ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಬಾರಿ ‘ಎಂಪಿ’ ಮಧ್ಯ ಪ್ರದೇಶದ ಸಿಎಂ ಕಮಲ ನಾಥ್‌

Last Updated 13 ಡಿಸೆಂಬರ್ 2018, 20:34 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌, ಬಿಎಸ್‌ಪಿ, ಎಸ್‌‍ಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಸ್ಥಾನದ ಬಗೆಗಿನ ಗೊಂದಲ ಗುರುವಾರ ರಾತ್ರಿ ನಿವಾರಣೆಯಾಗಿದೆ. ಕಮಲ ನಾಥ್‌ ಮಧ್ಯ ಪ್ರದೇಶ ನೂತನ ಸಿಎಂ ಎಂದು ಅಧಿಕೃತ ಘೋಷಣೆಯಾಗಿದೆ.

ನವದೆಹಲಿಯಿಂದ ಭೋಪಾಲ್‌ಗೆ ಬಂದ ಕಮಲ ನಾಥ್‌ ಮತ್ತು ಸಿಂಧಿಯಾ ಪಕ್ಷದ ಮುಖಂಡರೊಂದಿಗೆ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಮಾಧ್ಯಮ ಘೋಷ್ಠಿ ನಡೆದಿದೆ. ಕಾಂಗ್ರೆಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ನೂತನ ಮುಖ್ಯಮಂತ್ರಿ ಕಮಲ್‌ ನಾಥ್‌ಗೆ ಅಭಿನಂದನೆ ಸಲ್ಲಿಸಿದೆ.

ತಮ್ಮ ಮೂರನೇ ಪುತ್ರ ಎಂದು ಇಂದಿರಾ ಗಾಂಧಿ ಅವರಿಂದ ಕರೆಸಿಕೊಂಡಿದ್ದ ಕಮಲನಾಥ್‌ಮೊದಲಿನಿಂದಲೂ ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದರು. ಈಗ ಕಮಲನಾಥ್‌ ಅವರಿಗೆ ಹೊಸ ಜವಾಬ್ದಾರಿಯನ್ನು ಇಂದಿರಾಗಾಂಧಿ ಅವರ ಮೊಮ್ಮಗ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ್ದಾರೆ.

ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಾಗಿದ್ದರು. ಕಿರಿ–ಹಿರಿಯ ನಾಯಕರ ನಡುವಿನ ಕುರ್ಚಿ ಪೈಪೋಟಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಬಳಿಕ ಶಮನ ಗೊಂಡಿತು. ಉಭಯ ನಾಯಕರನ್ನು ನವದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿ, ರಾಹುಲ್‌ ಅಂತಿಮ ನಿರ್ಧಾರ ತೆಗೆದುಕೊಂಡರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ‘ಸಂಯಮ ಮತ್ತು ಸಮಯ ಅತ್ಯಂತ ಬಲಿಷ್ಠ ಯೋಧರು’ ಎಂದು ಫೋಟೊ ಸಹಿತ ಟ್ವೀಟ್‌ ಮಾಡಿದ್ದರು.

9 ಬಾರಿ ಸಂಸದ ಕಮಲ ನಾಥ್‌

72 ವರ್ಷ ವಯಸ್ಸಿನ ಕಮಲ ನಾಥ್‌ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದು, ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಛಿಂದವಾಡಾ ಲೋಕಸಭಾ ಕ್ಷೇತ್ರದಿಂದ 9 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಮಲ್‌ ನಾಥ್‌ 2014ರಲ್ಲಿ 16ನೇ ಲೋಕಸಭೆಗೆ ಹಂಗಾಮಿ ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ್ದರು. ಅತ್ಯಂತ ಹಿರಿಯ ಸಂಸದ, ಮುಖಂಡರಾಗಿರುವ ಕಮಲ ನಾಥ್‌ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನವಹಿಸಲಿದ್ದಾರೆ.

ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಈ ವರ್ಷ ಮೇನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT