ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿಚ್ಚಳ

Last Updated 15 ನವೆಂಬರ್ 2019, 21:28 IST
ಅಕ್ಷರ ಗಾತ್ರ

ನಾಗಪುರ/ಮುಂಬೈ: ಮಹಾರಾಷ್ಟ್ರದ ರಾಜಕಾರಣವು ಹೊಸ ಮೈತ್ರಿಕೂಟದತ್ತ ಹೊರಳುತ್ತಿರುವುದು ನಿಚ್ಚಳವಾಗಿದೆ. ಶಿವಸೇನಾ ಮತ್ತು ಎನ್‌ಸಿಪಿ– ಕಾಂಗ್ರೆಸ್‌ ಒಟ್ಟಾಗಿ ಸರ್ಕಾರ ರಚನೆಗೆ ಮುಂದಾಗಿದ್ದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗಿದೆ.

‘ಶಿವಸೇನಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಈ ಸರ್ಕಾರ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಲಿದೆ. ಮಧ್ಯಂತರ ಚುನಾವಣೆಗೆ ಅವಕಾಶ ಇರುವುದಿಲ್ಲ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಶುಕ್ರವಾರ ಹೇಳಿದರು. ನಾಗಪುರದಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಆಧರಿತ ಸ್ಥಿರ ಸರ್ಕಾರ ನೀಡಲು ಮೂರೂ ಪಕ್ಷಗಳು ಬಯಸಿವೆ’ ಎಂದರು.

ಹೊಸ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾಕ್ಕೆ ನೀಡಲಾಗುವುದು ಎಂದು ಎನ್‌ಸಿಪಿಯ ವಕ್ತಾರ ನವಾಬ್‌ ಮಲಿಕ್‌ ಮುಂಬೈಯಲ್ಲಿ ತಿಳಿಸಿದರು. ‘ಮುಖ್ಯಮಂತ್ರಿ ಹುದ್ದೆಯ ಕಾರಣಕ್ಕಾಗಿಯೇ ಶಿವಸೇನಾ, ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದೆ. ಅವರ ಭಾವನೆಯನ್ನು ಗೌರವಿಸುವುದು ನಮ್ಮ ಕರ್ತವ್ಯ’ ಎಂದರು.

ಮೂರೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ಸಿದ್ಧವಾಗಿದೆ. ಅದನ್ನು ಪಕ್ಷದ ನಾಯಕರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರನ್ನು ಶನಿವಾರ ಭೇಟಿಮಾಡಿ, ಅತಿವೃಷ್ಟಿಯಿಂದ ಹಾನಿ ಅನುಭವಿಸಿರುವ ರೈತರಿಗೆ ತುರ್ತಾಗಿ ಪರಿಹಾರ ವಿತರಿಸುವಂತೆ ಮನವಿ ಮಾಡಲಾಗುವುದು ಎಂದು ಈಪಕ್ಷಗಳು ಹೇಳಿಕೊಂಡಿವೆ.

ಭಾನುವಾರ (ನ. 17) ಪವಾರ್‌ ಅವರು ಸೋನಿಯಾಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಮಾಡಲಿದ್ದು, ಸರ್ಕಾರ ರಚನೆಯ ಅಂತಿಮ ತೀರ್ಮಾನವನ್ನು ಆ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.

ಬಿಜೆಪಿ ಸರ್ಕಾರ ಶೀಘ್ರ: ಪಾಟೀಲ್‌
‘ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬಿಜೆಪಿಯು ಸರ್ಕಾರ ರಚಿಸಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ ಪಾಟೀಲ್‌ ಶುಕ್ರವಾರ ಹೇಳಿದರು.

‘ನಾವು 105 ಸ್ಥಾನಗಳನ್ನು ಪಡೆದಿದ್ದೇವೆ. ಕೆಲವು ಪಕ್ಷೇತರ ಶಾಸಕರ ಬೆಂಬಲವೂ ಲಭಿಸಿದ್ದು, ಈಗ ನಮ್ಮ ಒಟ್ಟಾರೆ ಸಂಖ್ಯಾಬಲ 119 ಇದೆ. ರಾಜ್ಯದ ಪ್ರತಿಯೊಂದು ರಾಜಕೀಯ ಬೆಳವಣಿಗೆಯ ಮೇಲೂ ನಾವು ಕಣ್ಣಿಟ್ಟಿದ್ದೇವೆ. ಶೀಘ್ರವೇ ನಾವು ಸರ್ಕಾರ ರಚಿಸುತ್ತೇವೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT