ಬುಧವಾರ, ನವೆಂಬರ್ 13, 2019
23 °C
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಬಿಜೆಪಿ–ಶಿವಸೇನಾ ಮೈತ್ರಿಕೂಟದ ನಡೆ ನಿಗೂಢ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ| ಬದಲಾದ ರಾಜಕಾರಣ: ಸೀಟು ಹಂಚಿಕೆ ಕಠಿಣ

Published:
Updated:

ಮುಂಬೈ: ಕಳೆದ ಎರಡು ದಶಕಗಳಲ್ಲಿ ಮಹಾರಾಷ್ಟ್ರದ ರಾಜಕೀಯದಲ್ಲಿ ಪರಸ್ಪರ ವಿರುದ್ಧ ದೃಷ್ಟಿಕೋನದ ಎರಡು ಮೈತ್ರಿಕೂಟಗಳದ್ದೇ ಪ್ರಾಬಲ್ಯ. ಬಿಜೆಪಿ–ಶಿವಸೇನಾ ಮತ್ತು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಗಳು ಜತೆಯಾಗಿ ಚುನಾವಣೆ ಎದುರಿಸಿವೆ, ಆಳ್ವಿಕೆಯನ್ನೂ ನಡೆಸಿವೆ. ಹಾಗಿದ್ದರೂ ಪ್ರತಿ ಬಾರಿ ಚುನಾವಣೆ ಬಂದಾಗಲೂ ಸೀಟು ಹಂಚಿಕೆ ಸುಗಮವಾಗಿ ನಡೆದದ್ದೇ ಇಲ್ಲ.

ಯಾವ ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂಬುದು ಕೊನೆಯವರೆಗೆ ನಿಗೂಢವೇ ಆಗಿರುತ್ತದೆ. ಜತೆಗೆ, ಮೈತ್ರಿಕೂಟದೊಳಗಿನ ಪಕ್ಷಗಳ ಮುಖಂಡರ ನಡುವೆ ವಾಗ್ಯುದ್ಧ ತಪ್ಪಿದ್ದೇ ಇಲ್ಲ. 

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಇದೇ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ. ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆಯ ‘ಹಣಾಹಣಿ’ ಈಗಾಗಲೇ ಆರಂಭ ಆಗಿದೆ. 

ಈ ಬಾರಿ, ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ತಲಾ 125 ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಸ್ಪರ್ಧಿಸಲಿವೆ. ಕೂಟದಲ್ಲಿರುವ ಇತರ ಪಕ್ಷಗಳಿಗೆ 38 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಆದರೆ, ಬಿಜೆಪಿ–ಶಿವಸೇನಾ ಮೈತ್ರಿಕೂಟದ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. 

1990ರಿಂದ ಬಿಜೆಪಿ–ಸೇನಾ ನಡುವೆ ಮೈತ್ರಿ ಇದೆ. 2014ರ ಚುನಾವಣೆ ಬಿಟ್ಟರೆ ಬೇರೆಲ್ಲಾ ಚುನಾವಣೆಗಳಲ್ಲಿ ಇವು ಒಟ್ಟಾಗಿಯೇ ಸ್ಪರ್ಧಿಸಿವೆ. 2014ರಲ್ಲಿಯೂ ಫಲಿತಾಂಶದ ಬಳಿಕ ಈ ಪಕ್ಷಗಳು ಅಧಿಕಾರ ಹಂಚಿಕೊಂಡಿವೆ. 

1980ರ ದಶಕದ ಕೊನೆಯ ಭಾಗದಲ್ಲಿ, ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಮತ್ತು ಬಿಜೆಪಿಯ ನಾಯಕ ಪ್ರಮೋದ್‌ ಮಹಾಜನ್‌, ಹಿಂದುತ್ವದ ಹೆಸರಿನಲ್ಲಿ ಈ ಮೈತ್ರಿಕೂಟಕ್ಕೆ ಗಟ್ಟಿ ಅಡಿಪಾಯ ಹಾಕಿದ್ದರು. 

ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿ ಮರಾಠ ನಾಯಕ ಶರದ್‌ ಪವಾರ್‌ 1999ರಲ್ಲಿ ಕಾಂಗ್ರೆಸ್‌ನಿಂದ ಹೊರಗೆ ಬಂದು ಎನ್‌ಸಿಪಿ ಸ್ಥಾಪಿಸಿ ಚುನಾವಣೆ ಎದುರಿಸಿದರು. ಆದರೆ, ಫಲಿತಾಂಶದ ಬಳಿಕ ಕಾಂಗ್ರೆಸ್‌–ಎನ್‌ಸಿಪಿ ನಡುವೆ ಮೈತ್ರಿ ಅನಿವಾರ್ಯವೇ ಆಯಿತು. 

‘ಮೈತ್ರಿಕೂಟದಲ್ಲಿನ ಪಕ್ಷಗಳ ನಡುವೆ ಸೀಟು ಹಂಚಿಕೆ ಹಿಂದಿನಿಂದಲೂ ಕುತೂಹಲಕರವಾಗಿಯೇ ಇತ್ತು. ವಿಳಂಬ, ವಾಗ್ಯುದ್ಧ, ಮುಗಿಯದ ಚೌಕಾಶಿ, ಗೊಂದಲಗಳೆಲ್ಲವೂ ಸಾಮಾನ್ಯ’ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ. 

ಭಾರತ ಮತ್ತು ಮಹಾರಾಷ್ಟ್ರದ ರಾಜಕಾರಣ 2014 ಮತ್ತು 2019ರ ನಡುವೆ ಭಾರಿ ಬದಲಾವಣೆ ಕಂಡಿದೆ. 2019ರಲ್ಲಿಯೂ ಲೋಕಸಭೆ ಚುನಾವಣೆಗೆ ಮೊದಲು ಮತ್ತು ನಂತರದ ರಾಜಕಾರಣದಲ್ಲಿ ವ್ಯತ್ಯಾಸ ಇದೆ. ‘2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು. ಪ್ರತ್ಯೇಕವಾಗಿ ಸ್ಪರ್ಧಿಸಿದರೆ ನಷ್ಟ ಎಂಬುದು ಎಲ್ಲ ನಾಲ್ಕು ಪಕ್ಷಗಳಿಗೂ ಅರ್ಥವಾಗಿದೆ. ಹಾಗಾಗಿಯೇ ಅವು ಮತ್ತೆ ಮೈತ್ರಿಗೆ ಮನ ಮಾಡಿದವು. 2019ರ ಲೋಕಸಭಾ ಚುನಾವಣೆಯಲ್ಲಿ ಸೇನಾವನ್ನು ಜತೆಗೆ ಒಯ್ಯುವುದು ಬಿಜೆಪಿಯ ಅಗತ್ಯವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಬಿಜೆಪಿಯ ಜತೆಗೆ ಉಳಿದುಕೊಳ್ಳವುದು ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಅನಿವಾರ್ಯ’ ಎಂಬುದು ಅಕೋಲ್ಕರ್‌ ಅವರ ವಿಶ್ಲೇಷಣೆ. 

50:50ಕ್ಕೆ ಸೇನಾ ಪಟ್ಟು

288 ಕ್ಷೇತ್ರಗಳ ಪೈಕಿ ಅರ್ಧದಷ್ಟು ಅಂದರೆ 144 ಕ್ಷೇತ್ರಗಳನ್ನು ಕೊಡಬೇಕು ಎಂದು ಸೇನಾ ಪಟ್ಟು ಹಿಡಿದಿದೆ. ಆದರೆ, 115–120ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಹಾಗಾಗಿಯೇ, ಸೀಟು ಹಂಚಿಕೆ ವಿಳಂಬವಾಗುತ್ತಿದೆ.

ಉದ್ಧವ್‌ ಮಗ ಆದಿತ್ಯ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಸೇನಾ ಬಿಂಬಿಸುತ್ತಿದೆ. ಆದರೆ, ಇದಕ್ಕೆ ಬಿಜೆಪಿ ಮಾನ್ಯತೆ ನೀಡುವ ಸಾಧ್ಯತೆ ಇಲ್ಲ. ಆದಿತ್ಯ ಅವರು ಬೇಕಿದ್ದರೆ ಫಡಣವೀಸ್‌ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಬಹುದು ಎಂದು ಬಿಜೆಪಿ ಹೇಳುತ್ತಿದೆ. 

ಪ್ರತಿಕ್ರಿಯಿಸಿ (+)