ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ಸರ್ಕಾರ: ಚಟುವಟಿಕೆ ಚುರುಕು

ಸಾಮಾನ್ಯ ಕನಿಷ್ಠ ಕಾರ್ಯಕ್ರಮ: ಸೇನಾ– ಎನ್‌ಸಿಪಿ– ಕಾಂಗ್ರೆಸ್‌ ಚರ್ಚೆ
Last Updated 13 ನವೆಂಬರ್ 2019, 21:01 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸುವ ಸಂಬಂಧ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ಮರುದಿನವೇ ಬಿರುಸಿನ ಚರ್ಚೆಗಳು ನಡೆದವು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮುಖಂಡರ ಜತೆ ಬುಧವಾರ ಮುಂಜಾನೆ ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ‘ಸರ್ಕಾರ ರಚನೆ ಸಂಬಂಧ ಮಾತುಕತೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ’ ಎಂದು ಉದ್ಧವ್ ಹೇಳಿದರು.

ಉದ್ಧವ್ ಜತೆಗಿನ ಸಭೆ ಸಕಾರಾತ್ಮಕ ಹೆಜ್ಜೆಯಾಗಿತ್ತು ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಹಿರಿಯ ಮುಖಂಡ ಮಾಣಿಕರಾವ್ ಠಾಕ್ರೆ ಅವರ ಜೊತೆಗೂ ಉದ್ಧವ್ ಅವರು ಮಾತುಕತೆ ನಡೆಸಿದರು.

ಈ ಮಧ್ಯೆ ಐವರು ಸದಸ್ಯರ ಸಮಿತಿಯನ್ನು ಎನ್‌ಸಿಪಿ ರಚಿಸಿದೆ. ಈ ಸಮಿತಿಯು ಕಾಂಗ್ರೆಸ್‌ ಜೊತೆ ಸೇರಿ ರಚನೆಯಾಗಲಿರುವ ಜಂಟಿ ಸಮಿತಿಯ ಭಾಗವಾಗಿದ್ದು, ಶಿವಸೇನಾ ಜೊತೆ ಸಂಭಾವ್ಯ ಮೈತ್ರಿಗೂ ಮುನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ನಿರ್ಧರಿಸಲಿದೆ.

ಈ ಸಮಿತಿಯಲ್ಲಿ ಅಜಿತ್ ಪವಾರ್, ಜಯಂತ್ ಪಾಟೀಲ್, ಛಗನ್ ಭುಜ್‌ಬಲ್, ನವಾಬ್ ಮಲಿಕ್ ಹಾಗೂ ಧನಂಜಯ ಮುಂಢೆ ಇದ್ದಾರೆ.

ಅಧಿಕಾರ ಹಂಚಿಕೆ ಕುರಿತಂತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎನ್‌ಸಿಪಿ ರಾಜ್ಯ ಘಟಕದ ಮುಖ್ಯಸ್ಥ ಪಾಟೀಲ್ ತಿಳಿಸಿದರು. ‘ಸೇನಾ ಎದುರು ಯಾವುದೇ ಷರತ್ತುಗಳನ್ನು ಹಾಕಿಲ್ಲ. ಆಡಳಿತದ ಕಾರ್ಯಸೂಚಿ ನಿರ್ಧರಿಸುವ ಕೆಲಸದಲ್ಲಿ ತೊಡಗಿದ್ದೇವೆ. ಶಿವಸೇನಾ ಸಂಸದ ಅರವಿಂದ್ ಸಾವಂತ್ ಅವರು ಕೇಂದ್ರ ಸಂಪುಟದಿಂದ ಹೊರಬಂದಿದ್ದು, ಇದು ಎನ್‌ಡಿಎ ಮೈತ್ರಿಕೂಟದಿಂದ ಶಿವಸೇನಾ ಅಧಿಕೃತವಾಗಿ ಹೊರಬಂದಿದೆ ಎಂಬುದರ ಸೂಚಕವೆಂದು ನಾವು ಭಾವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಅಧಿಕಾರ ಹಂಚಿಕೆ ಸೂತ್ರ ಇನ್ನೂ ಚರ್ಚಿತವಾಗಿಲ್ಲ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಪೃಥ್ವಿರಾಜ್ ಚವಾಣ್‌, ಸಂಭಾವ್ಯ ‘ಆಪರೇಷನ್ ಕಮಲ’ಕ್ಕೆ ಶಾಸಕರು ಒಳಗಾಗದಂತೆ ತಡೆಯೊಡ್ಡಲು ಕಾಂಗ್ರೆಸ್ ಎಚ್ಚರಿಕೆಯಿಂದ ಇದೆ ಎಂದಿದ್ದಾರೆ.

5 ದಿನಗಳಿಂದ ಜೈಪುರದ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ನ ಶಾಸಕರು ಮುಂಬೈಗೆ ಬುಧವಾರ ವಾಪಸಾಗಿದ್ದಾರೆ.

ಸರ್ಕಾರ ರಚನೆ ಸೂತ್ರದಲ್ಲಿ ಏನಿದೆ?
ಶಿವಸೇನಾ–ಎನ್‌ಸಿಪಿ ನಡುವೆ ಮುಖ್ಯಮಂತ್ರಿ ಹುದ್ದೆ ಹಂಚಿಕೆಯಾಗಲಿದೆ. ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಹಾಗೂ ವಿಧಾನಸಭೆ ಸ್ಪೀಕರ್ ಹುದ್ದೆ ಸಿಗುವ ಸಂಭವವಿದೆ ಎಂಬ ಮಾತು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT