ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಇರಾನ್‌ ದ್ವಿಪಕ್ಷೀಯ ಬಾಂಧವ್ಯ ಹೊಸ ಮಜಲಿಗೆ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಭಾರತ ಮತ್ತು ಇರಾನ್‌ ಒಂಬತ್ತು ಒಪ್ಪಂದಗಳಿಗೆ ಸಹಿ ಹಾಕಿರುವುದು ಎರಡೂ ದೇಶಗಳ ವಾಣಿಜ್ಯ ಮತ್ತು ರಾಜತಾಂತ್ರಿಕ ಹಿತಾಸಕ್ತಿ ರಕ್ಷಣೆಗೆ ಮಹತ್ವದ ಕೊಡುಗೆ ನೀಡಲಿದೆ. ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಅವರ ಭಾರತ ಭೇಟಿ ಸಂದರ್ಭದಲ್ಲಿ ಈ ಒಪ್ಪಂದಗಳು ಏರ್ಪಟ್ಟಿವೆ. ಭದ್ರತೆ, ವಾಣಿಜ್ಯ, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ದುಪ್ಪಟ್ಟು ತೆರಿಗೆ ತಡೆಗಟ್ಟುವ ಪ್ರಸ್ತಾವಗಳು ಈ ಒಪ್ಪಂದದಲ್ಲಿ ಸೇರಿವೆ. ಎರಡೂ ದೇಶಗಳು ಸಾಂಪ್ರದಾಯಿಕ ಖರೀದಿ– ಮಾರಾಟ ವಹಿವಾಟಿನ ಆಚೆ ಬಾಂಧವ್ಯ ವೃದ್ಧಿಸಲು ಮುಂದಾಗಿರುವುದು ಮಹತ್ವದ ಹೆಜ್ಜೆಯಾಗಿದೆ. ದೀರ್ಘಾವಧಿ ಪಾಲುದಾರಿಕೆಗೂ ಈ ಒಪ್ಪಂದಗಳು ನೆರವಾಗಲಿವೆ. ತನ್ನ ವಿವಾದಾತ್ಮಕ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸೀಮಿತಗೊಳಿಸಲು ಇರಾನ್‌ ಆರು ದೇಶಗಳ ಜತೆಗೆ 2015ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಬದಲಾವಣೆ ತರಬೇಕು ಎಂದು ಅಮೆರಿಕದ ಟ್ರಂಪ್‌ ಆಡಳಿತ ಈಗ ಪಟ್ಟು ಹಿಡಿದಿದೆ. ಇದು ಇರಾನ್‌ಗೆ ಪಥ್ಯವಾಗಿಲ್ಲ. ಇತ್ತೀಚೆಗೆ ಇಸ್ರೇಲ್‌ ಜತೆಗೂ ಭಾರತ ತನ್ನ ಬಾಂಧವ್ಯವನ್ನು ವೃದ್ಧಿಸಿಕೊಂಡಿದೆ. ಅಮೆರಿಕವನ್ನು ರಾಜತಾಂತ್ರಿಕವಾಗಿ ಎದುರು ಹಾಕಿಕೊಳ್ಳುವ ಸಂಭಾವ್ಯ ಅಪಾಯದ ಹೊರತಾಗಿಯೂ ಇರಾನ್ ಜತೆ ಸಂಬಂಧ ವೃದ್ಧಿಸಲು ಭಾರತ ಮುಂದಾಗಿದೆ. ಮಧ್ಯಪ್ರಾಚ್ಯ ದೇಶಗಳ ಜತೆಗೆ ವಾಣಿಜ್ಯ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿನ ಭಾರತದ ದಿಟ್ಟ ಹೆಜ್ಜೆ ಇದಾಗಿದೆ.

ಆಯಕಟ್ಟಿನ ಸ್ಥಳದಲ್ಲಿ ಇರುವ ಚಾಬಹಾರ್‌ ಬಂದರಿನ ಮೊದಲ ಹಂತದ 18 ತಿಂಗಳ ನಿರ್ವಹಣೆಯನ್ನು ಭಾರತಕ್ಕೆ ಇರಾನ್‌ ಒಪ್ಪಿಸಿರುವುದು ಪ್ರಮುಖ ಸಂಗತಿಯಾಗಿದೆ. ಈ ವಲಯದಲ್ಲಿನ ಸೂಕ್ಷ್ಮ ಸ್ವರೂಪದ ರಾಜತಾಂತ್ರಿಕ ಬಾಂಧವ್ಯದ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ಇದರಿಂದ ಎರಡೂ ದೇಶಗಳ ವಾಣಿಜ್ಯ ಹಿತಾಸಕ್ತಿಗಳ ರಕ್ಷಣೆಯಾಗಲಿದೆ. ಈ ಬಂದರು, ಮಧ್ಯ ಏಷ್ಯಾ ದೇಶಗಳೊಂದಿಗೆ ಭಾರತ, ಆಫ್ಗಾನಿಸ್ತಾನ ಮತ್ತು ಇರಾನಿನ ವಾಣಿಜ್ಯ ವಹಿವಾಟು ಹೆಚ್ಚಿಸುವ ಮಹಾದ್ವಾರವಾಗಿ ಬಳಕೆಗೆ ಬರಲಿದೆ. ಪಾಕಿಸ್ತಾನದ ಮರ್ಜಿ ಕಾಯದೆ ಜಲಮಾರ್ಗದ ಮೂಲಕ ಪರಸ್ಪರ ಸಂಪರ್ಕ ಸಾಧಿಸಲೂ ಈ ಬಂದರು ನೆರವಾಗಲಿದೆ.

ಭಾರತ ಇದೇ ಮೊದಲ ಬಾರಿಗೆ ಇರಾನ್‌ನಲ್ಲಿ ರೂಪಾಯಿ ರೂಪದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇರಾನ್‌, ತೈಲ ಆಮದಿಗೆ ಹಣ ಪಾವತಿ ನಿಯಮಗಳನ್ನು ಸಡಿಲಿಸಲಿದೆ. ಈ ಸೌಲಭ್ಯವು ಇದುವರೆಗೆ ಭೂತಾನ್‌ ಮತ್ತು ನೇಪಾಳಕ್ಕೆ ಮಾತ್ರ ಅನ್ವಯ ಆಗುತ್ತಿತ್ತು. ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಮತ್ತಿತರ ಸರಕುಗಳಿಗೆ ಪಾವತಿಸುವ ಮೊತ್ತ ಭಾರತದ ಬ್ಯಾಂಕ್‌ಗಳಲ್ಲಿಯೇ ಇರಲಿದೆ. ಆನಂತರ ಅದನ್ನು ಇರಾನ್‌ಗೆ ವರ್ಗಾಯಿಸಲಾಗುವುದು. ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ (ವಿದೇಶಿ ಕರೆನ್ಸಿಗಳ ರೂಪದಲ್ಲಿ) ಈ ಹಣ ಇರಿಸಿದ್ದರೆ, ಇರಾನಿನ ವಾಣಿಜ್ಯ ಸಂಸ್ಥೆಗಳ ಮೇಲೆ ಅಮೆರಿಕವು ಮತ್ತೆ ದಿಗ್ಬಂಧನ ವಿಧಿಸಿದರೆ ಆ ಮೊತ್ತ ಇರಾನ್‌ಗೆ ಸಕಾಲದಲ್ಲಿ ವರ್ಗಾವಣೆಯಾಗುತ್ತಿರಲಿಲ್ಲ. ಈಗ ಈ ಗೋಜಲಿನ ಗೊಡವೆಯೇ ಇಲ್ಲದೇ ಎರಡೂ ದೇಶಗಳು ಸುಲಭವಾಗಿ  ಹೂಡಿಕೆ ಮತ್ತು ಹಣ ಪಾವತಿಸಬಹುದಾಗಿದೆ. ಇರಾನ್ ಮೇಲೆ ಅಮೆರಿಕವು ವಿಧಿಸಬಹುದಾದ ಸಂಭವನೀಯ ಆರ್ಥಿಕ ದಿಗ್ಬಂಧನಗಳಿಂದ ಬಂದರು, ರೈಲ್ವೆ ಜಾಲ ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿನ ಭಾರತದ ಬಂಡವಾಳ ಹೂಡಿಕೆಗೂ ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಭಾರತದ ರೂಪಾಯಿಗಳಲ್ಲಿನ ಹೂಡಿಕೆಯು ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಇರಾನ್‌ ಕರೆನ್ಸಿ ರಿಯಾಲ್‌ಗೆ ಪರಿವರ್ತನೆಯಾಗಲಿದೆ. ಎರಡೂ ದೇಶಗಳ ಮಧ್ಯೆ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಿರುವ ಲೋಪ ದೋಷ ನಿವಾರಣೆಗೆ ಪರಿಣತರ ತಂಡ ರಚಿಸಲೂ ನಿರ್ಧರಿಸಲಾಗಿದೆ. ಈ ಮಧ್ಯೆ ಫರ್ಜಾದ್‌–ಬಿ ಅನಿಲ ನಿಕ್ಷೇಪದ ಬಗ್ಗೆ ಒಪ್ಪಂದದಲ್ಲಿ ಉಲ್ಲೇಖ ಇಲ್ಲದಿರುವುದು ಭಾರತದ ಮಟ್ಟಿಗೆ ಕೊಂಚ ನಿರಾಶೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT