಲ್ಲಿದೆ.

ಪೇಪರ್‌ ಕಪ್‌ಗಳ ವಿಸ್ತೃತ ಸಂಗ್ರಹಕ್ಕಾಗಿ ತಮಿಳುನಾಡಿನ ವಿ.ಶಂಕರನಾರಾಯಣ್ ಅವರ ಹೆಸರು ಗಿನ್ನಿಸ್ ದಾಖಲೆಗಳ ಪಟ್ಟಿಗೆ ಸೇರಿದೆ. ಅವರು 736 ಕಪ್‌ಗಳನ್ನು ಸಂಗ್ರಹಿಸಿದ್ದಾರೆ. 2.06 ಸೆಕೆಂಡ್‌ಗಳಲ್ಲಿ 10 ಕಂಬಿಗಳ ಕೆಳಗೆ ನುಸುಳಿದ ನವೀನ್‌ಕುಮಾರ್‌ ಅತಿ ವೇಗದ ಸ್ಕೇಟ್‌ ದಾಖಲೆ ಬರೆದಿದ್ದಾರೆ.

ಅತಿಮಲಿನ ನಗರ ಕಾನ್ಪುರ

ಇದು ಒಂದು ದಾಖಲೆ, ಆದರೆ ಖಂಡಿತ ಹೆಮ್ಮೆ ಪಡುವ ಸಂಗತಿಯಲ್ಲ. ಉತ್ತರ ಪ್ರದೇಶದ ಕಾನ್ಪುರ ವಿಶ್ವದ ಅತಿ ಮಲಿನ ನಗರ ಎಂದು ಗಿನ್ನೆಸ್ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ. 2016ರಲ್ಲಿ ಅಲ್ಲಿನ ಗಾಳಿಯಲ್ಲಿ ಸರಾಸರಿ PM 2.5 ಮಟ್ಟವು ಪ್ರತಿ m3ಗೆ 173 ಮೈಕ್ರೊಗ್ರಾಂ ಇತ್ತು. ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಮಾನದಂಡಗಳಿಗಿಂತ 17 ಪಟ್ಟು ಹೆಚ್ಚು.

ಪ್ರತಿಕ್ರಿಯಿಸಿ (+)