ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದೀತೇ ಆಡಳಿತ ವಿರೋಧಿ ಅಲೆ?

Last Updated 17 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ

ಇನ್ನು ಕೆಲವೇ ವಾರಗಳಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಹುದೇ, ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದೇ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಮೂರು ಅವಧಿಯ ಆಳ್ವಿಕೆಯಿಂದಾಗಿ ಆಡಳಿತ ವಿರೋಧಿ ಅಲೆ ಬಿಜೆಪಿಯ ಮುಂದಿರುವ ದೊಡ್ಡ ಸವಾಲು. ಕಾರ್ಯಕರ್ತರು ಕಡಿಮೆ ಮತ್ತು ನಾಯಕರು ಹೆಚ್ಚು ಇರುವ ಕಾಂಗ್ರೆಸ್‌ ಪಕ್ಷಕ್ಕೆ ತಳಮಟ್ಟದಲ್ಲಿ ಜನರನ್ನು ಒಲಿಸಿಕೊಳ್ಳುವುದು ಸುಲಭವೇನಲ್ಲ.

ಮಧ್ಯಪ‍್ರದೇಶದಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಎಂದು ಸಿಎಸ್‌ಡಿಎಸ್‌ ಮತ್ತು ಸಿ–ವೋಟರ್‌ ಸಂಸ್ಥೆಗಳು ಮೇ ಮತ್ತು ಆಗಸ್ಟ್‌ ತಿಂಗಳಲ್ಲಿ ನಡೆಸಿದ ಸಮೀಕ್ಷೆಗಳು ಬಹಳ ಸ್ಪಷ್ಟವಾಗಿ ಹೇಳಿದ್ದವು. 2013ರ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಷ್ಟು ಸ್ಥಾನ ದೊರೆಯದಿದ್ದರೂ ಬಿಜೆಪಿಗೆ ಸರಳ ಬಹುಮತಕ್ಕೆ ಕೊರತೆಯಾಗದು ಎಂದು ಇಂಡಿಯಾ ಟಿ.ವಿ– ಸಿಎನ್‌ಎಕ್ಸ್‌ ಸಮೀಕ್ಷೆ ಮತ್ತು ಇತರ ಕೆಲವು ಸಮೀಕ್ಷೆಗಳು ಹೇಳಿವೆ.

2013ರ ವಿಧಾನಸಭಾ ಚುನಾವಣೆಗೂ ಮೊದಲಿನ ಎಲ್ಲ ಸಮೀಕ್ಷೆಗಳು ಬಿಜೆಪಿ ಗೆಲ್ಲುವುದು ಖಚಿತ ಎಂದೇ ಭವಿಷ್ಯ ನುಡಿದಿದ್ದವು. ಆದರೆ ಈ ಬಾರಿ ಆ ಖಚಿತತೆ ಇಲ್ಲ. ಆದರೆ, 2018ರ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜಿದ್ದಾಜಿದ್ದಿ ಇರಲಿದೆ ಎಂಬುದು ಮಾತ್ರ ಖಚಿತ.

ರಾಜಸ್ಥಾನದಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಕೆಲವು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಗೆಲುವು ಮತ್ತು ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆಗಳಿಂದಾಗಿ ಕಾಂಗ್ರೆಸ್‌ನ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ, ಮಧ್ಯಪ್ರದೇಶದಲ್ಲಿ 2014ರ ಬಳಿಕ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ಹೇಳಿಕೊಳ್ಳುವಂತೇನಿಲ್ಲ.

2014ರ ಬಳಿಕ ಮಧ್ಯಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟು 15 ಉಪಚುನಾವಣೆಗಳು ನಡೆದಿವೆ. ಅವುಗಳ ಪೈಕಿ ಒಂಬತ್ತರಲ್ಲಿ ಬಿಜೆಪಿ ಗೆದ್ದರೆ ಆರರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಬಿಜೆಪಿ ಗೆದ್ದ 9 ಸ್ಥಾನಗಳಲ್ಲಿ ಏಳರಲ್ಲಿ ಹಿಂದಿನ ಚುನಾವಣೆಯಲ್ಲಿ ಆ ಪಕ್ಷವೇ ಗೆದ್ದಿತ್ತು. ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಹಾಗೆಯೇ, ಕಾಂಗ್ರೆಸ್‌ ತಾನೇ ಗೆದ್ದಿದ್ದ ನಾಲ್ಕು ಸ್ಥಾನಗಳನ್ನು ಉಳಿಸಿಕೊಂಡಿದ್ದರೆ ಎರಡನ್ನು ಬಿಜೆಪಿಯಿಂದ ಕಸಿದುಕೊಂಡಿದೆ. ಅಲ್ಲಿಗೆ ಲೆಕ್ಕ ಸರಿ ಹೋಗುತ್ತದೆ.

ತೀರಾ ಇತ್ತೀಚೆಗೆ ಮುಂಗಾವಲಿ ಮತ್ತು ಕೊಲಾರಸ್‌ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯೂ ಯಾರಿಗೆ ಮೇಲುಗೈ ಎಂಬ ಗೊಂದಲವನ್ನು ಇನ್ನಷ್ಟು ಹೆಚ್ಚಿಸುವಂತೆಯೇ ಇದೆ. 2013ರ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ಉಪ ಚುನಾವಣೆಯಲ್ಲಿಯೂ ಈ ಕ್ಷೇತ್ರಗಳನ್ನು ಆ ಪಕ್ಷ ಉಳಿಸಿಕೊಂಡಿದೆ. ಆದರೆ, ಗೆಲುವಿನ ಅಂತರ ತೀರಾ ಕುಗ್ಗಿದೆ.

ಮುಂಗಾವಲಿ ಕ್ಷೇತ್ರದ ಉಚುನಾವಣೆಯಲ್ಲಿ ಗೆಲುವಿನ ಅಂತರ 2,123 ಆಗಿದ್ದರೆ 2013ರಲ್ಲಿ ಈ ಅಂತರ 20 ಸಾವಿರಕ್ಕೂ ಹೆಚ್ಚು ಇತ್ತು. ಕೊಲಾರಸ್‌ ಕ್ಷೇತ್ರದಲ್ಲಿ ಗೆಲುವಿನ ಅಂತರ 24,953ರಿಂದ 8,083ಕ್ಕೆ ಕುಸಿದಿತ್ತು.

2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ 23,920 ಮತಗಳನ್ನು ಪಡೆದಿದ್ದರು. ಬಿಎಸ್‌ಪಿ ಈ ಮಟ್ಟದ ಪ್ರಾಬಲ್ಯ ಹೊಂದಿರುವ ಹಲವು ಕ್ಷೇತ್ರಗಳು ಮಧ್ಯ ಪ್ರದೇಶದಲ್ಲಿ ಇವೆ. ಈ ಬಾರಿಯ ಚುನಾವಣೆ ತೀರಾ ನಿಕಟ ಹಣಾಹಣಿಯೂ ಆಗಬಹುದಾದ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳದ ಬಿಎಸ್‌ಪಿಯ ನಿಲುವು ಕಾಂಗ್ರೆಸ್‌ಗೆ ದೊಡ್ಡ ನಷ್ಟ ಉಂಟು ಮಾಡಬಹುದು.

ಉಪ ಚುನಾವಣೆಗಳ ಫಲಿತಾಂಶಗಳು ಮತ್ತು ತಳಮಟ್ಟದ ವಾಸ್ತವ ಸ್ಥಿತಿ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸಕಾರಾತ್ಮಕ ಸಂದೇಶ ಕೊಡುತ್ತಿಲ್ಲ. 15 ವರ್ಷಗಳ ಆಳ್ವಿಕೆಯ ಬಳಿಕ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಹೆಬ್ಬಯಕೆ ಹೊಂದಿರುವ ಪಕ್ಷ ತಳಮಟ್ಟದಲ್ಲಿ ಇನ್ನೂ ಹೆಚ್ಚಿನ ಹಿಡಿತ ಹೊಂದಿರಬೇಕಿತ್ತು. ಹಾಗೆಯೇ ಮೂರು ಅವಧಿ ಆಡಳಿತ ನಡೆಸಿದ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಆರು ಉಪಚುನಾವಣೆಗಳ ಅಲ್ಪ ಅಂತರದ ಗೆಲುವಷ್ಟೇ ಸಾಲದು ಎಂಬುದನ್ನು ಕಾಂಗ್ರೆಸ್‌ ಮನವರಿಕೆ ಮಾಡಿಕೊಳ್ಳಬೇಕಿತ್ತು.

1967ರಲ್ಲಿ ಕಾಂಗ್ರೆಸ್ಸೇತರ ಮೊದಲ ಸರ್ಕಾರ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸೇತರ ಮೊದಲ ಸರ್ಕಾರ 1967ರ ಜುಲೈ 30ರಂದು ಸ್ಥಾಪನೆಯಾಯಿತು. ಸಂಯುಕ್ತ ವಿಧಾಯಕ ದಳ ಎಂಬ ಮೈತ್ರಿಕೂಟ ಸರ್ಕಾರಕ್ಕೆ ನೇತೃತ್ವ ಕೊಟ್ಟವರು ಗೋವಿಂದ ನಾರಾಯಣ್ ಸಿಂಗ್‌. ಕಾಂಗ್ರೆಸ್‌ನಿಂದ ಸಿಡಿದು ಹೋದ ಒಂದು ಗುಂಪಿನ ಬೆಂಬಲವೂ ಮೈತ್ರಕೂಟಕ್ಕೆ ಇತ್ತು. ಈ ಸರ್ಕಾರ ಹೆಚ್ಚು ಕಾಲ ಬಾಳಲಿಲ್ಲ. 1977ರಿಂದ 1980ರವರೆಗೆ ಜನತಾ ಪಾರ್ಟಿಯ ಸರ್ಕಾರ ಇತ್ತು. ಈ ಅವಧಿಯಲ್ಲಿ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು. 1980ರಿಂದ 1990ರ ವರೆಗೆ ಕಾಂಗ್ರೆಸ್‌ ಸರ್ಕಾರಗಳೇ ಇದ್ದವು. 1990ರ ಮಾರ್ಚ್‌ನಲ್ಲಿ ಸುಂದರ್‌ ಲಾಲ್‌ ಪಟ್ವಾ ಅವರು ಮುಖ್ಯಮಂತ್ರಿಯಾಗುವುದರೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂತು.

ಚೌಹಾಣ್‌ ಬಗ್ಗೆ ಅತೃಪ್ತಿ

ಬಿಜೆಪಿಯಲ್ಲಿ ಚೌಹಾಣ್‌ ನಾಯಕತ್ವದ ಬಗ್ಗೆ ಹಲವು ಜನರಿಗೆ ಅಸಮಾಧಾನ ಇದೆ. ಕೇಂದ್ರ ನಾಯಕತ್ವವೂ ಅವರ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ. ಒಂದು ವರ್ಷದಲ್ಲಿ ನಡೆದ ನಾಲ್ಕು ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಕಳೆದ ಬಾರಿ ಚೌಹಾಣ್‌ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಲಾಗಿತ್ತು. ಈ ಬಾರಿ ಮೋದಿ, ಅಮಿತ್‌ ಶಾ ಅವರೇ ಮುಂಚೂಣಿಯಲ್ಲಿ ನಿಲ್ಲುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ ಸಮಸ್ಯೆಗಳು: ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಕೊರತೆ ತೀವ್ರವಾಗಿದೆ. ತಳಮಟ್ಟದಲ್ಲಿ ಪಕ್ಷಕ್ಕೆ ಯಾವುದೇ ಶಕ್ತಿ ಇಲ್ಲ. ಇದರ ಜತೆಯಲ್ಲೇ ಪಕ್ಷದ ಮುಂಚೂಣಿಯ ನಾಯಕರಲ್ಲಿ ಭಿನ್ನಮತ ಇದೆ. ಕಮಲನಾಥ್‌, ದಿಗ್ವಿಜಯ್‌ ಸಿಂಗ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅರುಣ್‌ ಯಾದವ್‌ ಕಾಂಗ್ರೆಸ್‌ ಪ್ರಮುಖ ಮುಖಂಡರು. ಇವರ ನಡುವೆ ಯಾವ ವಿಚಾರದಲ್ಲಿಯೂ ಸಹಮತ ಇಲ್ಲ.

* ಪ್ರಾಂತ್ಯಗಳು: ಮಾ ಲ್ವಾ, ಬುಂದೇಲ್‌ಖಂಡ, ಬಘೇಲ್‌ಖಂಡ, ನಿಮಾರ್‌, ಮಹಾಕೋಶಲ, ಚಂಬಲ್‌, ಗಿರ್ಡ್‌

* ರಾಜ್ಯದ ಶೇ 91ರಷ್ಟು ಜನರು ಹಿಂದೂಗಳು, ಮುಸ್ಲಿಮರ ಪ್ರಮಾಣ ಶೇ 6ರಷ್ಟು ಮಾತ್ರ

* ಸಾಕ್ಷರತೆ ಶೇ 70, ರಾಷ್ಟ್ರೀಯ ಸರಾಸರಿಗಿಂತ (ಶೇ 74) ಕಡಿಮೆ

* 50 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪ್ರಾಬಲ್ಯ ಇದೆ: ಪರಿಶಿಷ್ಟ ಜಾತಿಯ ಜನರ ಪ್ರಮಾಣ ಶೇ 21.6, ಪರಿಶಿಷ್ಟ ಪಂಗಡ ಶೇ 16, ಹಿಂದುಳಿದ ವರ್ಗಗಳ ಪ್ರಮಾಣ ಶೇ 51.

* ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರ ಪ್ರಮಾಣ ಶೇ 28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT