ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವರದಾರ್‌ ಇಂದು ಮರಳಿ ಕಲ್ಯಾಣಿಗೆ

Last Updated 16 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಚೆನ್ನೈ: ಕಳೆದ 47 ದಿನಗಳಿಂದ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದ್ದ ಅತಿವರದಾರ್‌ ದೇವರ ಮೂರ್ತಿಯು ಶನಿವಾರ ಸಂಜೆ ವರದರಾಜ ಪೆರುಮಾಳ್‌ ದೇವಸ್ಥಾನದ ‘ಅನಂತಸರಸ’ ಕೆರೆಯ ಆಳದ ತನ್ನ ಮೂಲ ಸ್ಥಾನಕ್ಕೆ ಮರಳಲಿದೆ. 47 ದಿನಗಳಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.

ಅಂಜೂರದ ಮರದಿಂದ ತಯಾರಿಸಲಾದ ಈ ಪುರಾತನ ಮೂರ್ತಿಯನ್ನು 40 ವರ್ಷಗಳಲ್ಲಿ ಒಂದು ಬಾರಿ ಕಲ್ಯಾಣಿಯಿಂದ ಹೊರತೆಗೆಯಲಾಗುತ್ತದೆ. ಈ ಬಾರಿ ಜುಲೈ 1ರಂದು ಹೊರತೆಗೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಶನಿವಾರ ಮುಂಜಾನೆಯಿಂದ ಸಂಜೆಯವರೆಗೂ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಈ ಮೂರ್ತಿಯನ್ನು ಕಲ್ಯಾಣಿಗೆ ಇಳಿಸಲಾಗುವುದು. ಮುಂದೆ 2059ರಲ್ಲಿ ಪುನಃ ಮೂರ್ತಿಯನ್ನು ಹೊರತೆಗೆಯಲಾಗುವುದು.

ವರದರಾಜ ಪೆರುಮಾಳ್‌ ದೇವಸ್ಥಾನದ ಆರಾಧ್ಯ ಮೂರ್ತಿಯನ್ನೇ ಹೋಲುವ ಅತಿವರದಾರ್‌ ಮೂರ್ತಿಯು ಹಿಂದೆ ಈ ದೇವಸ್ಥಾನದಲ್ಲಿ ಪೂಜೆಗೊಳ್ಳುತ್ತಿದ್ದ ಮೂರ್ತಿಯಾಗಿತ್ತು. ಆಕ್ರಮಣಕಾರರಿಂದ ರಕ್ಷಿಸುವ ಸಲುವಾಗಿ 16ನೇ ಶತಮಾನದಲ್ಲಿ ಅದನ್ನು ಕಲ್ಯಾಣಿಗೊಳಗೆ ಬಚ್ಚಿಡಲಾಗಿತ್ತು ಎಂಬ ಐತಿಹ್ಯವಿದೆ.

ಹಿಂದೆ 1979ರ ಜುಲೈ 2ರಂದು ಮೂರ್ತಿಯನ್ನು ಹೊರತೆಗೆದು ಆಗಸ್ಟ್‌ 17ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅದಕ್ಕೂ ಮುನ್ನ 1939ರಲ್ಲಿ ಹೊರತೆಗೆಯಲಾಗಿತ್ತು.

ಕಾಂಚಿಪುರಂನಲ್ಲಿ ನಡೆಯುವ ಅಪರೂಪದ ಧಾರ್ಮಿಕ ಕಾರ್ಯಕ್ರಮ ಇದಾಗಿರುವುದರಿಂದ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಮೂರ್ತಿಯ ದರ್ಶನಕ್ಕಾಗಿ ಬರುತ್ತಾರೆ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಒಂದು ಬಾರಿ, ಹೆಚ್ಚೆಂದರೆ ಎರಡು ಬಾರಿ ಮಾತ್ರ ಮೂರ್ತಿಯನ್ನು ನೋಡುವ ಅವಕಾಶ ಲಭಿಸುತ್ತದೆ.

ಈ ಬಾರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ನಟ ರಜನಿಕಾಂತ್‌ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT