ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಭದ್ರ ಸರ್ಕಾರಕ್ಕಾಗಿ ಮತದಾನ ಕಡ್ಡಾಯ’

ಚುನಾವಣಾಧಿಕಾರಿ ಡಾ.ಪರಮೇಶ್ವರ ನಾಯ್ಕ ಹೇಳಿಕೆ
Last Updated 12 ಏಪ್ರಿಲ್ 2018, 11:29 IST
ಅಕ್ಷರ ಗಾತ್ರ

ಯಾದಗಿರಿ:‘ಸುಭದ್ರ ಸರ್ಕಾರ ರಚನೆ ಮಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಗುರುಮಠಕಲ್‌ ಮತಕ್ಷೇತ್ರ ಚುನಾವಣಾಧಿಕಾರಿ ಡಾ.ಪರಮೇಶ್ವರ ನಾಯ್ಕ ಹೇಳಿದರು.

ಗುರುಮಠಕಲ್‌ ನ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಮತ ಇಡೀ ದೇಶದ, ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ. ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸಿಕೊಂಡು ನೆರೆಮನೆಯವರಿಗೂ ತಿಳಿವಳಿಕೆ ಮೂಡಿಸಬೇಕು. ವಲಸೆ ಹೋದವರಿಗೂ ಮಾಹಿತಿ ನೀಡಿ ಮತದಾನ ಕರ್ತವ್ಯದಲ್ಲಿ ಭಾಗಿಗ ಳಾಗಬೇಕು’ ಎಂದು ಸಲಹೆ ನೀಡಿದರು.

ಗುರುಮಠಕಲ್ ತಹಶೀಲ್ದಾರ್ ಬಸವರಾಜ್ ಮಾತನಾಡಿ, ‘ಒಬ್ಬ ವ್ಯಕ್ತಿಯ ಮತ ದೇಶದ ಭದ್ರ ಆಡಳಿತಕ್ಕೆ ಊರುಗೋಲಾಗಲಿದೆ. ಒಂದು ಮತ ಎಂಬ ಉಡಾಫೆ ಮಾಡುವಂತಿಲ್ಲ. ಕುಟುಂಬದ ಸದಸ್ಯರಿಗೂ ಮತದಾನ ಕುರಿತು ಮಾಹಿತಿ ನೀಡಿ ಮತದಾನ ಪ್ರಕ್ರಿಯೆಯೆಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದರು.

ಯಾದಗಿರಿ ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್.ರಾಥೋಡ ಮಾತನಾಡಿ,‘ಮತದಾನದ ಬಗ್ಗೆ ಅರಿವು ಮೂಡಿಸಲು ಎಲ್ಲ ಗ್ರಾಮಗಳಲ್ಲಿ, ಹಾಡುಹಸೆ, ಜಾಥಾಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ನಿಮ್ಮ ಮತ- ನಿಮ್ಮ ಭವಿಷ್ಯವಾಗಿದೆ. ಆದ್ದರಿಂದ ಯಾವೊಬ್ಬ ಮತದಾರನು ಮತ ಚಲಾವಣೆಯಿಂದ ವಂಚಿತರಾಗದಂತೆ ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ಮತದಾನವನ್ನು ಮಾಡೋಣ; ಪ್ರಜಾಪ್ರಭುತ್ವವನ್ನು ಯಶಸ್ವಿ ಗೊಳಿಸೋಣ’, ‘ರಾಷ್ಟ್ರದ ಅಭಿವೃದ್ಧಿ ಗಾಗಿ ಮತಚಲಾಯಿಸಿ’, ‘ನಿಮ್ಮ ಮತ-ನಿಮ್ಮ ಹಕ್ಕು’ ಇತ್ಯಾದಿ ಘೋಷಣೆಗಳ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರು ಪಟ್ಟಣದಲ್ಲಿ ಜಾಗೃತಿ ಮೂಡಿಸಿದರು.

ಪ್ರಾಂಶುಪಾಲ ಅಶೋಕ ಕುಮಾರ ಮಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ವನಜಾಕ್ಷಿ ಬೆಂಡಿಗೇರಿ ಇದ್ದರು.

ವಿವಿಧ ಸ್ಪರ್ಧೆ ಹಾಗೂ ಕಬಡ್ಡಿ, ಹಗ್ಗಾಜಗ್ಗಾಟ ಮತ್ತು ಇತರೆ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

**

ದೇಶ ಭವಿಷ್ಯ ಸರಿಪಡಿಸಿ ಎಂದು ಪ್ರಶ್ನಿಸುವ ಬದಲು ಅದರ ಬುನಾದಿ ಹಂತವಾಗಿರುವ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಚಾಲನೆ ನೀಡಬೇಕಿದೆ. – ಡಾ.ಪರಮೇಶ್ವರ ನಾಯ್ಕ, ಚುನಾವಣಾಧಿಕಾರಿ ಗುರುಮಠಕಲ್ ಮತಕ್ಷೇತ್ರ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT