ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ‘ಮಹಾ’ ಗೆಲುವಿನ ವಿಶ್ವಾಸ

Last Updated 17 ಅಕ್ಟೋಬರ್ 2019, 9:55 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನಾ ಹೇಳಿವೆ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವುದೂ ಈ ಮೈತ್ರಿಕೂಟಕ್ಕೆ. ವಿರೋಧಿ ಪಾಳಯದಿಂದ ಪ್ರಮುಖ ನಾಯಕರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿಯು, ಚುನಾವಣೆಗೂ ಮುನ್ನವೇ ಎದುರಾಳಿಗಳನ್ನು ದುರ್ಬಲಗೊಳಿಸುವ ಪಟ್ಟು ಹಾಕಿದೆ.

ಚುನಾವಣೆ ಘೋಷಣೆ ಆಗುವ ಮುನ್ನವೇ ಎಲ್ಲಾ ಪಕ್ಷಗಳೂ ಭಾರಿ ಸಿದ್ಧತೆ ನಡೆಸಿದ್ದವು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿ ರಚಿಸಿಕೊಂಡು ಈಗಾಗಲೇ ಕ್ಷೇತ್ರಗಳನ್ನು ಹಂಚಿಕೊಂಡಿವೆ.

ಒಟ್ಟಿಗೇ ಚುನಾವಣೆ ಎದುರಿಸಲುಬಿಜೆಪಿ ಮತ್ತು ಶಿವಸೇನಾ ಒಪ್ಪಿಕೊಂಡಿವೆ. ಆದರೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಈವರೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ಇತ್ಯರ್ಥಪಡಿಸುವ ಸಲುವಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಮುಂಬೈಗೆ ಬರಲಿದ್ದಾರೆ. ಅವರೊಂದಿಗೆ ನಡೆಸಲಿರುವ ಸಭೆಯಲ್ಲಿ ಸೀಟು ಮತ್ತು ಕ್ಷೇತ್ರ ಹಂಚಿಕೆ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ರಚಿಸಿಕೊಂಡಿದ್ದ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಗಾದಿ ಮತ್ತು ಅಸಾದುದ್ದೀನ್ ಓವೈಸಿ ಅವರಎಐಎಂಐಎಂ, ಈ ಬಾರಿ ದೂರ ಉಳಿದಿವೆ. ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಸಾಧ್ಯತೆ ಅಧಿಕವಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಸಾರ್ವಜನಿಕ ಸಭೆಗಳನ್ನು ನಡೆಸಿರುವ ರಾಜ್‌ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾವು (ಎಂಎನ್‌ಎಸ್‌) ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಚುನಾವಣೆಗೆ ಪಕ್ಷವು ಭಾರಿ ಸಿದ್ಧತೆ ನಡೆಸಿದೆ. ಆದರೆ ಎರಡು ಪ್ರಬಲ ಮೈತ್ರಿಕೂಟಗಳು (ಬಿಜೆಪಿ–ಶಿವಸೇನಾ ಮತ್ತು ಕಾಂಗ್ರೆಸ್‌–ಎನ್‌ಸಿಪಿ) ಕಣದಲ್ಲಿ ಇರುವುದರಿಂದ ಎಂಎನ್‌ಎಸ್‌ ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು.

ಚುನಾವಣಾ ವಿಷಯಗಳು

* ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ನಡೆಸುತ್ತಿದೆ. ಫಡಣವೀಸ್ ಅವರನ್ನು ಅಭಿವೃದ್ಧಿಯ ಹರಿಕಾರ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಫಡಣವೀಸ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮುಂಬೈ ಮೆಟ್ರೊ ರೈಲು ಯೋಜನೆ, ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯಂತಹ ಅಂಶಗಳನ್ನು ಆಧರಿಸಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿದೆ

* ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ತೆಗೆದುಹಾಕಿದ್ದು, ಸೇನೆಯ ಆಧುನೀಕರಣ ಮತ್ತು ಎನ್‌ಆರ್‌ಸಿಯನ್ನೂ ಬಿಜೆಪಿ ಈ ಚುನಾವಣೆಗೆ ಬಳಸಿಕೊಳ್ಳಲಿದೆ. ಬಿಜೆಪಿ ನಾಯಕರ ಈವರೆಗಿನ ಮಾತುಗಳು ಇದನ್ನು ಸ್ಪಷ್ಟಪಡಿಸಿದೆ

* ಮರಾಠಿ ಭಾಷೆ ಮತ್ತು ಅಯೋಧ್ಯೆಯ ರಾಮಮಂದಿರ ನಿರ್ಮಾಣದ ವಿಚಾರಕ್ಕೇ ಶಿವಸೇನಾ ತೆಕ್ಕೆಬಿದ್ದಿದೆ. ಆದರೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಕಾರಣ, ಶಿವಸೇನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ

* ಕಾಂಗ್ರೆಸ್‌ ಮತ್ತು ಎನ್‌ಸಿಪಿಯಿಂದ ಹಲವು ಪ್ರಮುಖ ನಾಯಕರು ಬಿಜೆಪಿಗೆ ಹೋಗಿದ್ದಾರೆ. ಇದರಿಂದ ಈ ಎರಡೂ ಪಕ್ಷಗಳು ದುರ್ಬಲವಾಗಿವೆ. ಹೀಗಾಗಿ ಎರಡೂ ಪಕ್ಷಗಳ ಎಲ್ಲಾ ಪ್ರಮುಖ ನಾಯಕರು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಅಧಿಕವಾಗಿದೆ

* ಆರ್ಥಿಕ ಹಿಂಜರಿತ, ನಿರುದ್ಯೋಗ, ಪ್ರವಾಹ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವನ್ನು ಆಧಾರವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸಿದ್ಧತೆ ನಡೆಸಿವೆ

* ಬರ, ರೈತರ ಆತ್ಮಹತ್ಯೆ ಮತ್ತು ಪ್ರವಾಹ ವಿಷಯಗಳು ಆಡಳಿತ ಪಕ್ಷಗಳಿಗೆ ಮುಳುವಾಗುವ ಸಾಧ್ಯತೆ ಇದೆ. ಆದರೆ ಇದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂಬ ವಿಶ್ವಾಸವನ್ನು ಬಿಜೆಪಿ ಮತ್ತು ಶಿವಸೇನಾ ವ್ಯಕ್ತಪಡಿಸಿವೆ.

**

ದೀಪಾವಳಿಗೂ ಮುನ್ನವೇ ಎನ್‌ಡಿಎ ಮೈತ್ರಿಕೂಟವು ಪಟಾಕಿಗಳನ್ನು ಸಿಡಿಸಲಿದೆ. ಚುನಾವಣೆಗೆ ಅಗತ್ಯವಿದ್ದ ಎಲ್ಲಾ ಸ್ವರೂಪದ ಸಿದ್ಧತೆಗಳನ್ನೂ ಅಂತಿಮಗೊಳಿಸಿದ್ದೇವೆ
- ಸಂಜಯ್ ರಾವತ್, ಶಿವಸೇನಾ ವಕ್ತಾರ

**

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ. ಈ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಬದಲಾವಣೆಯಾಗಲಿದೆ
- ನವಾಬ್ ಮಲಿಕ್, ಎನ್‌ಸಿಪಿ ವಕ್ತಾರ

**

ವಿರೋಧ ಪಕ್ಷಗಳನ್ನು ಮುಗಿಸುವ ಉದ್ದೇಶದಿಂದ ಆಡಳಿತ ಪಕ್ಷವು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ದನಿ ಎತ್ತಲಿದೆ, ಹೋರಾಡಲಿದೆ
- ಪೃಥ್ವಿರಾಜ್ ಚವಾಣ್,ಕಾಂಗ್ರೆಸ್ ನಾಯಕ

**

ಚುನಾವಣೆಯನ್ನು ಸ್ವಾಗತಿಸುತ್ತೇನೆ. ರಾಜ್ಯದ ಪ್ರತಿ ಮತದಾರರೂ ಮತದಾನ ಮಾಡಿ. ಅಭಿವೃದ್ಧಿಯ ಪಥದಲ್ಲಿ ನಿಮ್ಮ ಪ್ರತಿಯೊಂದು ಮತಕ್ಕೂ ಮಹತ್ವವಿದೆ
- ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT