ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷಾಧಿಕಾರ ರದ್ದು: ಒಮ್ಮತದ ನಿರ್ಧಾರ

ದೆಹಲಿ ವಿಶ್ವವಿದ್ಯಾಲಯದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿಕೆ
Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಹಲವು ವಿಷಯಗಳ ಕುರಿತು ಆಡಳಿತ ಮತ್ತು ವಿಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರೆಲ್ಲರೂ ಪಕ್ಷಾತೀತವಾಗಿ ಒಪ್ಪಿಗೆ ಸೂಚಿಸಿದ್ದರು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳವಾರ ಹೇಳಿದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅರುಣ್‌ ಜೇಟ್ಲಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು ಅವರು, ‘ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜತೆಗೆ ಈ ಕುರಿತು ಸಂಬಂಧಪಟ್ಟವರು ಚರ್ಚೆ ನಡೆಸಬೇಕು’ ಎಂದರು.

ಪ್ರಜಾಪ್ರಭುತ್ವಕ್ಕೆ ಬಲ: ತನ್ನ ಭಾಷಣದಲ್ಲಿ ಸಂವಿಧಾನವನ್ನು ಹೊಗಳಿಸ ನಾಯ್ಡು, ‘ಸಂವಿಧಾನ ಅಂಗೀಕಾರವಾದ ಪ್ರಾರಂಭಿಕ ದಿನಗಳಲ್ಲಿ ಇದರ ದಕ್ಷತೆ ಬಗ್ಗೆ ಹಲವು ಸಂದೇಹ ವ್ಯಕ್ತಪಡಿಸಿದ್ದರು. ಆದರೆ ಕಳೆದ ಏಳು ದಶಕದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಈ ಸಂವಿಧಾನ ಬಲಪಡಿಸಿದೆ’ ಎಂದರು.

‘ಅಗತ್ಯಕ್ಕೆ ತಕ್ಕಂತೆ ಸಂವಿಧಾನದಲ್ಲಿ ಹಲವು ತಿದ್ದುಪಡಿಗಳನ್ನು ತರಲಾಯಿತು. ಇತ್ತೀಚೆಗೆ 370ನೇ ವಿಧಿಯಲ್ಲಿನ ಕೆಲ ಪರಿಚ್ಛೇದಗಳನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ವಿಸ್ತೃತವಾದ ಚರ್ಚೆಯೂ ಎರಡೂ ಸದನಗಳಲ್ಲಿ ನಡೆಯಿತು’ ಎಂದರು.

ಜೇಟ್ಲಿ ನೆನಪು: ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಜೇಟ್ಲಿ ಅವರ ಕೊಡುಗೆ ಅಪಾರ. ಅತ್ಯುತ್ತಮ ಸಂಸದೀಯ ಪಟುವಾಗಿದ್ದ ಜೇಟ್ಲಿ ಅವರು, ತಮ್ಮ ಭಾಷಣ, ಪ್ರಶ್ನೆಗಳ ಮೂಲಕ ಸಂಸದೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದರು. ಜತೆಗೆ ಸದನದಲ್ಲಿ ಇತರರ ಭಾಷಣ, ಚರ್ಚೆಗಳನ್ನೂ ಸೂಕ್ಷ್ಮವಾಗಿ ಆಲಿಸುತ್ತಿದ್ದರು ಎಂದು ಸ್ಮರಿಸಿದರು.

ವಿಶೇಷ ಪೀಠ ರಚನೆ ಅಗತ್ಯ

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಮೇಲಿರುವ ಕ್ರಿಮಿನಲ್‌ ಪ್ರಕರಣಗಳ ತನಿಖೆಗೆ ವಿಶೇಷ ಪೀಠ ರಚಿಸಬೇಕು ಎಂದು ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕ್ರಿಮಿನಲ್‌ ಪ್ರಕರಣಗಳಿರುವ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂತಹರ ವಿರುದ್ಧ ಇರುವ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತ್ಯೇಕ ಪೀಠ ರಚನೆ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT