ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಂತ್‌ ಸರ್ಕಾರಕ್ಕೆ ಬೆಂಬಲ ನೀಡಿ ತಪ್ಪು ಮಾಡಿದೆ

ಜನರ ಬಳಿ ಕ್ಷಮೆಯಾಚಿಸಿದ ಗೋವಾ ಫಾರ್ವರ್ಡ್‌ ಪಾರ್ಟಿ ಮುಖ್ಯಸ್ಥ ಸರ್ದೇಸಾಯಿ
Last Updated 15 ಜೂನ್ 2020, 9:56 IST
ಅಕ್ಷರ ಗಾತ್ರ

ಪಣಜಿ: ‘ಮನೋಹರ್‌ ಪರ‍್ರಿಕರ್‌‌ ನಿಧನದ ಬಳಿಕ ಪ್ರಮೋದ್‌ ಸಾವಂತ್‌ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಬಹುದೊಡ್ಡ ತಪ್ಪು ಮಾಡಿಬಿಟ್ಟೆ’ ಎಂದು ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್‌ಪಿ) ಮುಖ್ಯಸ್ಥ ವಿಜಯ್‌ ಸರ್ದೇಸಾಯಿ ತಿಳಿಸಿದ್ದಾರೆ.

ತಾವು ಪ್ರತಿನಿಧಿಸುವ ಫತೋರ್ಡ ವಿಧಾನಸಭಾ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿರುವ ವಿಜಯ್‌ ‘ಗೋವಾದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವು ಅಸಮರ್ಥವಾಗಿದೆ. ಪಾರದರ್ಶಕ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ವಿಫಲವಾಗಿದೆ. ಇಂತಹ ಸರ್ಕಾರಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನೀಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಈ ತಪ್ಪಿಗಾಗಿ ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.

‘ನಾವು ಇನ್ನೆಂದೂ ಇಂತಹ ಸರ್ಕಾರದ ಬೆನ್ನಿಗೆ ನಿಲ್ಲುವುದಿಲ್ಲ. ಪರ‍್ರಿಕರ್‌ ನಿಧನರಾದ ಬಳಿಕ ಬಿಜೆಪಿ ಅವನತಿಯತ್ತ ಸಾಗಿದೆ. ಭವಿಷ್ಯದಲ್ಲಿ ಗೋವಾದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲು ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.

‘ನಾವು ಮಾಡಿದ ತಪ್ಪಿನಿಂದಾಗಿ ಇಂದು ಗೋವಾದ ಜನರೆಲ್ಲಾ ಸಂಕಷ್ಟ ಅನುಭವಿಸುವಂತಾಗಿದೆ. ಮುಂದೆ ಹೀಗಾಗುವುದಿಲ್ಲ’ ಎಂದಿದ್ದಾರೆ.

ಪರ‍್ರಿಕರ್‌ ನೇತೃತ್ವದ ಬಿಜೆಪಿ ಸರ್ಕಾರವು 2017ರಲ್ಲಿ ಅಧಿಕಾರದ ಗದ್ದುಗೆ ಏರಲು ಪ್ರಾದೇಶಿಕ ಪಕ್ಷ ಜಿಎಫ್‌ಪಿ ಪಾತ್ರ ಮಹತ್ವದ್ದಾಗಿತ್ತು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಹತ್ತು ಮಂದಿಯ ಪೈಕಿ ಮೂವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಭಾಗ್ಯ ನೀಡಲು ಸಾವಂತ್‌ ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಹೋದ ವರ್ಷದ ಜುಲೈನಲ್ಲಿ ಉಪ ಮುಖ್ಯಮಂತ್ರಿ ವಿಜಯ್‌ ಸರ್ದೇಸಾಯಿ ಸೇರಿದಂತೆ ಜಿಎಫ್‌ಪಿಯ ಮೂವರನ್ನುಮುಖ್ಯಮಂತ್ರಿ ಸಾವಂತ್‌ ಅವರು ಮಂತ್ರಿ ಮಂಡಲದಿಂದ ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT