ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಮೋದಿ ಸುನಾಮಿಗೆ ಕಾಂಗ್ರೆಸ್ ತತ್ತರ

29 ಕ್ಷೇತ್ರಗಳಲ್ಲಿ 28ರಲ್ಲಿ ಬಿಜೆಪಿಗೆ ಗೆಲುವು; ರಾಜ್ಯ ಸರ್ಕಾರದ ಪದಚ್ಯುತಿಗೆ ಯತ್ನ?
Last Updated 23 ಮೇ 2019, 19:30 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದಲ್ಲಿ ‘ಮೋದಿ ಸುನಾಮಿ’ಗೆ ಕಾಂಗ್ರೆಸ್‌ ತತ್ತರಿಸಿದೆ. ಕೆಲವೇ ತಿಂಗಳ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಿದ್ದ ಕಮಲ್‌ನಾಥ್‌ ನೇತೃತ್ವದ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್‌ನ ‘ವಿಶ್ವಾಸ’ಕ್ಕೆ ಧಕ್ಕೆ ತಂದಿದೆ.

ರಾಜ್ಯದ 29ರಲ್ಲಿ 28 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಮೊದಲು ಮುಖ್ಯಮಂತ್ರಿ ಕಮಲ್‌ನಾಥ್‌ ಗೆದ್ದಿದ್ದ ಚಿಂದ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅವರ ಪುತ್ರ ನಕುಲ್‌ನಾಥ್ ಗೆದ್ದಿದ್ದಾರೆ. ಕಾಂಗ್ರೆಸ್‌ ಅಷ್ಟಕ್ಕೇ ಸಮಾಧಾನಪಡಬೇಕಾಗಿದೆ.

‘ನಾಥೂರಾಂ ಗೋಡ್ಸೆ ದೇಶಭಕ್ತ’ ಎಂಬ ಹೇಳಿಕೆಯ ಮೂಲಕ ವಿರೋಧಿಗಳಷ್ಟೇ ಅಲ್ಲ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್, ಭೋಪಾಲ್‌ ಕ್ಷೇತ್ರದಲ್ಲಿ ವಿಜಯದ ನಗೆ ಬೀರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ವಿರುದ್ಧ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.

ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸೋಲು ಕಾಂಗ್ರೆಸ್‌ಗೆ ಆಗಿರುವ ಇನ್ನೊಂದು ಆಘಾತವಾಗಿದೆ. ಇದೇ ಮೊದಲ ಬಾರಿಗೆ ಅವರು ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನ ಮುಂಚೂಣಿಯ ನಾಯಕರಾಗಿದ್ದ ಇವರ ತಂದೆ ಮಾಧವರಾವ್ ಸಿಂಧಿಯಾ ಒಮ್ಮೆಯೂ ಸೋಲು ಕಂಡಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ 14 ರ‍್ಯಾಲಿಗಳನ್ನು ನಡೆಸಿದ್ದರು. ಕಮಲ್‌ನಾಥ್‌ ನೇತೃತ್ವದ ರಾಜ್ಯ ಸರ್ಕಾರ ಕೃಷಿ ಸಾಲಮನ್ನಾ ಘೋಷಣೆ ಮಾಡಿರುವುದು, ರಾಹುಲ್‌ ಗಾಂಧಿ ಅವರ ಕನಿಷ್ಠ ಆದಾಯದ ಭರವಸೆ ಯೋಜನೆಗಳು ಜನರನ್ನು ಸೆಳೆಯಲು ವಿಫಲವಾಗಿವೆ.

ರಾಜ್ಯ ಸರ್ಕಾರಕ್ಕೆ ಧಕ್ಕೆ?: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುವುದು ಖಚಿತವಾಗುತ್ತಿದ್ದಂತೆ ಕಮಲ್‌ನಾಥ್‌ ನೇತೃತ್ವದ ಸರ್ಕಾರಕ್ಕೂ ಅಪಾಯ ಎದುರಾಗುವ ಸೂಚನೆಗಳು ಲಭಿಸಿವೆ. 230 ಸದಸ್ಯ ಬಲದ ಶಾಸನಸಭೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದು, ಇಬ್ಬರು ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಿತ್ತು. ಕೇಂದ್ರದಲ್ಲಿ ಎನ್‌ಡಿಎ ಬಂದರೆ ಪಕ್ಷೇತರ ಸದಸ್ಯರು ನಿಷ್ಠೆ ಬದಲಿಸಬಹುದು, ಕಾಂಗ್ರೆಸ್‌ನ ಕೆಲವು ಶಾಸಕರೂ ರಾಜೀನಾಮೆ ನೀಡಬಹುದು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಬಹುಮತ ಸಾಬೀತುಪಡಿಸಲು ವಿಶೇಷ ಅಧಿವೇಶನ ಕರೆಯುವಂತೆಬಿಜೆಪಿಯವರು ರಾಜ್ಯಪಾಲರಿಗೆಈಗಾಗಲೇ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಕನಿಷ್ಠ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಮಲ್‌ನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಫಲಿತಾಂಶವು ಅವರ ನಿರೀಕ್ಷೆಯ ಸಮೀಪಕ್ಕೂ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT