ಸೋಮವಾರ, ಅಕ್ಟೋಬರ್ 14, 2019
23 °C

ಏಕಾಂಗಿಯಾಗಿಯೇ ಸರಳ ಬಹುಮತ: ಬಿಜೆಪಿ ಗುರಿ

Published:
Updated:

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸರಳ ಬಹುಮತ ಪಡೆಯುವ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ.

288 ಸದಸ್ಯ ಬಲದ ಸದನದಲ್ಲಿ 145 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿ. ಆದರೆ, ಮೈತ್ರಿಕೂಟದ ಈ ಯುಗದಲ್ಲಿ ಇದು ಅಷ್ಟೊಂದು ಸುಲಭವಲ್ಲ. ನರೇಂದ್ರ ಮೋದಿ ಪರವಾದ ಅಲೆಯನ್ನೇ ಗಟ್ಟಿ ಹಿಡಿದುಕೊಂಡಿದ್ದ ಬಿಜೆಪಿ, 2014ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 122 ಸ್ಥಾನಗಳನ್ನು ಗೆದ್ದಿತ್ತು.

ಸುದೀರ್ಘ ಕಾಲದ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ನಡುವೆ ಕ್ಷೇತ್ರಗಳ ಹಂಚಿಕೆ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಇದರ ನಡುವೆಯೇ ಇತರ ಮಿತ್ರ ಪಕ್ಷಗಳ ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯ ಅಡಿಯಲ್ಲಿಯೇ ಸ್ಪರ್ಧಿಸುವಂತೆ ಒತ್ತಡ ಹಾಕಲಾಗುತ್ತಿದೆ. ಭಾರತೀಯ ರಿಪಬ್ಲಿಕನ್‌ ಪಾರ್ಟಿ (ಆಠವಲೆ) ಮತ್ತು ರಾಷ್ಟ್ರೀಯ ಸಮಾಜ ಪಕ್ಷದ ಜತೆ ಈ ವಿಚಾರವಾಗಿ ಮಾತುಕತೆ ನಡೆದಿದೆ. 

ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರ ರಾಜಕೀಯದಲ್ಲಿ ಎದ್ದು ಕಾಣುವ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ, ಬಿಜೆಪಿಯ ನೆಲೆ ಬಹಳ ಗಟ್ಟಿ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಇದನ್ನೂ ಓದಿ: ರಾಷ್ಟ್ರೀಯತೆ, ಅಭಿವೃದ್ಧಿಯೇ ಗುರಿ: ಶಾ

ವಿರೋಧ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಹಿರಿಯ ಮುಖಂಡರು ಶಿವಸೇನಾ ಅಥವಾ ಬಿಜೆಪಿ ಸೇರಿದ್ದಾರೆ. ಇವರಲ್ಲಿ ಶಾಸಕರು, ಮಾಜಿ ಸಚಿವರೂ ಇದ್ದಾರೆ. ಹಾಗಾಗಿ ಆಡಳಿತಾರೂಢ ಮೈತ್ರಿಕೂಟಕ್ಕೆ ಪ್ರಬಲ ಸ್ಪರ್ಧೆ ಒಡ್ಡಲು ಕಾಂಗ್ರೆಸ್‌–ಎನ್‌ಸಿಪಿ ಹೆಣಗಾಡಬೇಕಿದೆ.

ಮುಂಬೈ ಮತ್ತು ಕೊಂಕಣ ಪ್ರದೇಶದಲ್ಲಿ ಸೇನಾ ಪ್ರಬಲವಾಗಿದೆ. ವಿದರ್ಭದಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಉತ್ತರ, ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಕಳೆದ ಚುನಾವಣೆಯಲ್ಲಿ ಪಡೆದ ಸ್ಥಾನಗಳ ಆಧಾರದಲ್ಲಿ ಹೇಳುವುದಾದರೆ ಸೇನಾಕ್ಕಿಂತ ಬಿಜೆಪಿಯೇ ಮುಂದಿದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸವಾಲು ಎದುರಾಗಬಹುದು. ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಬಿಜೆಪಿ–ಸೇನಾ ಮೈತ್ರಿಕೂಟಕ್ಕೆ ಗಟ್ಟಿ ಸ್ಪರ್ಧೆ ಒಡ್ಡಬಹುದು. ವಿದರ್ಭದಲ್ಲಿ ಮಾತ್ರ ಬಿಜೆಪಿಯನ್ನು ಮಣಿಸುವುದು ಇತರ ಪಕ್ಷಗಳಿಗೆ ಸುಲಭವಲ್ಲ. 

ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ವಂಚಿತ ಬಹುಜನ ಅಘಾಡಿಯು ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಮತಬ್ಯಾಂಕ್‌ಗೆ ಕನ್ನ ಹಾಕಿದೆ. ಈ ಬಾರಿ, ಈ ಪಕ್ಷವು ಬಿಜೆಪಿಯ ಕೆಲ ಪ್ರಮಾಣದ ಮತಗಳನ್ನು ಸೆಳೆದುಕೊಳ್ಳುವ ಸಾಧ್ಯತೆ ಇದೆ. 

ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್. 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷದ ಸಾಧನೆ ನಿರಾಶಾದಾಯಕವಾಗಿತ್ತು. ಒಂದು ಕ್ಷೇತ್ರದಲ್ಲಿ ಗೆಲ್ಲಲು ಮಾತ್ರ ಈ ಪಕ್ಷಕ್ಕೆ ಸಾಧ್ಯವಾಗಿತ್ತು. ನೂರಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಎಂಎನ್‌ಎಸ್‌ ಸ್ಪರ್ಧಿಸುವ ಸಾಧ್ಯತೆ ಇದೆ. ಹಾಗಾದರೆ, ಅದು ಬಿಜೆಪಿ–ಸೇನಾ ಮೈತ್ರಿಕೂಟಕ್ಕೆ ಹೊಡೆತ ಕೊಡಬಹುದು. 

ತಮ್ಮ ಮೈತ್ರಿಕೂಟದ 220ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಅವರು ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಹರಿಯಾಣ: ರೈತರ ಮತಗಳ ಮೇಲೆ ಬಿಜೆಪಿ ಕಣ್ಣು

ನವದೆಹಲಿ: ಹರಿಯಾಣದಲ್ಲಿನ ಅಧಿಕಾರದ ಗದ್ದುಗೆಯ ಹಾದಿ ಅಲ್ಲಿನ ಹೊಲಗಳ ನಡುವೆಯೇ ಸಾಗಿ ಹೋಗಬೇಕು. ಈ ರಾಜ್ಯದಲ್ಲಿ ರೈತನೇ ನಿರ್ಣಾಯಕ. ಹಾಗಾಗಿಯೇ ಅನ್ನದಾತನ ಮನವೊಲಿಸುವ ಕೆಲಸವನ್ನು ಬಿಜೆಪಿ ಆಗಲೇ ಆರಂಭಿಸಿದೆ. ಪಿಂಚಣಿ ನೀಡಿಕೆಯಂತಹ ವಿಶೇಷ ಯೋಜನೆಗಳಿಗೆ ನೋಂದಾಯಿಸುವ ಮೂಲಕ ರೈತರನ್ನು ತಲುಪಲಾಗುತ್ತಿದೆ.

ಪ್ರಧಾನ ಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆಯ ಅಡಿಯಲ್ಲಿ 16 ಲಕ್ಷ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಅಂಕಿ ಅಂಶವನ್ನು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಪ್ರಕಟಿಸಲಾಗಿತ್ತು. ಅವರಲ್ಲಿ ನಾಲ್ಕು ಲಕ್ಷ ಮಂದಿ ಹರಿಯಾಣದವರು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಿಂಗಳಿಗೆ ₹3,000 ಪಿಂಚಣಿಯ ಯೋಜನೆ ಇದು. 

ಈ ಯೋಜನೆಗೆ ಹೆಸರು ನೋಂದಣಿಯಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1.94 ಲಕ್ಷ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ  ಯೋಜನೆಗೆ ಸೆಪ್ಟೆಂಬರ್‌ 12ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಚಾಲನೆ ಕೊಟ್ಟಿದ್ದರು. ಜಾರ್ಖಂಡ್‌ನಲ್ಲಿಯೂ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ 1.86 ಲಕ್ಷ ರೈತರು ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಆದರೆ, ಹರಿಯಾಣದ ಜತೆಗೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದಲ್ಲಿ ಮಾತ್ರ ಈ ಯೋಜನೆ ಅಷ್ಟೊಂದು ಯಶಸ್ವಿ ಆಗಿಲ್ಲ. ಇಲ್ಲಿ 66,875 ರೈತರು ಮಾತ್ರ ಯೋಜನೆಗೆ ಸೇರಿದ್ದಾರೆ. 

***

ಎನ್‌ಸಿಪಿ ಪ್ರಣಾಳಿಕೆ

ಇತರ ಪಕ್ಷಗಳಿಗಿಂತ ಮೊದಲೇ ಪ್ರಣಾಳಿಕೆ ಬಿಡುಗಡೆ ಮಾಡಲು ಎನ್‌ಸಿಪಿ ನಿರ್ಧರಿಸಿದೆ. ಸೋಮವಾರವೇ ಪ್ರಣಾಳಿಕೆ ಬಿಡುಗಡೆ ಆಗಲಿದೆ

ಕಾಂಗ್ರೆಸ್‌ ಪಟ್ಟಿ

ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಒಂದೆರಡು ದಿನದಲ್ಲಿ ಪ್ರಕಟವಾಗಲಿದೆ. ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್‌ ಚವಾಣ್‌, ಅಶೋಕ್‌ ಚವಾಣ್‌, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಾಲಾಸಾಹೇಬ್‌ ಥೋರಟ್‌ ಕಣಕ್ಕೆ ಇಳಿಯಲಿದ್ದಾರೆ

Post Comments (+)