ಶುಕ್ರವಾರ, ಡಿಸೆಂಬರ್ 13, 2019
24 °C

‘ಮಹಾ’ ಸರ್ಕಾರ ರಚನೆಗೆ ಕೊನೇ ಕ್ಷಣದ ಕಸರತ್ತು: ಉದ್ಧವ್‌ ಮುಂದಿನ ಸಿಎಂ –ಪವಾರ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೆಸರನ್ನು ಅಂತಿಮಗೊಳಿಸಿವೆ. ರಾಜ್ಯದಲ್ಲಿ ಶೀಘ್ರವೇ ಸರ್ಕಾರ ರಚಿಸುವ ಸಂಬಂಧ ಚರ್ಚೆ ನಡೆಸಿರುವ ಮೂರೂ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳಲಿವೆ.

ಮುಂಬೈನಲ್ಲಿರುವ ನೆಹರೂ ಕೇಂದ್ರದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಉದ್ಧವ್‌ ಠಾಕ್ರೆ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ನಂತರ ಮಾತನಾಡಿದ ಠಾಕ್ರೆ, ‘ಮಾತುಕತೆ ಇನ್ನೂ ಮುಂದುವರಿದಿದೆ. ನಮ್ಮ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಸಾಗಿವೆ’ ಎಂದರು.

ಇದನ್ನೂ ಓದಿ: ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿ ಅವಕಾಶವಾದದ ಮೇಲೆ ನಿಂತಿದೆ: ಗಡ್ಕರಿ

ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು, ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಶನಿವಾರ ನಡೆಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಶಿವಸೇನೆ 16, ಎನ್‌ಸಿಪಿ 14 ಹಾಗೂ ಕಾಂಗ್ರೆಸ್‌ 12 ಸಚಿವ ಸ್ಥಾನಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಮುಂಬೈನಲ್ಲಿರುವ ಶರದ್‌ ಪವಾರ್‌ ಅವರ ನಿವಾಸಕ್ಕೆ, ಪುತ್ರ ಆದಿತ್ಯ ಠಾಕ್ರೆ ಜೊತೆ ಗುರುವಾರ ಸಂಜೆ ತೆರಳಿದ್ದ ಉದ್ಧವ್‌ ಸರ್ಕಾರ ರಚನೆ ಸಂಬಂಧ ಸಭೆ ನಡೆಸಿದ್ದರು. ಸಭೆಯಲ್ಲಿ ಶಿವಸೇನೆಯ ವಕ್ತಾರ ಸಂಜಯ್‌ ರಾವುತ್‌ ಹಾಗೂ ಪವಾರ್‌ ಸೋದರಳಿಯ ಅಜಿತ್‌ ಪವಾರ್‌ ಅವರೂ ಉಪಸ್ಥಿತರಿದ್ದರು.

ಸರ್ಕಾರ ಮುನ್ನಡೆಸುವಂತೆ ಸಭೆಯಲ್ಲಿದ್ದ ಎಲ್ಲರೂ ಠಾಕ್ರೆಯನ್ನು ಒತ್ತಾಯಿಸಿದ್ದರು. ಆದರೆ, ಸಂಜಯ್‌ ರಾವುತ್‌ ಮುಖ್ಯಮಂತ್ರಿಯಾಗಲಿ ಎಂದು ಉದ್ಧವ್‌ ಹೇಳಿದ್ದರು ಎನ್ನಲಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದ ಬಳಿಕ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಬೆಂಬಲ ಪಡೆದು ಸರ್ಕಾರ ರಚಿಸುವ ಕಸರತ್ತನ್ನು ಶಿವಸೇನಾ ನಡೆಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು