ಗುರುವಾರ , ಜೂನ್ 24, 2021
21 °C
ಮಹಾರಾಷ್ಟ್ರ ಪೊಲೀಸರ ಕೆಂಗಣ್ಣಿಗೆ ಗುರಿಯಾದ ಯುವಕ

ಮುನಿಸಿಕೊಂಡಿದ್ದ ಗೆಳತಿಯ ಒಲಿಸಿಕೊಳ್ಳಲು 300 ಬ್ಯಾನರ್ ಹಾಕಿದ ಭೂಪ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ:  ಮುನಿಸಿಕೊಂಡಿದ್ದ ಗೆಳತಿಯನ್ನು ಒಲಿಸಿಕೊಳ್ಳಲು ಏನೇನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಹೊಸ ನಿರ್ದಶನವಿದೆ. ಗೆಳತಿಯ ಕ್ಷಮೆ ಕೋರಿ ಪ್ರತಿಷ್ಠಿತ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬ್ಯಾನರ್‌ ಹಾಗೂ ಹೋರ್ಡಿಂಗ್‌ಗಳನ್ನು ಅಳವಡಿಸಿದ್ದ ಯುವಕನೊಬ್ಬ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಇಲ್ಲಿಗೆ ಸಮೀಪದ ಪಿಂಪ್ರಿ ಚಿಂಚ್‌ವಾಡದ ಪಿಂಪಲ್ ಸೌದಾಗರ್‌ ಎಂಬಲ್ಲಿನ ಜನ ಶುಕ್ರವಾರ ಬೆಳಿಗ್ಗೆ ಎದ್ದು ನೋಡಿದಾಗ ಎಲ್ಲೆಂದರಲ್ಲಿ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಅವುಗಳಲ್ಲಿ ‘ಯುವತಿಯ ಹೆಸರು’ ಬರೆದು, ಅದರ ಕೆಳಗೆ ಇಂಗ್ಲಿಷ್‌ನಲ್ಲಿ ‘ಐ ಆ್ಯಮ್ ಸಾರಿ’ ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಅಲ್ಲದೆ, ಅದರ ಪಕ್ಕದಲ್ಲಿ ಹೃದಯದ ಚಿಹ್ನೆಯನ್ನೂ ದೊಡ್ಡದಾಗಿ ಕೆಂ‍ಪು ಬಣ್ಣದಲ್ಲಿ ಚಿತ್ರಿಸಲಾಗಿತ್ತು. ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ಹೆಚ್ಚಿನ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಸ್ಥಳೀಯ ಉದ್ಯಮಿ ನೀಲೇಶ್‌ ಖೇಡೇಕರ್ (25) ಈ ಬ್ಯಾನರ್‌ಗಳನ್ನು ಹಾಕಿಸಿದ್ದ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು, ಅಕ್ರಮ ಹೋರ್ಡಿಂಗ್ ಮತ್ತು ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ನಗರಾಡಳಿತಕ್ಕೆ ತಿಳಿಸಿದರು.

‘ಖೇಡೇಕರ್‌ಗೆ ಹೋರ್ಡಿಂಗ್‌ಗಳನ್ನು ಮುದ್ರಿಸಲು ನೆರವು ನೀಡಿದ ಗೆಳೆಯ ವಿಲಾಸ್ ಶಿಂಧೆಯನ್ನು ಮೊದಲು ಪತ್ತೆ ಹಚ್ಚಿದೆವು. ಬಳಿಕ ಆತನ ನೆರವಿನಿಂದ ಈ ‘ಸೃಜನಾತ್ಮಕ’ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ ಖೇಡೇಕರ್‌ನನ್ನು ಪತ್ತೆ ಮಾಡಿದೆವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈಗೆ ಹೋಗಿದ್ದ ಯುವತಿ ಶುಕ್ರವಾರ ಇಲ್ಲಿಗೆ ಬರುವುದು ಖೇಡೇಕರ್‌ಗೆ ತಿಳಿದಿತ್ತು. ಹೀಗಾಗಿ ಆಕೆ ಬರುವ ಮಾರ್ಗದಲ್ಲಿ ಎದ್ದು ಕಾಣುವಂತೆ, ₹ 72 ಸಾವಿರ ಖರ್ಚು ಮಾಡಿ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಇದೀಗ ಖೇಡೇಕರ್‌ ವಿರುದ್ಧ ಕ್ರಮ ಕೈಗೊಳ್ಳುವುದೋ ಬೇಡವೋ ಎಂಬುದನ್ನು ನಗರಾಡಳಿತ ನಿರ್ಧರಿಸಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು