ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಶಾಲೆಯ ಮೇಲೆ ಡಿ.ಸಿ. ನಿಗಾ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಯತ್ನ; ಶಿಕ್ಷಕರಿಗೆ ಗೌರವ ಧನ
Last Updated 7 ಮಾರ್ಚ್ 2018, 7:24 IST
ಅಕ್ಷರ ಗಾತ್ರ

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಹಲವು ಪ್ರಯತ್ನಗಳನ್ನು ನಡೆಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಮತ್ತು ಅನುದಾನತಿ ಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ನಡೆಸುತ್ತಿದೆ. ತರಗತಿಗಳು ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ವೈಯಕ್ತಿಕವಾಗಿ ಕಣ್ಗಾವಲು ಇಟ್ಟಿದ್ದಾರೆ.

ರಾತ್ರಿ ವೇಳೆ ತರಗತಿಗಳು ನಡೆಯುವ ಶಾಲೆಗಳ ಮುಖ್ಯಶಿಕ್ಷಕರು, ಪಾಠ ಮಾಡುವ ಶಿಕ್ಷಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೆಲ್ಲರಿಗೂ ಜಿಲ್ಲಾಧಿಕಾರಿಗಳ ವೈಯಕ್ತಿಕ ಮೊಬೈಲ್‌ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಪ್ರತಿ ದಿನವೂ ತರಗತಿ ನಡೆಸಿದ ಕುರಿತು ಖಾತರಿಗಾಗಿ ಶಿಕ್ಷಕರು ಫೋಟೋವೊಂದನ್ನು ತೆಗೆದು ಜಿಲ್ಲಾಧಿಕಾರಿಗೆ ವಾಟ್ಸ್‌ ಆ್ಯಪ್‌ ಮೂಲಕ ಕಳಿಸುವುದು ಕಡ್ಡಾಯ ಮಾಡಲಾಗಿದೆ.

ಎರಡ ತಿಂಗಳು: ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಮತ್ತು ಹಿಂದಿನ ವರ್ಷ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಮಾಸಿಕ ₹ 3 ಸಾವಿರ ಗೌರವ ಧನವನ್ನೂ ನಿಗದಿ ಮಾಡಲಾಗಿದೆ. ಎರಡು ತಿಂಗಳಿಗೆ ಒಟ್ಟು ₹ 6 ಸಾವಿರ ಗೌರವ ಧನ ಸಂದಾಯವಾಗಲಿದೆ.

‘ಶಾಲೆಯ ಅವಧಿ ಸಂಜೆ ಮುಗಿದು, ವಿರಾಮದ ಬಳಿಕ ರಾತ್ರಿ 8ರವರೆಗೂ ವಿಶೇಷ ತರಗತಿಗಳು ನಡೆಯುತ್ತವೆ. ಎಸ್‌ಎಸ್‌ಎಲ್‌ಸಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳ ಪೈಕಿ ಕಲಿಕೆಯಲ್ಲಿ ಮುಂದಿರುವ ಮತ್ತು ಹಿಂದಿರುವ ಗುಂಪುಗಳನ್ನು ರಚಿಸಿ ಪಾಠ ಮಾಡಲಾಗುತ್ತಿದೆ. ದಿನವೂ ಮೂರರಿಂದ ನಾಲ್ಕು ತರಗತಿಗಳು ನಡೆಯತ್ತಿವೆ. ಮೂವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಪ್ರಗತಿ ಕಂಡುಬಂದಿದೆ’ ಎಂದು ನಗರದ ಬಾಪೂಜಿ ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಎಸ್‌.ಮನೋಹರ್ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಬಾಲಕಿಯರಿಗೂ ಅವಕಾಶ: ‘ಕೆಲವು ಶಾಲೆಗಳಲ್ಲಿ ಬಾಲಕರಿಗಷ್ಟೇ ರಾತ್ರಿ ಶಾಲೆಗೆ ಬರಲು ಸೂಚಿಸಲಾಗಿದೆ. ಆದರೆ ಪೋಷಕರು ಒಪ್ಪಿರುವುರಿಂದ, ನಮ್ಮ ಶಿಕ್ಷಕರೂ ವಿಶೇಷ ಕಾಳಜಿ ವಹಿಸುತ್ತಿರುವುದರಿಂದ ಬಾಲಕಿಯರೂ ತರಗತಿಗಳಿಗೆ ಹಾಜರಾಗುತ್ತಿದ್ದಾರೆ’ ಎಂದರು.

‘ನಮ್ಮ ಶಾಲೆಗೆ ಗೋಟೂರು, ಮಸೀದಿಪುರ, ಕಲ್ಲುಕುಟಿಗಿನಹಾಳ್‌, ವಣೇನೂರು, ಬೆಣಕಲ್‌ ಗ್ರಾಮದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇವೆಲ್ಲವೂ ಶಾಲೆಯಿಂದ ದೂರ ಇವೆ. ಹೀಗಾಗಿ ಶಾಲೆಗೆ ಹತ್ತಿರವಿರುವ ಗೋಟೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಪ್ಪತ್ತೆರಡು ವಿದ್ಯಾರ್ಥಿಗಳು ಅಲ್ಲಿಗೆ ಹಾಜರಾಗುತ್ತಿದ್ದಾರೆ’ ಎಂದು ತಾಲ್ಲೂಕಿನ ಬಾಣಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮದ್ದಾನಪ್ಪ ಅಭಿಪ್ರಾಯಪಟ್ಟರು.
***
ಶೇ 80ರಷ್ಟು ಫಲಿತಾಂಶ ಪಡೆಯುವ ರಾತ್ರಿ ಶಾಲೆಗಳಲ್ಲಿ ಪಾಠ ಮಾಡಿದ ಶಿಕ್ಷಕರಿಗೆ ₹ 3 ಸಾವಿರ ವಿಶೇಷ ಗೌರವಧನವನ್ನೂ ನೀಡಲಾಗುವುದು.
   – ಡಾ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT