ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ‘ಮಹಾಮೈತ್ರಿ’ಯಲ್ಲಿ ಅಪಸ್ವರ

ಚುನಾವಣೆಗೂ ಮುನ್ನವೇ ಸೀಟು ಹಂಚಿಕೆಯಲ್ಲಿ ಭಿನ್ನಮತ
Last Updated 30 ಡಿಸೆಂಬರ್ 2018, 4:19 IST
ಅಕ್ಷರ ಗಾತ್ರ

ಪಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಹೇಗಾದರೂ ಸೋಲಿಸಲೇಬೇಕು ಎಂದು ಪಣ ತೊಟ್ಟು ರಚಿಸಿಕೊಂಡಿರುವ ಮಹಾಮೈತ್ರಿಯಲ್ಲಿ ಸೀಟು ಹಂಚಿಕೆ ಕುರಿತು ಚುನಾವಣೆಗೂ ಮುನ್ನವೇ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಮಹಾಮೈತ್ರಿಕೂಟ ಬಿಹಾರದ ಒಟ್ಟಾರೆ ಮತಗಳ ಪೈಕಿ ಶೇ 50 ರಷ್ಟು ಮತ ಪಡೆಯುವ ಲಕ್ಷಣ ಕಾಣುತ್ತಿದೆ. ಆದರೆ ನ್ಯಾಯಸಮ್ಮತವಲ್ಲದ ಬೇಡಿಕೆಗಳನ್ನು ಮುಂದಿಡುವ ಮೂಲಕ ‘ಮಹಾಘಟಬಂಧನ್‌’ದಲ್ಲಿ ಮಹಾಭಾರತ ಪರಿಸ್ಥಿತಿ ನಿರ್ಮಾಣ ಆಗಿದೆ.ಪರಸ್ಪರರ ನಡುವೆ ಭಿನ್ನಾಭಿಪ್ರಾಯ ತಲೆದೂರಿವೆ.

‘ಬಿಹಾರದಲ್ಲಿ ಒಟ್ಟು 40 ಲೋಕಸಭೆ ಕ್ಷೇತ್ರಗಳಿದ್ದು, ದಲಿತರು ಮತ್ತು ಮಹಾರ್‌ (ಮಹಾದಲಿತರು) ಹೆಚ್ಚಿರುವ 20 ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಬೇಕು’ ಎಂದು ಹಿಂದೂಸ್ತಾನ್‌ ಆವಾಂ ಮೋರ್ಚಾ ಅಧ್ಯಕ್ಷ (ಎಚ್‌ಎಎಂ) ಹಾಗೂ ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಬೇಡಿಕೆ ಇಟ್ಟಿದ್ದಾರೆ.

ಸಂಸತ್‌ನ ಉಭಯ ಸದನಗಳಲ್ಲಿ ಎಚ್‌ಎಎಂ ಪಕ್ಷದ ಯಾವೊಬ್ಬ ಸದಸ್ಯರೂ ಇಲ್ಲ. ಹೀಗಾಗಿಏಕೈಕ ಶಾಸಕರಾಗಿರುವ ಮಾಂಝಿ ಅವರ ಬೇಡಿಕೆ ನ್ಯಾಯಸಮ್ಮತವಲ್ಲ ಎಂದು ಪಾಲುದಾರ ಪಕ್ಷಗಳು ಆಕ್ಷೇಪ
ವ್ಯಕ್ತಪಡಿಸಿವೆ.

ಶರದ್‌ ಬಿಗಿಪಟ್ಟು: ಕಾಂಗ್ರೆಸ್‌ ಇಕ್ಕಟ್ಟು ಶರದ್‌ ಯಾದವ್‌ ನೇತೃತ್ವದ ಲೋಕತಾಂತ್ರಿಕ ಜನತಾ ದಳ (ಎಲ್‌ಜೆಡಿ) ಮಾಧೇಪುರ ಕ್ಷೇತ್ರ ಸೇರಿದಂತೆ ಮೂರು ಸೀಟುಗಳನ್ನು ನೀಡಬೇಕು ಎಂದು ಪಟ್ಟು ಹಿಡಿದಿದೆ. ಈ ಭಾಗದಲ್ಲಿ ಶರದ್‌ ಯಾದವ್‌ ಅವರ ಸ್ಥಿತಿ ಹೇಗಿದೆ ಎಂಬುದನ್ನು ಅರಿತಿರುವ ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೌನ ವಹಿಸಿವೆ.

ಆರ್‌ಜೆಡಿ–ಎಡಪಕ್ಷ ಹಟ: ಸಿವಾನ್‌ ಕ್ಷೇತ್ರದಲ್ಲಿ ಆರ್‌ಜೆಡಿ ಜೊತೆಗೆ ನೇರ ಸಂಘರ್ಷ ನಡೆಸಿಕೊಂಡು ಬಂದಿರುವಸಿಪಿಐ (ಎಂಎಲ್‌), ಈಗ ಈ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ.

ಜೈಲಿನಲ್ಲಿರುವ ಮಾಜಿ ಸಂಸದ ಮೊಹಮ್ಮದ್‌ ಶಹಾಬುದ್ದೀನ್‌ ಈ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಶಹಾಬುದ್ದೀನ್‌ ಅವರನ್ನು ಟೀಕಿಸುತ್ತ ಬಂದಿರುವ ಸಿಪಿಐ (ಎಂಎಲ್‌)ಗೆ ಈ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಆರ್‌ಜೆಡಿ, ಶಹಾಬುದ್ದೀನ್‌ ಅವರ ಪತ್ನಿ ಹೀನಾ ಶಹಾಬ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಕಾರಕಟ್‌ ಕ್ಷೇತ್ರದಲ್ಲೂ ಸಂಘರ್ಷ ನಡೆಯುವ ಚಿತ್ರಣ ಕಂಡುಬರುತ್ತಿದೆ. ಆರ್‌ಜೆಡಿ ಹಿರಿಯ ನಾಯಕ ಕಾಂತಿ ಸಿಂಗ್‌ ಅವರನ್ನು ಸೋಲಿಸಿದ್ದ ಆರ್‌ಎಲ್‌ಎಸ್‌ಪಿಯ ಉಪೇಂದ್ರ ಕುಶ್ವಾಹ ವಿಶ್ವಾಸಾರ್ಹತೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.

ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ, ಪ್ರಧಾನಿ ಮೋದಿ ಅವರನ್ನು ಟೀಕಿಸಿ, ಹೊರ ಬಂದಿರುವ ಕುಶ್ವಾಹ, ಮಹಾಮೈತ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಎನ್‌ಡಿಎದಿಂದ ಎಲ್ಲವನ್ನೂ ಪಡೆದು, ನಂತರ ಅವರಿಗೆ ತಿರುಗಿ ಬಿದ್ದಿರುವ ಕುಶ್ವಾಹ ಅವರ ಬಗ್ಗೆ ವಿಶ್ವಾಸವಿಲ್ಲ. ಅವರ ಬೇಡಿಕೆ ಈಡೇರಲು ಸಾಧ್ಯವಿಲ್ಲ ಎಂದು ಕಾಂತಿ ಸಿಂಗ್‌ ಅವರ ಬೆಂಬಲಿಗರು ಹೇಳುತ್ತಾರೆ.

ಬೇಗುಸರಾಯ್‌ ಬಿಸಿತುಪ್ಪ: ಬೇಗುಸರಾಯ್‌ ಕ್ಷೇತ್ರ ಕುರಿತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ವಿಳಂಬ ಧೋರಣೆಗೆ ಸಿಪಿಐ ಅಸಮಾಧಾನ ವ್ಯಕ್ತಪಡಿಸಿದೆ. ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಿಪಿಐ ನಿರ್ಧರಿಸಿದೆ. ಆದರೆ, ಆರ್‌ಜೆಡಿ ಈ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. 2014ರ ಚುನಾವಣೆಯಲ್ಲಿ 50,000 ಮತಗಳ ಅಂತರದಿಂದ ಸೋತ ತನ್ವೀರ್‌ ಹಸನ್‌ ಅವರನ್ನೇ ಕಣಕ್ಕಿಳಿಸಲು ಆರ್‌ಜೆಡಿ ಮುಂದಾಗಿದೆ.

‘ನಮ್ಮ ಮುಖ್ಯ ಉದ್ದೇಶ ಎನ್‌ಡಿಎ ಸೋಲಿಸುವುದು. ಹೀಗಾಗಿ ವೈಯಕ್ತಿಕ ಆಕಾಂಕ್ಷೆಗಳನ್ನು ಪಕ್ಕಕ್ಕೆ ಇಡಬೇಕು. ಗೆಲ್ಲುವ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು. ಆಯಾ ಕ್ಷೇತ್ರದಲ್ಲಿ ಬಿಗಿಹಿಡಿತ ಹೊಂದಿರುವ ಮಹಾಮೈತ್ರಿಯಲ್ಲಿರುವವರಿಗೆ ಆದ್ಯತೆ ನೀಡಲಾಗುವುದು’ ಎಂದು ತೇಜಸ್ವಿ ಯಾದವ್‌
ಹೇಳಿದ್ದಾರೆ.

‘ಗೆಲ್ಲುವ ಅರ್ಹತೆಯ ಆಧಾರದ ಮೇಲೆ ಸೀಟು ಹಂಚಿಕೆ ನಿರ್ಧಾರ ಮಾಡಲಾಗುವುದು. ಅಗತ್ಯ ಬಿದ್ದರೆ ಕೆಲವು ಸೀಟುಗಳನ್ನು ಪಾಲುದಾರು ಪಕ್ಷಗಳಿಗೆ ಬಿಟ್ಟು ಕೊಡಲಾಗುವುದು’ ಎಂದು ಕಾಂಗ್ರೆಸ್‌ ಪಕ್ಷದ ಬಿಹಾರ ಉಸ್ತುವಾರಿ ಶಕ್ತಿ ಸಿನ್ಹಾ ಗೋಹಿಲ್‌ ಹೇಳಿದ್ದಾರೆ.

ಪಾಲುದಾರ ಪಕ್ಷಗಳು

* ಕಾಂಗ್ರೆಸ್‌

* ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ

* ಜೀತನ್‌ ರಾಂ ಮಾಂಝಿ ಅವರ ಎಚ್‌ಎಎಂ

* ಶರದ್‌ ಯಾದವ್‌ ನೇತೃತ್ವದ ಎಲ್‌ಜೆಡಿ

* ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿ

* ಸಿಪಿಐ

* ಸಿಪಿಎಂ

* ಸಿಪಿಐ–ಎಂಎಲ್‌

* ಮುಕೇಶ್‌ ಸಾಹ್ನಿ ಅವರ ವಿಐಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT