ಚೌಹಾಣರ ಬುದ್ನಿಯಲ್ಲಿ ಮರುಕಳಿಸೀತೇ ಇತಿಹಾಸ

7

ಚೌಹಾಣರ ಬುದ್ನಿಯಲ್ಲಿ ಮರುಕಳಿಸೀತೇ ಇತಿಹಾಸ

Published:
Updated:

ಭೋಪಾಲ್‌: ಮಧ್ಯ ‍ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಬುದ್ನಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅರುಣ್‌ ಯಾದವ್‌ ಸ್ಪರ್ಧಿಸುತ್ತಿದ್ದಾರೆ. ಯಾದವ್‌ ಮಧ್ಯ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿದ್ದವರು ಮತ್ತು ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, ಈ ಬಾರಿ ಚೌಹಾಣ್‌ ವಿರುದ್ಧ ಸ್ಪರ್ಧಿಸಲು ಯಾದವ್‌ಗೆ ಇಷ್ಟವೇ ಇರಲಿಲ್ಲ. ಹಿಂದಿನ ನಾಲ್ಕು ಚುನಾವಣೆಗಳಲ್ಲಿ (1990, 2006, 2008 ಮತ್ತು 2013) ಚೌಹಾಣ್‌ ಅವರು ಬುದ್ನಿ ಕ್ಷೇತ್ರದಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದು ಅದಕ್ಕೆ ಕಾರಣ.

ಬುದ್ನಿಯಲ್ಲಿ ಒಬಿಸಿ ಸಮುದಾಯ ಗಳ ಜನರು ಬಹುಸಂಖ್ಯಾತರು. ಚೌಹಾಣ್‌ ಅವರು ಕಿರಾರ್‌ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಕಿರಾರ್‌ ಸಮುದಾಯದ ಜನರಿಗಿಂತ ಯಾದವ್‌ ಸಮುದಾಯದ ಜನಸಂಖ್ಯೆ ಹೆಚ್ಚು ಎಂಬ ಅಂಕಿ ಅಂಶಗಳನ್ನು ಮುಂದಟ್ಟರೂ ಸ್ಪರ್ಧಿಸಲು ಯಾದವ್ ಮನಸ್ಸು ಮಾಡಲಿಲ್ಲ. 

ಆದರೆ, ಚುನಾವಣಾ ಇತಿಹಾಸದ ಒಂದು ವಿಚಾರವನ್ನು ಗಮನಕ್ಕೆ ತಂದಾಗ ಕಣಕ್ಕಿಳಿಯಲು ಯಾದವ್‌ ಒಪ್ಪಿದರು. 2003ರಲ್ಲಿ ರಾಘೊಗಡ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ, ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ವಿರುದ್ಧ ಚೌಹಾಣ್‌ ಸ್ಪರ್ಧಿಸಿ ಸೋತಿದ್ದರು. ಎರಡೇ ವರ್ಷಗಳ ಬಳಿಕ ಚೌಹಾಣ್‌ ರಾಜ್ಯದ ಮುಖ್ಯಮಂತ್ರಿಯಾದರು. 

ಚೌಹಾಣ್‌ ಅವರನ್ನು ಸೋಲಿಸಲು ಸಾಧ್ಯವಾದರೆ ಯಾದವ್‌ ಅವರ ರಾಜಕೀಯ ವರ್ಚಸ್ಸೇ ಬದಲಾಗಲಿದೆ. ಸೋಲಿಸಲು ಸಾಧ್ಯವಾಗದಿದ್ದರೂ ಚೌಹಾಣ್‌ ಅವರ ಪ್ರಕರಣದಲ್ಲಿ ಆದಂತೆ ಇತಿಹಾಸ ಮರುಕಳಿಸುವ ಸಾಧ್ಯತೆಯೂ ಇದೆ. ‘ಈ ಎರಡರಲ್ಲಿ ಯಾವುದು ಆದರೂ ನಿಮಗೆ ಲಾಭ’ ಎಂಬುದನ್ನು ಯಾದವ್‌ಗೆ ಕಾಂಗ್ರೆಸ್‌ ಮುಖಂಡರು ಮನವರಿಕೆ ಮಾಡಿಕೊಟ್ಟರು. 

ಫಲಿತಾಂಶ ಏನೇ ಆಗಲಿ, ಇಬ್ಬರು ಹಿರಿಯ ಮುಖಂಡರ ಸ್ಪರ್ಧೆಯಿಂದಾಗಿ ಮಧ್ಯ ಪ್ರದೇಶದ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಬುದ್ನಿಯೂ
ಒಂದಾಗಿದೆ.

ಸರ್ಕಾರಿ ಕಟ್ಟಡದಲ್ಲಿ ‘ಶಾಖೆ’ ನಿಷೇಧ: ಕಾಂಗ್ರೆಸ್‌ ಭರವಸೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಕಟ್ಟಡದಲ್ಲಿ ಆರ್‌ಎಸ್‌ಎಸ್‌ ಶಾಖೆಗೆ ಅವಕಾಶ ಕೊಡುವುದಿಲ್ಲ ಎಂಬ ಪ್ರಣಾಳಿಕೆಯ ಅಂಶಕ್ಕೆ ಬಿಜೆಪಿ ಕಟುವಾಗಿ ಪ್ರತಿಕ್ರಿಯೆ ನೀಡಿದೆ.

ಆರ್‌ಎಸ್‌ಎಸ್‌ ಮೇಲೆ 1981ರಲ್ಲಿ ಕಾಂಗ್ರೆಸ್‌ ಸರ್ಕಾರ ನಿಷೇಧ ಹೇರಿತ್ತು. 2000ರಲ್ಲಿ ದಿಗ್ವಿಜಯ್‌ ಸಿಂಗ್ ನೇತೃತ್ವದ ಸರ್ಕಾರ ಈ ನಿಷೇಧವನ್ನು ಮುಂದುವರಿಸಿತ್ತು. ಆರ್‌ಎಸ್‌ಎಸ್‌ ಶಾಖೆಯಲ್ಲಿ ಅಥವಾ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿದ ಸರ್ಕಾರಿ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮಧ್ಯ ಪ್ರದೇಶ ನಾಗರಿಕ ಸೇವಾ ನಿಯಮಗಳು ಅವಕಾಶ ಕೊಟ್ಟಿದ್ದವು.

ಆದರೆ, ಆರ್‌ಎಸ್‌ ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರ 2006ರಲ್ಲಿ ಅವಕಾಶ ಕೊಟ್ಟಿತು. ಈ ಆದೇಶವನ್ನು ರದ್ದು ಮಾಡುವುದಾಗಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. 

ಪ್ರಣಾಳಿಕೆಯಲ್ಲಿರುವ ಈ ಅಂಶವನ್ನು ಕಾಂಗ್ರೆಸ್‌ ಮುಖಂಡರಾದ ಕಮಲ್‌ನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.

‘ಸರ್ಕಾರಿ ನೌಕರರು ಇತರ ಚಟುವಟಿಕೆಗಳಲ್ಲಿ ತೊಡಗುವ ಬದಲು ತಮ್ಮ ಕರ್ತವ್ಯಕ್ಕೆ ಗಮನ ಕೇಂದ್ರೀಕರಿಸುವುದು ಮುಖ್ಯ. ಅದನ್ನು ಖಾತರಿಪಡಿಸುವುದು ಸರ್ಕಾರದ ಕೆಲಸ’ ಎಂದು ಕಮಲ್‌ನಾಥ್‌ ಹೇಳಿದ್ದಾರೆ. 

ಧೈರ್ಯ ಇದ್ದರೆ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಿ ಎಂದು ಮಧ್ಯ ಪ್ರದೇಶ ಬಿಜೆಪಿ ಮುಖ್ಯಸ್ಥ ರಾಕೇಶ್‌ ಸಿಂಗ್‌ ಅವರು ಕಾಂಗ್ರೆಸ್‌ಗೆ ಸವಾಲು ಎಸೆದಿದ್ದಾರೆ. ದೇಶ ಕಟ್ಟುವ ಕೆಲಸದಿಂದ ಈ ದೇಶಭಕ್ತ ಸಂಘಟನೆಯನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !