ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಪ್ರದೇಶ: ‘ಕೈ’ಗೂ ‘ಕಮಲ’ಕ್ಕೂ ಹಿಂದುತ್ವವೇ ಬೇಕು

Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶ ವಿಧಾನಸಭೆ ಮತದಾನಕ್ಕೆ ಇನ್ನೊಂದು ವಾರವಷ್ಟೇ ಇದೆ. ಬಿಜೆಪಿಯ ಪ್ರಮುಖ ಮುಖಂಡರು ತಮ್ಮ ಭಾಷಣಗಳಲ್ಲಿ ಹಿಂದುತ್ವ ವಿಚಾರವನ್ನು ಗಟ್ಟಿಯಾಗಿಯೇ ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯಾವ ರೀತಿಯ ಹಿಂದೂ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ರಾಹುಲ್‌ ದೇವಸ್ಥಾನಕ್ಕೆ ಹೋಗಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ಗುಜರಾತ್‌ನ ದೇವಾಲಯವೊಂದಕ್ಕೆ ಹೋದಾಗ ಕುಳಿತ ಭಂಗಿ ಬದಲಾಯಿಸಿಕೊಳ್ಳುವಂತೆ ಅವರಿಗೆಅಲ್ಲಿನ ಅರ್ಚಕರು ಹೇಳಿದರು. ಮಂಡಿಯೂರಿ ಕುಳಿತುಕೊಳ್ಳಲು ಇದು ಮಸೀದಿ ಅಲ್ಲ ಎಂದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಬದನವಾರ್‌ ಪಟ್ಟಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಯೋಗಿ ಹೀಗೆ ಹೇಳಿದ್ದಾರೆ. ಮಾಲ್ವಾ–ನಿಮಾರ್‌ ಪ್ರದೇಶದಲ್ಲಿ ಅವರು ನಾಲ್ಕು ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ.

ರಾಹುಲ್‌ ಅವರನ್ನು ಲೇವಡಿ ಮಾಡುವಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರೂ ಹಿಂದೆ ಬಿದ್ದಿಲ್ಲ. ಜಬಲ್ಪುರದಲ್ಲಿ ಮಾತನಾಡಿದ ಅವರು, ‘ರಾಹುಲ್‌ ಅವರನ್ನು ಯಾವ ರೀತಿ ಬಿಂಬಿಸಬೇಕೆಂದೇ ಕಾಂಗ್ರೆಸ್‌ಗೆ ಗೊತ್ತಾಗುತ್ತಿಲ್ಲ. ಮೊದಲಿಗೆ ಅವರು ಜಾತ್ಯತೀತ ಎಂದು ಬಿಂಬಿಸಲಾಯಿತು. ಈಗ ಹಿಂದೂ ಎಂದು ಹೇಳಲಾಗುತ್ತಿದೆ. ಇದು ಯಾವುದೂ ಉಪಯೋಗ ಇಲ್ಲ ಎಂದಾದಾಗ ಅವರನ್ನು ಮಾನಸ ಸರೋವರಕ್ಕೆ ಕಳುಹಿಸಲಾಯಿತು. ಅಲ್ಲಿಂದ ಅವರು ಶಿವಭಕ್ತನಾಗಿ ಹಿಂದಿರುಗಿದರು’ ಎಂದಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಮಾತುಗಳಲ್ಲಿಯೂ ರಾಹುಲ್‌ ಗಾಂಧಿಯ ಗೊಂದಲ ಪ್ರಸ್ತಾಪವಾಗಿದೆ. ರಾಹುಲ್‌ಗೆ ಮೋದಿ ಭೀತಿ ಹಿಡಿದಿದೆ. ಹಾಗಾಗಿಯೇ 22 ನಿಮಿಷದ ಭಾಷಣದಲ್ಲಿ 44 ಬಾರಿ ಮೋದಿ ಹೆಸರು ಹೇಳುತ್ತಾರೆ. ರಾಹುಲ್‌ ಅವರು ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಅಥವಾ ಬಿಜೆಪಿ ಪರವಾಗಿಯೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಶಾ ಗೇಲಿ ಮಾಡಿದ್ದಾರೆ.

ಸರ್ಕಾರಿ ಕಟ್ಟಡಗಳಲ್ಲಿ ಆರ್‌ಎಸ್‌ಎಸ್‌ ಶಾಖೆಯನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್‌ನ ಪ್ರಣಾಳಿಕೆಯ ಭರವಸೆ ಬಿಜೆಪಿ ಕೈಗೆ ಹೊಸ ಅಸ್ತ್ರ ಕೊಟ್ಟಿದೆ. ಕಾಂಗ್ರೆಸ್‌ ಹಿಂದೂ ವಿರೋಧಿ ಎಂದು ಬಿಜೆಪಿ ಹೇಳುತ್ತಿದೆ. ಆರ್‌ಎಸ್‌ಎಸ್‌ನ ಷಡ್ಯಂತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಮುಸ್ಲಿಂ ಗುಂಪೊಂದಕ್ಕೆ ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಹಿಂದೆ ಹೇಳಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್‌ ಆದ ಬಳಿಕ ಅದನ್ನೂ ‘ಹಿಂದೂ ವಿರೋಧಿ’ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದಲ್ಲಿ ಗೋವಿನ ವಿಚಾರವನ್ನೂ ಎಳೆದು ತಂದಿದ್ದಾರೆ. ಗೋವಿನ ವಿಷಯದಲ್ಲಿ ಕಾಂಗ್ರೆಸ್‌ ದ್ವಂದ್ವ ನಿಲುವು ತಳೆದಿದೆ ಎಂದು ಆರೋಪಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಆದರೆ, ಕೇರಳದಲ್ಲಿ ದನದ ಮಾಂಸ ತಿನ್ನುವವರ ಬಗ್ಗೆ ಕಾಂಗ್ರೆಸ್‌ಗೆ ಯಾವ ಸಮಸ್ಯೆಯೂ ಇಲ್ಲ ಎಂದು ಕುಟುಕಿದ್ದಾರೆ.

ಕಾಂಗ್ರೆಸ್‌ನದು ಮೃದು ಹಿಂದುತ್ವವಲ್ಲ

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 2016ರ ಡಿಸೆಂಬರ್‌ನಲ್ಲಿ ನರ್ಮದಾ ಸೇವಾ ಯಾತ್ರೆ ನಡೆಸುವ ಮೂಲಕ ಹಿಂದುತ್ವದ ಲಾಭ ಪಡೆಯಲು ತಂತ್ರ ಹೆಣೆದರು. ಕಳೆದ ಕೆಲವು ವರ್ಷಗಳಲ್ಲಿ ಧಾರ್ಮಿಕ ಸ್ವರೂಪದ ಹತ್ತಾರು ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದರು. ಈ ವರ್ಷ ನಡೆದ ‘ಸಂತ ಸಭೆ’ಯಲ್ಲಿ ಚೌಹಾಣ್‌ ಮುಖ್ಯ ಅತಿಥಿಯಾಗಿದ್ದರು. ಸಂತ ಸಮುದಾಯದ ಬೆಂಬಲ ಪಡೆಯುವುದೇ ಇದರ ಉದ್ದೇಶವಾಗಿತ್ತು.

ಇದೇ ಕಾರ್ಯತಂತ್ರದ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್‌ ಪಕ್ಷ ಕೂಡ ಮುಂದಾಗಿದೆ. ಕಾಂಗ್ರೆಸ್‌ ಇಲ್ಲಿ ಮೃದು ಹಿಂದುತ್ವದ ಬದಲು ಕಟ್ಟರ್‌ ಹಿಂದೂವಾದಿಯೇ ಆಗಿದೆ. ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರು 2017ರ ಸೆಪ್ಟೆಂಬರ್‌ 30ರಂದು ನರ್ಮದಾ ಪರಿಕ್ರಮ ಯಾತ್ರೆಗೆ ಚಾಲನೆ ಕೊಟ್ಟರು. 192 ದಿನಗಳ ಈ ಯಾತ್ರೆಯ ಉದ್ದಕ್ಕೂ ‘ಇದು ಧಾರ್ಮಿಕ ಯಾತ್ರೆ, ರಾಜಕೀಯಕ್ಕೂ ಇದಕ್ಕೂ ಸಂಬಂಧವೇ ಇಲ್ಲ’ ಎಂದು ಅವರು ಹೇಳಿದ್ದರು. ಆದರೆ, ಯಾತ್ರೆಯ ಕೊನೆಗೆ, ನರ್ಮದಾ ಪರಿಕ್ರಮ ಯಾತ್ರೆಗೆ ರಾಜಕೀಯ ಸ್ವರೂಪವೂ ಇದೆ ಎಂದರು.

ರಾಜ್ಯದ 23 ಸಾವಿರ ಪಂಚಾಯಿತಿಗಳಲ್ಲಿ ಗೋಶಾಲೆ ತೆರೆಯುವುದು ಕಾಂಗ್ರೆಸ್‌ನ ಒಂದು ಆಶ್ವಾಸನೆ. ಇದಲ್ಲದೆ, ‘ರಾಮ ವನಗಮನ ಪಥ’ ಕಾಂಗ್ರೆಸ್‌ನ ಇನ್ನೊಂದು ಮಹತ್ವದ ಭರವಸೆ. ವನವಾಸದ ಸಂದರ್ಭದಲ್ಲಿ ರಾಮ ಸಾಗಿದ ದಾರಿಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವುದಾಗಿ ಪಕ್ಷ ಹೇಳಿದೆ. ‘ರಾಮ ಸಾಗಿದ ದಾರಿ’ಯಲ್ಲಿ 35 ವಿಧಾನಸಭಾ ಕ್ಷೇತ್ರಗಳಿವೆ. ಅವು ಕಾಂಗ್ರೆಸ್‌ನ ನಿಜವಾದ ಗುರಿ. ಅದರ ಜತೆಗೆ ತಮ್ಮದೂ ಹಿಂದುತ್ವವಾದಿ ಪಕ್ಷವೇ ಎಂಬುದನ್ನು ಬಿಂಬಿಸುವ ಉದ್ದೇಶವೂ ಇದೆ.

ಬಿಜೆಪಿಯ ಸುದೀರ್ಘ ಸಿ.ಎಂ.ಗೆ 4ನೇ ಅವಧಿಯ ತವಕ

ಛತ್ತೀಸಗಡದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ಮುಖಂಡ ದಿಲೀಪ್‌ ಸಿಂಗ್‌ ಜುದೇವ್‌ ಅವರು ಲಂಚ ಪಡೆಯುವ ವಿಡಿಯೊ 2003ರಲ್ಲಿ ಬಹಿರಂಗವಾದ ಬಳಿಕ ಅಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು. ಚೆಲ್ಲಾಪಿಲ್ಲಿ ಸ್ಥಿತಿಯಲ್ಲಿದ್ದ ಪಕ್ಷವನ್ನು ಮುನ್ನಡೆಸಲು ಹೈಕಮಾಂಡ್‌ ಆರಿಸಿಕೊಂಡದ್ದು ಸೌಮ್ಯ ಸ್ವಭಾವದ ರಮಣ್‌ ಸಿಂಗ್‌ ಅವರನ್ನು. ಆಗ ಅವರು ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಹೈಕಮಾಂಡ್‌ ಸೂಚನೆಯಂತೆ ಸಚಿವ ಹುದ್ದೆಗೆ ರಾಜೀನಾಮೆ ಕೊಟ್ಟು ಛತ್ತೀಸಗಡದಲ್ಲಿ ಪಕ್ಷದ ಹೊಣೆ ಹೊತ್ತರು.

2003ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ರಮಣ್‌ ಅಧಿಕಾರ ವಹಿಸಿಕೊಂಡರು.

ಆಯುರ್ವೇದ ವೈದ್ಯ ಸಿಂಗ್‌ ಈಗಲೂ ಛತ್ತೀಸಗಡ ಬಿಜೆಪಿಗೆ ಪ್ರಶ್ನಾತೀತ ನಾಯಕ. ಅತಿ ಹೆಚ್ಚು ಕಾಲದಿಂದ ಮುಖ್ಯಮಂತ್ರಿಯಾಗಿರುವ ವ್ಯಕ್ತಿ ಎಂಬ ಹೆಗ್ಗಳಿಕೆ ರಮಣ್‌ ಬೆನ್ನಿಗಿದೆ. ಅವರು ಮುಖ್ಯಮಂತ್ರಿಯಾಗಿರುವ ಅವಧಿ ನರೇಂದ್ರ ಮೋದಿ ಅವರಿಗಿಂತ ಮೂರು ವರ್ಷ, ಪಕ್ಕದ ರಾಜ್ಯ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ರಿಂಗ ಎರಡು ವರ್ಷ ಹೆಚ್ಚು.

ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವ ಉತ್ಸಾಹದಲ್ಲಿ ಅವರು ಈಗ ಇದ್ದಾರೆ. ರಾಜನಂದಗಾಂವ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಈ ಬಾರಿ ಅವರ ಎದುರಾಳಿ, ವಾಜಪೇಯಿ ಅವರ ಸೋದರ ಸೊಸೆ ಕರುಣಾ ಶುಕ್ಲಾ. ಅಜಿತ್‌ ಜೋಗಿ ಅವರ ಛತ್ತೀಸಗಡ ಜನತಾ ಕಾಂಗ್ರೆಸ್‌ ಮತ್ತು ಮಾಯಾವತಿ ಅವರ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಹಾಗಾಗಿ ಈ ಬಾರಿ ಛತ್ತೀಸಗಡದಲ್ಲಿ ಸ್ಪರ್ಧೆ ತ್ರಿಕೋನವಾಗಿದೆ.

ತಮ್ಮ 15 ವರ್ಷದ ಆಳ್ವಿಕೆಯಲ್ಲಿ ಜನಪ್ರಿಯತೆಗೆ ಯಾವುದೇ ಕುಂದು ಉಂಟಾಗದಂತೆ ರಮಣ್‌ ನೋಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರೇ ಶೇ 50ಕ್ಕಿಂತ ಹೆಚ್ಚಿರುವ ರಾಜ್ಯದಲ್ಲಿ ಆಗಾಗ ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಅವರು ಜನ ಮಾನಸದಲ್ಲಿ ನೆಲೆಯಾಗಿದ್ದಾರೆ. ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವುದರ ಜತೆಗೆ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರಿಗಿದೆ.

ರಮಣ್‌ ಅವರು ವಿವಾದಾತೀತ ವ್ಯಕ್ತಿಯೇನೂ ಅಲ್ಲ. ಪಡಿತರ ವಿತರಣೆ ವ್ಯವಸ್ಥೆಯ ಮೂಲಕ ₹36 ಸಾವಿರ ಕೋಟಿ ಅವ್ಯವಹಾರ ಎಸಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ರಮಣ್‌ ಮಗ ಅಭಿಷೇಕ್‌ ಸಿಂಗ್‌ ಅವರ ಹೆಸರು ಸೋರಿಕೆಯಾದ ಪನಾಮಾ ದಾಖಲೆಗಳಲ್ಲಿ ಇದೆ ಎಂಬುದು ಇನ್ನೊಂದು ಆರೋಪ. 1999ರಲ್ಲಿ ರಮಣ್‌ ಅವರು ಗೆದ್ದಿದ್ದ ರಾಜನಂದಗಾಂವ್‌ ಲೋಕಸಭಾ ಕ್ಷೇತ್ರವನ್ನು ಈಗ ಅಭಿಷೇಕ್‌ ಪ್ರತಿನಿಧಿಸುತ್ತಿದ್ದಾರೆ.

ನಕ್ಸಲ್‌ ಹಾವಳಿ ತಡೆಗಾಗಿ ಸಲ್ವಾ ಜುಡೂಂ ಹೆಸರಿನಲ್ಲಿ ನಡೆದ ಭಾರಿ ಹಿಂಸಾಚಾರವೂ ಅವರ ಆಳ್ವಿಕೆಯಲ್ಲಿ ನಡೆದಿದೆ. ಬುಡಕಟ್ಟು ಜನರ ಜಮೀನುಗಳನ್ನು ವ್ಯಾಪಕವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಮತ್ತು ಖಾಸಗಿಯವರ ಗಣಿಗಾರಿಕೆ ಹಿತಾಸಕ್ತಿ ಕಾಯಲು ಅರಣ್ಯ ನಾಶ ಮಾಡಿದ್ದಾರೆ ಎಂಬ ಆರೋಪಗಳೂ ಅವರ ಮೇಲಿವೆ.

***

ಮಧ್ಯಪ್ರದೇಶ–ಸೀಟು ಹಂಚಿಕೆ

ಒಟ್ಟು ಕ್ಷೇತ್ರಗಳು: 230

ಮೀಸಲು ಇಲ್ಲದ ಕ್ಷೇತ್ರಗಳು: 148

ಮೀಸಲು ಕ್ಷೇತ್ರಗಳು: ಎಸ್‌ಸಿ– 34, ಎಸ್‌ಟಿ– 41

***

ಪಕ್ಷಗಳು ಹಂಚಿದ್ದು ಹೇಗೆ?

ಕಾಂಗ್ರೆಸ್‌

ಒಬಿಸಿ: 40%

ಠಾಕೂರ್‌: 27%

ಬ್ರಾಹ್ಮಣರು: 23%

ಇತರ ಮೇಲ್ಜಾತಿ, ಅಲ್ಪಸಂಖ್ಯಾತರು: 10%

ಬಿಜೆಪಿ

ಒಬಿಸಿ: 39%

ಠಾಕೂರ್‌: 24%

ಬ್ರಾಹ್ಮಣರು: 23%

ಇತರರು: 14%

***

ಜನಸಂಖ್ಯೆ

90.89%

ಹಿಂದೂಗಳು

6.57

ಮುಸ್ಲಿಮರು

2.54

ಜೈನ, ಬೌದ್ಧ, ಸಿಖ್‌, ಕ್ರೈಸ್ತ ಇತ್ಯಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT