ಮಲಪ್ರಭಾಗೆ ನೀರು: ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

7
ಕಳಸಾ ನಾಲೆಯಿಂದ ಮಲಪ್ರಭಾಗೆ ನೀರು:

ಮಲಪ್ರಭಾಗೆ ನೀರು: ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

Published:
Updated:

ನವದೆಹಲಿ: ಕಳಸಾ ನಾಲೆಯಿಂದ ಮಲಪ್ರಭಾ ನದಿಗೆ ನೀರು ಹರಿಯದಂತೆ ತಡೆಗೋಡೆ ನಿರ್ಮಿಸಬೇಕು ಎಂಬ ಮಧ್ಯಂತರ ಆದೇಶವನ್ನು ಕರ್ನಾಟಕ ಉಲ್ಲಂಘಿಸಿದೆ ಎಂದು ದೂರಿ ಗೋವಾ ಸರ್ಕಾರ ಮಹದಾಯಿ ನ್ಯಾಯಮಂಡಳಿಗೆ ಶನಿವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ತಿರುವು ಯೋಜನೆಗಾಗಿ ಅಂತರ್‌ ಸಂಪರ್ಕ ಕಾಲುವೆಗಳಿಂದ ಮಹದಾಯಿ ನದಿ ನೀರು ಹರಿಸಿಕೊಳ್ಳದಂತೆ 2014ರ ಏಪ್ರಿಲ್‌ 17ರಂದು ನ್ಯಾಯಮಂಡಳಿಯು ತಡೆಯಾಜ್ಞೆ ನೀಡಿದೆ. ಈ ಆದೇಶವು ಕೇಂದರ ಸರ್ಕಾರ ಅಧಿಸೂಚನೆ ಹೊರಡಿಸುವವರೆಗೂ ಜಾರಿಯಲ್ಲಿರಲಿದೆ. ಆದರೆ, ಈ ಆದೇಶ ಪಾಲಿಸದ ರಾಜ್ಯ ಸರ್ಕಾರ ಈಗಾಗಲೇ ಮಲಪ್ರಭಾ ನದಿಯತ್ತ ನೀರನ್ನು ತಿರುಗಿಸಿಕೊಂಡಿದೆ ಎಂದು ಗೋವಾ ಪರ ವಕೀಲ ಪ್ರತಾಪ್‌ ವೇಣುಗೋಪಾಲ್‌ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ನ್ಯಾಯಮಂಡಳಿ ಆದೇಶ ಉಲ್ಲಂಘನೆಯಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳೇ ಜವಾಬ್ದಾರರಾಗಿದ್ದು, ತಪ್ಪಿತಸ್ಥರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್‌, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳನ್ನು ಬಂಧಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ಮಹದಾಯಿ ನದಿಯತ್ತ ಹರಿಯುವ ಕಳಸಾ ನಾಲೆಯು ನೈಸರ್ಗಿಕವಾಗಿ ಹರಿಯುವ ವಿರುದ್ಧ ದಿಕ್ಕಿಗೆ ತಿರುಗಿಸಿಕೊಳ್ಳಲಾಗಿದೆ. ಕಣಕುಂಬಿ ಗ್ರಾಮದ ಬಳಿ ನಿರ್ಮಿಸಲಾಗಿರುವ ತಡೆಗೋಡೆ ತೆರವುಗೊಳಿಸಿ ಮಲಪ್ರಭಾ ನದಿಯತ್ತ ನೀರನ್ನು ಹರಿಸಿಕೊಳ್ಳಲಾಗುತ್ತಿದೆ. ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಕಳೆದ ಜುಲೈ 23ರಂದು ಗಡಿ ಭಾಗದಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿವರಿಸಲಾಗಿದ್ದು, ಗೋವಾದಿಂದ ಪ್ರಕಟವಾಗಿರುವ ಕೆಲವು ಪತ್ರಿಕೆಗಳ ವರದಿಗಳನ್ನು ಅಡಕಗೊಳಿಸಲಾಗಿದೆ.

ಕೇಂದ್ರ ಸರ್ಕಾರವು ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸಿ, ಪ್ರಾಧಿಕಾರ ರಚನೆ ಆಗುವವರಗೆ ಇದುವರೆಗೆ ನೀಡಲಾದ ತನ್ನ ಎಲ್ಲ ಮಧ್ಯಂತರ ಆದೇಶಗಳು, ತಡೆಯಾಜ್ಞೆಗಳು ಜಾರಿಯಲ್ಲಿರುತ್ತವೆ ಎಂದು ಕಳೆದ ಮಂಗಳವಾರ ಪ್ರಕಟಿಸಲಾದ ಐತೀರ್ಪಿನಲ್ಲಿ ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.

ಅಲ್ಲದೆ, ತಾನು ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸುವವರಗೆ ಮಧ್ಯಂತರ ಆದೇಶಗಳು ಜಾರಿಯಲ್ಲಿರಲಿವೆ. ಕಳಸಾ ನಾಲೆಯಿಂದ ಕರ್ನಾಟಕದತ್ತ ನೀರು ತಿರುಗಿಸಲು ನಿರ್ಮಿಸುತ್ತಿರುವ ಕಾಲುವೆಯಿಂದ ನೀರನ್ನು ಹರಿಸಿಕೊಳ್ಳಕೂಡದು ಎಂದು ಐತೀರ್ಪಿನಲ್ಲಿ ಸಾರಲಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !